ಮಡಿಕೇರಿ, ಮೇ ೧೮: ಕೊಡವ ಭಾಷಿಕ ಸಮುದಾಯಗಳ ಕೂಟದ ವತಿಯಿಂದ ಏರ್ಪಡಿಸಲಾಗಿದ್ದ ೨೧ ಜನಾಂಗಗಳ ಕ್ರೀಡಾಕೂಟ-೨೦೨೬ರ ಕ್ರೀಡಾನಮ್ಮೆಗೆ ಅದ್ದೂರಿ ತೆರೆ ಬಿದ್ದಿದ್ದು, ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಣಿಯ ಸಮಾಜದ ತಂಡ ಗೆಲುವು ಸಾಧಿಸಿದರೆ, ಐರಿ ಸಮಾಜದ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ಕಳೆದ ಮೂರು ದಿನಗಳಿಂದ ಮೂರ್ನಾಡು ಬಾಚೆಟ್ಟಿರ ದಿ. ಲಾಲು ಮುದ್ದಯ್ಯ ಪಿಯು ಕಾಲೇಜು ಮೈದಾನದಲ್ಲಿ ೨೧ ಕೊಡವ ಭಾಷಿಕ ಜನಾಂಗಗಳ ನಡುವೆ ನಡೆದ ಪಂದ್ಯದಲ್ಲಿ ಅಂತಿಮ ಸುತ್ತಿಗೆ ಪ್ರವೇಶ ಪಡೆದ ಕಣಿಯ ಸಮಾಜದ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ ೬ ಓವರ್ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೭೦ ರನ್ ಗಳಿಸಿತು. ಗುರಿ ಬೆನ್ನತ್ತಿದ ಐರಿ ಸಮಾಜದ ತಂಡ ೯ ವಿಕೆಟ್ ಕಳೆದುಕೊಂಡು ೪೦ ರನ್ ಗಳಿಸಿ ೩೦ ರನ್ಗಳ ಸೋಲು ಕಂಡಿತು. ಕಣಿಯ ಸಮಾಜದ ಮಹೇಶ್ ದೇವಯ್ಯ ೧೬ ಬಾಲ್ಗೆ ೩೩ ರನ್ , ತರುಣ್ ನಂಜಪ್ಪ ೯ ಬಾಲ್ಗೆ ೨೮ ರನ್ ಬಾರಿಸಿ ಗೆಲುವಿನ ರೂವಾರಿಗಳಾಗಿ ಮಿಂಚಿದರು.
ಮ್ಯಾನ್ ಆಫ್ ದಿ ಸೀರಿಸ್ ಕಣಿಯ ಸಮಾಜ ತಂಡದ ಸೋನಂ ಬೋಪಯ್ಯ, ಮ್ಯಾನ್ ಆಫ್ ದಿ ಮ್ಯಾಚ್ ಕಣಿಯ ತಂಡದ ತರುಣ್ ನಂಜಪ್ಪ, ಉತ್ತಮ ಆಟಗಾರ ಕುಡಿಯ ಸಮಾಜ ತಂಡದ ಯೋಗೇಶ್, ಬೆಸ್ಟ್ ಬೌಲರ್ ಐರಿ ಸಮಾಜ ತಂಡದ ತಟ್ಟಂಡ ಜಸ್ವಂತ್, ಉತ್ತಮ ತಂಡವಾಗಿ ಕುಡಿಯ ಸಮಾಜ ತಂಡ ಪ್ರಶಸ್ತಿ ಪಡೆದುಕೊಂಡಿತು.
ಸೆಮಿಫೈನಲ್
ಸೆಮಿಫೈನಲ್ ಪಂದ್ಯದಲ್ಲಿ ಕಣಿಯ ಸಮಾಜದ ತಂಡ ನಿಗದಿತ ೬ ಓವರ್ನಲ್ಲಿ ೭ ವಿಕೆಟ್ ಕಳೆದುಕೊಂಡು ೪೭ ರನ್ ಗಳಿಸಿತು. ಕುಡಿಯ ಸಮಾಜದ ತಂಡ ೬ ಓವರ್ನಲ್ಲಿ ೬ ವಿಕೆಟ್ ಕಳೆದುಕೊಂಡು ೩೯ ರನ್ ಗಳಿಸಿ ಸೋಲು ಕಂಡಿತು.
ಮತ್ತೊಂದು ಸೆಮಿಫೈನಲ್ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಐರಿ ಸಮಾಜದ ತಂಡ ನಿಗದಿತ ೬ ಓವರ್ನಲ್ಲಿ ೯ ವಿಕೆಟ್ ನಷ್ಟಕ್ಕೆ ೪೭ ರನ್ ಬಾರಿಸಿದರೆ, ಅಖಿಲ ಕೊಡಗು ಪಣಿಕ ಸಮಾಜ ತಂಡ ೬ ಓವರ್ನಲ್ಲಿ ೬ ವಿಕೆಟ್ ಕಳೆದುಕೊಂಡು ೩೯ ರನ್ ಗಳಿಸಿ ಸೋಲನುಭವಿಸಿತು. ವೀಕ್ಷಕ ವಿವರಣೆಯನ್ನು ಕೂಪರೆಕುಟ್ಟಡ ಸಾಗರ್, ಚಂಗಚAಡ ರಶ್ಮಿ, ಪೂಣಚ್ಚಿರ ಸುಮನ್ ಮನೋಜ್ ನೀಡಿದರು.
ಮೆರಥಾನ್ಗೆ ಚಾಲನೆ : ನಿನ್ನೆ ಬೆಳಿಗ್ಗೆ ೭ ಗಂಟೆಗೆ ನಡೆದ ಮೆರಥಾನ್ಗೆ ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಮೇಚೀರ ಡಾ. ಸುಭಾಷ್ ನಾಣಯ್ಯ ಚಾಲನೆ ನೀಡಿ ಶುಭ ಕೋರಿದರು. ಪುರುಷರ ವಿಭಾಗದಲ್ಲಿ ತೋರೆರ ದೀಕ್ಷಿತ್ ದೇವಯ್ಯ (ಪ್ರ), ಪುದಿಯೊಕ್ಕಡ ಪುನೀತ್ (ದ್ವಿ), ತೆಕ್ಕಡಮ್ಮಂಡ ಪೊನ್ನು (ತೃ), ಮಹಿಳೆಯರ ವಿಭಾಗದಲ್ಲಿ ಪವ್ವೇರಿಯಂಡ ರೂಪ (ಪ್ರ), ಅರಮನೆಪಾಲೆ ಬೋಮ್ಮ ಕಿರಣ್ (ದ್ವಿ), ಬಳಪಂಡ ಯಶಿಕ (ತೃ) ಸ್ಥಾನವನ್ನು ಪಡೆದರು.
ಹಗ್ಗಜಗ್ಗಾಟ ಫೈನಲ್ಸ್ : ಅಂತಿಮ ಹಂತದ ಹಗ್ಗಜಗ್ಗಾಟದಲ್ಲಿ ಪುರುಷರ ವಿಭಾಗದಲ್ಲಿ ಹೆಗ್ಗಡೆ ಸಮಾಜದ ತಂಡ ಐರಿ ಸಮಾಜದ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಗಳಿಸಿತು. ಮಹಿಳೆಯರ ಹಗ್ಗಜಗ್ಗಾಟದಲ್ಲಿ ಐರಿ ಸಮಾಜದ ತಂಡ ಮಲೆಯ ಸಮಾಜದ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಗಳಿಸಿತು.
ಜಾಗ ಒದಗಿಸಲು ಪ್ರಯತ್ನ
ಕೊಡವ ಭಾಷೆ, ಸಂಸ್ಕೃತಿ, ಸಂಪ್ರದಾಯ, ಕಟ್ಟು-ಪಾಡುಗಳೊಂದಿಗೆ ಬದುಕನ್ನು ನಡೆಸಿಕೊಂಡು ಬರುತ್ತಿರುವ ೨೧ ಕೊಡವ ಭಾಷಿಕ ಜನಾಂಗದ ನಿವೇಶನದ ಬೇಡಿಕೆಯನ್ನ ಈಡೇರಿಸಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಭರವಸೆಯಿತ್ತರು.
ಕೊಡವ ಭಾಷಿಕ ಸಮುದಾಯಗಳ ಕೂಟದ ವತಿಯಿಂದ ಏರ್ಪಡಿಸಲಾದ ಕಳಿನಮ್ಮೆಯ ಅಂತಿಮ ಹಂತದ ಕ್ರಿಕೆಟ್ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಪಂದ್ಯಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜನಾಂಗ ಬಾಂಧವರು ಎಲ್ಲರೂ ಒಗ್ಗಟ್ಟಾಗಿ ಇರಬೇಕು. ಒಗ್ಗಟ್ಟಿದ್ದರೆ ಸಫಲತೆಯನ್ನು ಕಾಣಬಹುದು ಎಂದರಲ್ಲದೆ ಮುಂದಿನ ದಿನಗಳಲ್ಲಿ ಭಾಷಿಕ ಜನಾಂಗದವರಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಪ್ರಯತ್ನ ಮಾಡಲಾಗುವುದೆಂದರು.
ಮತ್ತೋರ್ವ ಅತಿಥಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ, ಹಗ್ಗಜಗ್ಗಾಟದ ಅಂತಿಮ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಗಳು ಜನಾಂಗವನ್ನು ಒಂದುಗೂಡಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ತನ್ನ ಅಧಿಕಾರವಧಿಯಲ್ಲಿ ಕ್ರೀಡೆಯ ಅಭಿವೃದ್ಧಿಗೆ ಹಾಗೂ ಜನಾಂಗದ ಕ್ರೀಡಾಕೂಟಕ್ಕೆ ಸರಕಾರದಿಂದ ಸಾಧ್ಯವಾದಷ್ಟು ಅನುದಾನವನ್ನು ಒದಗಿಸಲು ಪ್ರಯತ್ನಿಸುತ್ತೇನೆ ಎಂದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಕ್ರೀಡೆಯ ತವರೂರಾದ ಕೊಡಗಿನಲ್ಲಿ ಕೊಡವ ಭಾಷಿಕ ಜನಾಂಗದವರು ತಮ್ಮದೆಯಾದ ನೆಲೆಗಟ್ಟಿನಲ್ಲಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರ ಎಂದರಲ್ಲದೆ ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಕೊಡವ ಭಾಷಿಕ ಸಮುದಾಯ ಕೂಡ ಖಾಲಿ ಜಾಗವನ್ನು ಗುರುತಿಸಿ ಗಮನಕ್ಕೆ ತಂದರೆ ಅದನ್ನು ಸಮುದಾಯಗಳ ಕೂಟಕ್ಕೆ ನೀಡುವಲ್ಲಿ ಪ್ರಯತ್ನಿಸುತ್ತೇನೆ. ಜಾಗದ ವಿಚಾರದಲ್ಲಿ ಈರ್ವರು ಶಾಸಕರು ಒಂದಾಗಿ ಸರಕಾರದ ಮಟ್ಟದಲ್ಲಿ ವ್ಯವಹರಿಸುತ್ತೇವೆ ಎಂದು ಭರವಸೆ ನೀಡಿದರು.
ವೇದಿಕೆಯಲ್ಲಿ ಕಾಫಿ ಬೆಳೆಗಾರ, ಸಮಾಜ ಸೇವಕ ಕೂಡಂಡ ರಾಜೇಂದ್ರ ಅಯ್ಯಮ್ಮ, ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ, ವೀರಾಜಪೇಟೆ ಕೊಡವ ಸಮಾಜ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಹಾಜರಿದ್ದು, ಮಾತನಾಡಿದರು. ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಕೂಟದಲ್ಲಿ ೨೧ ಕೊಡವ ಭಾಷಿಕ ಜನಾಂಗದಲ್ಲಿ ಸೇವೆ-ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಆರಂಭದಲ್ಲಿ ಅಚ್ಚಪಂಡ ತೃಷಾ ಕಾವೇರಪ್ಪ ಪ್ರಾರ್ಥಿಸಿ, ಕೂಟದ ಖಜಾಂಚಿ ಪಡಿಞರಂಡ ಪ್ರಭುಕುಮಾರ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ಹಾಗೂ ಪೌಡಂಡ ಡೇಝಿ ರೋಷನ್ ನಿರೂಪಿಸಿದರು.