ಸಿದ್ದಾಪುರ, ಮೇ. ೧೭: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಯುವಕನೋರ್ವ ಮನೆ ಒಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ಕೂಡುಗದ್ದೆಯಲ್ಲಿ ಭಾನುವಾರ ನಡೆದಿದೆ. ಕೂಡುಗದ್ದೆಯ ನಿವಾಸಿ ಮಧುಸೂದನ್ (ಮಧು) ಎಂಬುವರ ಪುತ್ರ ಅಭಿಜಿತ್ (೨೧) ಎಂಬ ಯುವಕನೇ ಮೃತ ದುರ್ದೈವಿ. ವೀರಾಜಪೇಟೆಯ ಖಾಸಗಿ ಪದವಿ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಅಭಿಜಿತ್ ಕಳೆದ ಮೂರು ದಿನಗಳಿಂದ ಯಾರೊಂದಿಗೂ ಮಾತನಾಡದೆ ಮನೆಯಲ್ಲಿ ಮೌನವಾಗಿದ್ದನು ಎಂದು ಮೃತನ ತಂದೆ ಮಧುಸೂದನ್ ದೂರಿನಲ್ಲಿ ತಿಳಿಸಿದ್ದಾರೆ. ಭಾನುವಾರದಂದು ಪೋಷಕರು ಮನೆಯಲ್ಲಿ ಇಲ್ಲದ ಸಂದರ್ಭ ಅಭಿಜಿತ್ ಮನೆಯ ಮೇಲ್ಚಾವಣಿಯ ಕಬ್ಬಿಣದ ರಾಡಿಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮೃತ ಯುವಕನ ತಂದೆ ಮಧುಸೂದನ್ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಸಿದ್ದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಯುವಕನ ಮೃತದೇಹವನ್ನು ವೀರಾಜಪೇಟೆಯ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.