ಕೂಡಿಗೆ, ಮೇ ೧೭: ಕೂಡಿಗೆಯ ಡಯಟ್‌ನಲ್ಲಿರುವ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸೇವಾಪೂರ್ವ ಶಿಕ್ಷಣ ವಿಭಾಗದ ಡಿಪ್ಲೋಮಾ ಇನ್ ಎಲಿಮೆಂಟರಿ ಎಜುಕೇಶನ್ (ಡಿ.ಇ.ಐ.ಇ.ಎಡ್) ಕೇಂದ್ರ (ಸರಕಾರಿ ಪ್ರಶಿಕ್ಷಣ ಶಿಕ್ಷಕರ ತರಬೇತಿ ಕೇಂದ್ರ)ದಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಅತಿ ಕಡಿಮೆಯಾಗಿದ್ದು ಮುಚ್ಚುವ ಆತಂಕ ಎದುರಾಗಿದೆ.
ಮಡಿಕೇರಿ ಮತ್ತು ವೀರಾಜಪೇಟೆ ಕೇಂದ್ರದಲ್ಲಿದ್ದ ಶಿಕ್ಷಕರ ತರಬೇತಿ ಕೇಂದ್ರಗಳು ಈಗಾಗಲೇ ಮುಚ್ಚಲ್ಪಟ್ಟಿವೆ. ಇದೀಗ ಕೂಡಿಗೆ ಸರಕಾರಿ ಡಯಟ್ ಕೇಂದ್ರದಲ್ಲಿರುವ ಪ್ರಶಿಕ್ಷಣ (ಟಿ.ಸಿ.ಎಚ್) ಶಿಕ್ಷಕರ ತರಬೇತಿ ಕೇಂದ್ರವು ಸಹ ಮುಚ್ಚುವ ಆತಂಕ ಕಾಡುತ್ತಿದೆ.
ಕಳೆದ ೧೫ ವರ್ಷಗಳಿಂದ ಸರಕಾರದಿಂದ ಶಿಕ್ಷಕರ ನೇಮಕಾತಿ ಆಗದ ಹಿನ್ನೆಲೆಯಲ್ಲಿ ಜಿಲ್ಲೆ ಸೇರಿದಂತೆ ಅನೇಕ ಪ್ರಶಿಕ್ಷಣಾರ್ಥಿ ಶಿಕ್ಷಕರ ತರಬೇತಿ ಕೇಂದ್ರಗಳು ಮುಚ್ಚಲ್ಪಟ್ಟು ತರಬೇತಿ ಪಡೆದ ಸಾವಿರಾರು ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿ ಮನೆಯಲ್ಲಿಯೇ ಉಳಿದುಕೊಳ್ಳುವ ಪ್ರಸಂಗ ಎದುರಾಗುತ್ತಿದೆ.
ಶಿಕ್ಷಣ ಇಲಾಖೆಯ ನಿಯಮಾನುಸಾರ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಮುಗಿಸಿ ತಕ್ಷಣವೇ ಶಿಕ್ಷಕರ ಶಿಕ್ಷಣ ತರಬೇತಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಬದಲಾದ ಶಿಕ್ಷಣ ನೀತಿಯ ಅನುಗುಣವಾಗಿ ಇದೀಗ ಪಿಯುಸಿ ಪಾಸ್ ಅದ ವಿದ್ಯಾರ್ಥಿಗಳಿಗೆ ಮಾತ್ರ ಶಿಕ್ಷಕರ (ಪ್ರಶಿಕ್ಷಣಾರ್ಥಿ) ಟಿ.ಸಿ.ಎಚ್ ತರಬೇತಿಗೆ ಅವಕಾಶ ನೀಡಲಾಗಿದೆ.
ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿಯು ಸಾವಿರಾರು ವಿದ್ಯಾರ್ಥಿಗಳು ಶಿಕ್ಷಕರ ತರಬೇತಿ ಪಡೆದರೂ ಸಹ ಪ್ರಾಥಮಿಕ ಶಾಲೆಗಳಿಗೆ ಅರ್ಹತೆ ಅನುಗುಣವಾಗಿ ನೇಮಕಾತಿ ಮಾಡುವ ಪ್ರಕ್ರಿಯೆಯು ಇಲ್ಲದೆ ಇರುವುದರಿಂದ ನಿರುದ್ಯೋಗಿಗಳಾಗುವ ಬದಲು ಪಿಯುಸಿ ಅದ ತಕ್ಷಣವೇ ಪದವಿ ಅಥವಾ ಇನ್ನಿತರ ಶಿಕ್ಷಣ ತರಬೇತಿಗೆ ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಆಗಿದೆ.
ಜಿಲ್ಲೆಯಲ್ಲಿರುವ ಸೇವಾ ಪೂರ್ವ ಶಿಕ್ಷಣ ತರಬೇತಿ ಸಂಸ್ಥೆಯು ಸಹ ಮುಚ್ಚುವಂತಹ ಪ್ರಸಂಗ ಎದುರಾಗಿದೆ. ಕಳೆದ ೨೫ ವರ್ಷಗಳಲ್ಲಿ ಕೂಡಿಗೆ ಡಯಟ್ ಕೇಂದ್ರದಲ್ಲಿರುವ ಪ್ರಶಿಕ್ಷಣ ತರಬೇತಿ ಕೇಂದ್ರದಲ್ಲಿ ಪ್ರಥಮ ಹಂತದಲ್ಲಿ ಪ್ರಥಮ ವರ್ಷಕ್ಕೆ ೫೦ ರಿಂದ ೭೦ ವಿದ್ಯಾರ್ಥಿಗಳು ಇರುತ್ತಿದ್ದ ತರಗತಿಗಳಲ್ಲಿ ಇದೀಗ ೩ ವಿದ್ಯಾರ್ಥಿಗಳು, ದ್ವಿತೀಯ ವರ್ಷದ ತರಗತಿಯಲ್ಲಿ ೧೧ ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಮುಂದಿನ ಸಾಲಿನಲ್ಲಿ ಪ್ರಥಮ ವರ್ಷದ ತರಗತಿಗೆ ಸೇರ್ಪಡೆಯಾಗದಿದ್ದರೆ ಸಂಸ್ಥೆಯು ಮುಚ್ಚುವ ಹಂತಕ್ಕೆ ತಲುಪಲಿದೆ.
ರಾಜ್ಯ ಸರಕಾರವು ಶಿಕ್ಷಕರ ನೇಮಕಾತಿ ಮಾಡುವ ಮೂಲಕ ಸರಕಾರಿ ಶಾಲೆಗಳ ಉಳಿವು ಮತ್ತು ಪ್ರಶಿಕ್ಷಣ ಪಡೆದ ವಿದ್ಯಾರ್ಥಿಗಳ ಬದುಕಿಗೆ ದಾರಿಯಾಗಬೇಕಿದೆ. ಇಲ್ಲದೆ ಹೋದಲ್ಲಿ ಕ್ರಮೇಣವಾಗಿ ಎಲ್ಲ ಪ್ರಶಿಕ್ಷಣ ಶಿಕ್ಷಕರ ತರಬೇತಿ ಕೇಂದ್ರಗಳು ಸಹ ಮುಚ್ಚುವಂತಹ ಪ್ರಸಂಗ ಎದುರಾಗಲಿದೆ. - ಕೆ.ಕೆ. ನಾಗರಾಜಶೆಟ್ಟಿ.