ಕೂಡಿಗೆ, ಮೇ.೧೮: ಹಣಕಾಸಿನ ವಿಚಾರದಲ್ಲಿ ಸಂಬAಧಿಕರ ನಡುವೆ ತಳ್ಳಾಟ ನೂಕಾಟ ನಡೆದು ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೂಡಿಗೆಯಲ್ಲಿ ನಡೆದಿದೆ.
ಶಿರಂಗಾಲ ಗ್ರಾಮ ಪಂಚಾಯಿತಿಯ ಮೂಡಲಕೊಪ್ಪಲು ಗ್ರಾಮದ ನಿವಾಸಿ ಕೂಡಿಗೆ ಡೈರಿ ನಿವೃತ್ತ ನೌಕರ ಶಿವನಂಜಪ್ಪ (೬೩) ಮೃತ ದುರ್ದೈವಿ. ಮೃತ ಶಿವನಂಜಪ್ಪ ಹಾಗೂ ಅವರ ಅಕ್ಕನ ಮಗ ನಿವೃತ್ತ ಪೊಲೀಸ್ ಸಿಬ್ಬಂದಿ ಶ್ರೀನಿವಾಸ್ ನಡುವೆ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದಿದ್ದು, ತಳ್ಳಾಟದ ಸಂದರ್ಭ ಕೂಡಿಗೆ ಸಮೀಪದಲ್ಲಿರುವ ಹಾರಂಗಿ ನದಿಯ ಸೇತುವೆಯ ಮೇಲಿರುವ ಕಬ್ಬಿಣದ ರಾಡುಗಳಿಗೆ ಶಿವನಂಜಪ್ಪ ಅವರ ತಲೆ ಒಡೆಯಲ್ಪಟ್ಟು ಗಂಭೀರ ಘಾಸಿಯಾಗಿ ಬಿದ್ದು ಮೃತಪಟ್ಟಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಧಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಪೊಲೀಸ್ ವೃತ್ತ ನಿರೀಕ್ಷಕ ದಿನೇಶ್ ಕುಮಾರ್, ಗ್ರಾಮಾಂತರ ಠಾಣಾಧಿಕಾರಿ ರಾಮಚಂದ್ರ, ಸಂಚಾರಿ ಪೊಲೀಸ್ ಠಾಣಾಧಿಕಾರಿ ಗಣೇಶ್, ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು.