ಮಡಿಕೇರಿ, ಮೇ ೨೧: ಮತದಾರರ ಪಟ್ಟಿಯಿಂದ ಅಕ್ರಮ ವಲಸಿಗ ನುಸುಳುಕೋರರನ್ನು ಕೈಬಿಡಬೇಕು ಮತ್ತು ಆದಿಮಸಂಜಾತ ಕೊಡವರನ್ನು ಮರುಸ್ಥಾಪಿಸಿ ದೃಢೀಕರಿಸಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ ಸಂದರ್ಭ ಕೊಡವರ ಪರವಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಮನವಿಯಲ್ಲಿ ವಿವರಿಸಿದ್ದಾರೆ.

ಕರ್ನಾಟಕದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಸಂದರ್ಭ ಕೊಡಗು ಭೂಪ್ರದೇಶದಲ್ಲಿರುವ ಅಕ್ರಮ ವಲಸಿಗ ನುಸುಳುಕೋರರನ್ನು ಮತದಾರರ ಪಟ್ಟಿಯಿಂದ ಕೈಬಿಡಬೇಕು. ಆದಿಮಸಂಜಾತ ಕೊಡವರು ಹಾಗೂ ಇಲ್ಲಿ ನೆಲೆಸಿರುವ ಇತರ ನಾಗರೀಕರ ನಡುವಿನ ವ್ಯತ್ಯಾಸವನ್ನು ಗುರುತಿಸಬೇಕು ಎಂದು ಕೋರಿದ್ದಾರೆ. ಭಾರತದ ಮುಖ್ಯ ಚುನಾವಣಾ ಆಯೋಗವು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಗಳ ಮೂಲಕ ೨೦೨೬ ರ ಜೂನ್ ೨೦ ರಿಂದ ಕರ್ನಾಟಕದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯನ್ನು ಪ್ರಾರಂಭಿಸಲು ಸಜ್ಜಾಗಿದೆ. ಕೊಡಗು ಭೂಪ್ರದೇಶವು ಭೌಗೋಳಿಕ-ಕಾರ್ಯತಂತ್ರದ ಸೂಕ್ಷö್ಮ ಪ್ರದೇಶ ವಾಗಿದೆ. ಈ ಭೂಮಿಯು ಮಲಬಾರ್, ಉತ್ತರ ಕೇರಳ, ತುಳುನಾಡು, ದಕ್ಷಿಣ ಕನ್ನಡ ಮತ್ತು ಹಳೆಯ ಮೈಸೂರು ಬಯಲು ಸೀಮೆಯ ಗಡಿಗಳಿಂದ ಆವೃತವಾಗಿದೆ. ಮತ ಬ್ಯಾಂಕ್ ರಾಜಕಾರಣಿಗಳಿಂದಾಗಿ ನುಸುಳುಕೋರರು ಆಧಾರ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಮತ್ತು ಇತರ ವಾಸಸ್ಥಳ ಪ್ರಮಾಣಪತ್ರಗಳನ್ನು ಪಡೆಯಲು ಪ್ರೋತ್ಸಾಹಿಸಲಾಗಿದೆ, ಅಲ್ಲದೆ ಭೂ ಮಂಜೂರಾತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಅವರಿಗೆ ಟಿಕೆಟ್‌ಗಳನ್ನು ಸಹ ನೀಡಲಾಗಿದೆ ಮತ್ತು ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಮತದಾರರ ಪಟ್ಟಿಯಿಂದ ಆದಿಮಸಂಜಾತ ಕೊಡವರ ಹೆಸರನ್ನು ಕೈಬಿಡುವುದು ಒಂದು ದುಷ್ಟ ಸಂಚಾಗಿದೆ. ಕೊಡವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ವ್ಯವಸ್ಥಿತವಾಗಿ ಕೈಬಿಡಲಾಗುತ್ತಿದೆ. ಡಿಲಿಮಿಟೇಷನ್ (ಕ್ಷೇತ್ರ ಮರುವಿಂಗಡಣೆ) ಆಯೋಗದ ಮುಂದೆ ದಾಖಲೆಗಳಲ್ಲಿ ಜನಸಂಖ್ಯೆಯ ಬೆಳವಣಿಗೆಯ ಬಲವನ್ನು ಪ್ರದರ್ಶಿಸುವ ಮೂಲಕ, ಕಳ್ಳ ಮತ ಬ್ಯಾಂಕುಗಳ ಆಧಾರದ ಮೇಲೆ ಸಂಸತ್ತು ಮತ್ತು ವಿಧಾನಸಭೆ ಸ್ಥಾನಗಳನ್ನು ಹೆಚ್ಚಿಸಲು ಹಕ್ಕು ಸಾಧಿಸುವ ಒಂದು ದುಷ್ಟ ಸಂಚು ನಡೆಯುತ್ತಿದೆೆ. ದೇಶಪ್ರೇಮಿಗಳಾದ ಆದಿಮಸಂಜಾತ ಕೊಡವರು ತಮ್ಮದೇ ತಾಯ್ನಾಡಿನಲ್ಲಿ ಅಭದ್ರತೆ, ಅವಮಾನ ಎದುರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯಕ್ಕಾಗಿ ಇರುವ ಅದೃಶ್ಯ ‘ಸಂಘ‘ ಚುನಾವಣಾ ಕ್ಷೇತ್ರದ ಮಾದರಿಯಲ್ಲಿ ಪ್ರತ್ಯೇಕ ಕೊಡವ ಪ್ರಾತಿನಿಧ್ಯಕ್ಕಾಗಿ ಮನವಿ ಪತ್ರದ ಮೂಲಕ ಒತ್ತಾಯಿಸಲಾಗಿದೆ.