ಪೊನ್ನಂಪೇಟೆ, ಮೇ ೨೧ : ಗೋಣಿಕೊಪ್ಪಲು ಕಾವೇರಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೆಡ್ ಕ್ರಾಸ್, ಐಕ್ಯೂಎಸಿ ಹಾಗೂ ವೀರಾಜಪೇಟೆ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ‘ಆರೋಗ್ಯಕರ ನಗು, ಆರೋಗ್ಯಕರ ಜೀವನ’ ಎಂಬ ಶೀರ್ಷಿಕೆಯಡಿ ದಂತ ಆರೈಕೆ ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ಉಚಿತ ದಂತ ತಪಾಸಣಾ ಶಿಬಿರವನ್ನು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರಾಂಶುಪಾಲ ಡಾ. ಎಂ. ಬಿ. ಕಾವೇರಿಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸಂಪನ್ಮೂಲ ವ್ಯಕ್ತಿಯಾಗಿ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ನ ಸಾರ್ವಜನಿಕ ಆರೋಗ್ಯ ದಂತ ವೈದ್ಯ ಶಾಸ್ತç ವಿಭಾಗದ ಮುಖ್ಯಸ್ಥರು ಹಾಗೂ ಉಪ ಪ್ರಾಂಶುಪಾಲ ಡಾ. ಜಿತೇಶ್ ಭಾಗವಹಿಸಿ, ದಂತ ಆರೈಕೆಯ ಮಹತ್ವ, ಹಲ್ಲುಗಳ ರಕ್ಷಣೆ ಹಾಗೂ ದೈನಂದಿನ ಆರೈಕೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಬಳಿಕ ವಿದ್ಯಾರ್ಥಿಗಳಿಗೆ ಉಚಿತ ದಂತ ತಪಾಸಣೆ ನಡೆಸಲಾಯಿತು. ಈ ಸಂದರ್ಭ ಉಪ ಪ್ರಾಂಶುಪಾಲೆ ಪ್ರೊ. ಎಂ. ಎಸ್. ಭಾರತಿ, ಐಕ್ಯೂಎಸಿ ಸಂಯೋಜಕಿ ಡಾ. ನಯನ ತಮ್ಮಯ್ಯ, ಎನ್ ಎಸ್ ಎಸ್ ಅಧಿಕಾರಿಗಳಾದ ಕುಶಾಲಪ್ಪ ಎಂ. ಎ, ಪೂಜಾ ಕೆ. ಎಸ್ ಉಪಸ್ಥಿತರಿದ್ದರು. ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.