ವೀರಾಜಪೇಟೆ, ಮೇ ೧೭: ಎರಡು ವರ್ಷಗಳಿಗೊಮ್ಮೆ ನಡೆಯುವ ಬೋಡ್ ನಮ್ಮೆ. ಮೂರು ಗ್ರಾಮಗಳ ಗ್ರಾಮ ದೇವತೆಯಾದ ಶ್ರೀ ಭದ್ರಕಾಳಿಯ ಊರುಹಬ್ಬಕ್ಕೆ ದೇವಕಟ್ಟು ಹಾಕುವ ಮೂಲಕ ಅಧಿಕೃತ ಚಾಲನೆ ನೀಡಿಲಾಯಿತು.

ವೀರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಮಂಗಲ, ಮಗ್ಗುಲ ಮತ್ತು ವೈಪಡ ಗ್ರಾಮಗಳ ಗ್ರಾಮದೇವತೆಗಳಾಗಿ ನೆಲೆನಿಂತ ಶ್ರೀ ಭದ್ರಕಾಳಿಯ ಬೋಡ್ ನಮ್ಮೆಗೆ ಕಟ್ಟು ಹಾಕುವ ಮೂಲಕ ಚಾಲನೆ ನೀಡಲಾಯಿತು. ಐಮಂಗಲ ಗ್ರಾಮದ ಶ್ರೀ ಭದ್ರಕಾಳಿ ದೇವಾಲಯದ ಆವರಣದಲ್ಲಿ ಮೂರು ಗ್ರಾಮಗಳ ದೇವತಕ್ಕರು, ಗ್ರಾಮಗಳ ಅಧ್ಯಕ್ಷರುಗಳು, ಗ್ರಾಮಸ್ಥರ ಸಮ್ಮುಖದಲ್ಲಿ ಕೊಟ್ಟಿಯಂಡ ಜೀವನ್ ಅವರು ಕಟ್ಟು ವಿಧಿ ಅನುಸರಿಸುವ ವಿಧಾನಗಳು ದೇವ ನೆಲೆಯಲ್ಲಿ ಓದಿ ತಿಳಿಸುವ ಮೂಲಕ ಚಾಲನೆ ನೀಡಲಾಯಿತು.

ಬಳಿಕ ಮಾತನಾಡಿದ ಕೊಟ್ಟಿಯಂಡ ಜೀವನ್ ಅವರು ಐಮಂಗಲ ಗ್ರಾಮದಲ್ಲಿ ಹಿರಿಯ ಅಕ್ಕ ಎರಡನೆಯವರು ವೈಪಡ ಗ್ರಾಮದಲ್ಲಿ ಕೊನೆ ತಂಗಿಯಾಗಿ ಮಗ್ಗುಲ ಗ್ರಾಮದಲ್ಲಿ ಶ್ರೀ ಭದ್ರಕಾಳಿಯಾಗಿ ನೆಲೆನಿಂತಿದ್ದಾರೆ. ಎರಡು ವರ್ಷಗಳಿಗೊಮ್ಮೆ ಮೂರು ಗ್ರಾಮಗಳು ಸೇರಿ ಹಬ್ಬ ಆಚರಣೆ ಮಾಡಲಾಗುತ್ತದೆ. ಮೂರು ದಿನಗಳ ಕಾಲ ಸಂಜೆ ವೇಳೆಯಲ್ಲಿ ೧೧೦೧ ಸುತ್ತು ಪೀಲಿ ಆಟ್ ಮತ್ತು ತಾಲಿಪಾಟ್ ಕಾರ್ಯಕ್ರಮ ನಡೆಯುತ್ತದೆ.

ತಾ.೧೯ ರಂದು ಪಟ್ಟಣಿ ಮತ್ತು ಸಂಜೆ ೭ ರ ನಂತರ ಮೂರು ಗ್ರಾಮಗಳ ದೇವತೆಗಳನ್ನು ದೇಗುಲಕ್ಕೆ ಕರೆತರಲಾಗುತ್ತದೆ ಬಳಿಕ ರಾತ್ರಿ ೧೧ ರ ಸಮಯದಲ್ಲಿ ಕಳಿ ( ವಿವಿಧ ವೇಷಭೂಷಣ ) ಧಾರಿಗಳು ಮನೆ ಮನೆಗೆ ತೆರಳುವುದು ಮರುದಿನದ ಮಧ್ಯಾಹ್ನದವರೆಗೆ ನಡೆಯಲಿದೆ. ತಾ.೨೦ ರಂದು ಸಂಜೆ ೦೪ ಗಂಟೆಯ ವೇಳೆಗೆ ವಿವಿಧ ವೇಷಾಧಾರಿಗಳು ಹರಕೆಯೊಂದಿಗೆ ದೇವಾಲಯಕ್ಕೆ ಆಗಮನವಾಗಿ ಹರಕೆ ಸಮರ್ಪಿಸುವುದು, ಮಾಹಾಪೂಜೆ ನಡೆಯಲಿದೆ. ತಾ. ೨೧ ರಂದು ಬೆಳಿಗ್ಗೆ ೧೧ ಗಂಟೆಗೆ ಕುದುರೆ ಕಟ್ಟುವುದು, ಮಧ್ಯಾಹ್ನ ೨ ಗಂಟೆಗೆ ಮೂರು ಗ್ರಾಮಗಳಿಂದ ಹೊರಟ ಕುದುರೆಗಳು ಮಗ್ಗುಲ ಗ್ರಾಮದ ಮಾಚೆಟ್ಟಿಪಾರೆ ಎಂಬಲ್ಲಿ ಕುದುರೆಆಟ್ ನಡೆಯುತ್ತದೆ.

ಬಳಿಕ ಸಂಜೆ ದೇಗುಲಕ್ಕೆ ಆಗಮನವಾಗುತ್ತದೆ. ದೇವಿಗೆ ವಿಶೇಷ ಪೂಜೆ ನಡೆದು ರಾತ್ರಿ ಭದ್ರಕಾಳಿ ತೆರೆ ಹಾಗೂ ಮೇಲೇರಿ ನಡೆಯುತ್ತದೆ. ನಂತರ ಮಧ್ಯರಾತ್ರಿ ತೆರೆಯು ದೇವಾಲಯಕ್ಕೆ ಆಗಮನವಾಗುತ್ತದೆ. ತಾ.೨೨ ರಂದು ಮಧ್ಯಾಹ್ನ ಕುಂದನೂ ಚೂಳೆ ಹೊರಟು ಸಂಜೆ ದೇವಾಲಯ ಪ್ರವೇಶವಾಗುತ್ತದೆ. ತಾ.೨೩ ರಂದು ಕಳ ಮಡ್‌ಕ್ಕ್ ನಡೆಯಲಿದೆ ಎಂದು ಊರು ಹಬ್ಬದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಐಮಂಗಲ ಗ್ರಾಮದ ದೇವತಕ್ಕರಾದ ಬೊಳ್ಳಚಂಡ ತಮ್ಮಯ್ಯ, ವೈಪಡ ಗ್ರಾಮದ ದೇವತಕ್ಕರಾದ ಪುಲಿಯಂಡ ನವೀನ್ ಮತ್ತು ಶ್ರೀ ಭದ್ರಕಾಳಿ ಸೇವಾ ಸಮಿತಿ ಐಮಂಗಲ ದೇವಾಲಯದ ಅದ್ಯಕ್ಷರಾದ ಬೊಳ್ಳಚಂಡ ಪ್ರಕಾಶ್ ಉಪಾಧ್ಯಕ್ಷರಾದ ಬೊಳ್ಳಚಂಡ ಸೋಮಣ್ಣ ಕಾರ್ಯದರ್ಶಿ ಮೇಕತಂಡ ಟೀಶ ಬೋಪಯ್ಯ, ವಾಟೇರಿರ ಶಂಕರಿ ಪೂವಯ್ಯ, ವಾಟೇರಿರ ಕುಟ್ಟಪ್ಪ, ಪುಲಿಯಂಡ ಜಿಮ್ಮಿ, ಚೋಕಂಡ ರಮೇಶ್, ಕಿರಣ್ ಕುಮಾರ್ ಸೇರಿದಂತೆ ಮೂರು ಗ್ರಾಮಗಳ ಹಬ್ಬ ಆಚರಿಸುವ ಗ್ರಾಮಸ್ಥರು ಹಾಜರಿದ್ದರು.