ವೀರಾಜಪೇಟೆ, ಮೇ. ೧೬ : ವೀರಾಜಪೇಟೆ ನಗರದ ಒಳಚರಂಡಿಗಳು, ಕಸ ಗಿಡಗಂಟಿ ಮಣ್ಣುಗಳಿಂದ ತುಂಬಿ ಅನೈರ್ಮಲ್ಯದ ತಾಣವಾಗುತ್ತಿದೆ.

ಗಬ್ಬು ನಾರುವುದ ರೊಂದಿಗೆ ಚರಂಡಿಗಳಲ್ಲಿ ಕೊಳಚೆ ನೀರು ಶೇಖರಣೆಗೊಂಡು ಸೊಳ್ಳೆ, ನೊಣಗಳ ಉತ್ಪತ್ತಿಯ ತಾಣವಾಗುತ್ತಿದೆ.

ನಗರದಲ್ಲಿ ವಿವಿಧ ರೀತಿಯ ಅಭಿವೃದ್ಧಿ ಕಾರ್ಯಗಳು ಒಂದರ ಹಿಂದೆ ಒಂದರAತೆ ನಿರಂತರವಾಗಿ ನಡೆಯುತ್ತಿದೆ. ರಸ್ತೆಯ ಅಗಲೀಕರಣ, ಅಮೃತ್ ಕುಡಿಯುವ ನೀರಿನ ಯೋಜನೆಯ ಪೈಪ್ ಅಳವಡಿಕೆ, ಪಾದಚಾರಿ ಮಾರ್ಗ, ನೈರ್ಮಲ್ಯದ ಕುರಿತು ಸಾರ್ವಜನಿಕರಲ್ಲಿ ಎಚ್ಚರ ಮೂಡಿಸಲು ಪುರಸಭೆ ವತಿಯಿಂದ ಮನೆ ಮನೆಗೆ ತೆರಳುವ ಸಿಬ್ಬಂದಿ ವರ್ಗ, ಹಸಿ ಕಸ, ಒಣಕಸ ಬೇರ್ಪಡಿಸಿ ಸಂಗ್ರಹಿಸಲು ಮಾಹಿತಿ ನೀಡುವುದು, ನಗರವನ್ನು ಸ್ವಚ್ಛವಾಗಿಡಲು ಹಿಂದೆ ಜನರು ಕಸದ ರಾಶಿಯನ್ನು ಹಾಕುತ್ತಿದ್ದ ನಗರದ ಕೆಲವು ಪ್ರದೇಶಗಳಲ್ಲಿ ಹೂ ಗಿಡಗಳ ನೆಟ್ಟು ಕಸ ಹಾಕದಿರಿ ಎಂಬ ಬೋರ್ಡ್ ಅಳವಡಿಸಿ ಜನರ ಮನಸ್ಸನ್ನು ಪರಿವರ್ತನೆ ಮಾಡಿ ನೈರ್ಮಲ್ಯಕ್ಕೆ ಆದ್ಯತೆ ಕೊಡುವುದರೊಂದಿಗೆ, ನಿಯಮ ಮೀರಿ ನಗರ ಪ್ರದೇಶದಲ್ಲಿ ಕಸ ಎಸೆದವರಿಗೆ ದಂಡ ವಿಧಿಸುವ ಕಾರ್ಯ ಪುರಸಭೆ ಮಾಡುತ್ತಿತ್ತು.

ಪುರಸಭೆ ವತಿಯಿಂದ ಸ್ವಚ್ಛಗೊಂಡು ನೈರ್ಮಲ್ಯದಿಂದ ಇರಬೇಕಾದಂತಹ ನಗರದ ಹೆಚ್ಚಿನ ಒಳಚರಂಡಿಗಳು ಹೂಳು ತುಂಬಿ ಕಸ, ಗಿಡ ಗಂಟಿಗಳಿಗೆ ಆಶ್ರಯ ತಾಣವಾಗುತ್ತಿದೆ. ಇನ್ನೂ ಕೆಲವು ಒಳ ಚರಂಡಿಯಲ್ಲಿ ಕಸದ ರಾಶಿಗಳೇ ತುಂಬಿಹೋಗಿವೆ. ಶೇಖರಣೆಯಾಗುತ್ತಿರುವ ಕೊಳಚೆ ನೀರಿನಲ್ಲಿ ಸೊಳ್ಳೆ ಹಾಗೂ ನೊಣಗಳು ನಿರಂತರವಾಗಿ ಸಂತಾನೋತ್ಪತ್ತಿ ಮಾಡುತ್ತಿವೆ. ಇದರಿಂದಾಗಿ ಸಾಂಕ್ರಾಮಿಕ ರೋಗ ಹರಡುವಂತಹ ಭೀತಿಯೂ ಇದೆ.

ಒಳ ಚರಂಡಿಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್, ತಿಂಡಿ ತಿನಿಸುಗಳ ಕವರ್‌ಗಳು, ನೀರಿನ ಬಾಟಲಿಗಳನ್ನು ಎಸೆಯಲಾಗಿದೆ. ರಸ್ತೆಯನ್ನು ಅಗಲೀಕರಣ ಮಾಡುವಂತಹ ಸಂದರ್ಭ ತೆರವುಗೊಳಿಸಿದ ಕಟ್ಟಡದ ಅವಶೇಷಗಳ ತುಂಡುಗಳು, ಇಟ್ಟಿಗೆಗಳು ಬಿದ್ದು ಚರಂಡಿಯ ಹರಿವು ಸ್ಥಗಿತವಾಗಿದೆ. ಕೆಲವು ಕಡೆಗಳಲ್ಲಿ ಚರಂಡಿಗಳಲ್ಲಿ ಮಣ್ಣು ತುಂಬಿ ಅದರಲ್ಲಿ ವಿವಿಧ ಗಿಡಗಂಟಿಗಳು ಬೆಳೆದು ನಿಂತಿದೆ. ಅರ್ಧಕ್ಕೆ ನಿಂತ ಒಳ ಚರಂಡಿ ಕಾಮಗಾರಿ.

ನಗರದ ಮುಖ್ಯ ರಸ್ತೆಯನ್ನು ಅಗಲೀಕರಿಸುವ ಮೀನುಪೇಟೆಯ ಹಲವು ನಿವಾಸಿಗಳು ಹಾಗೂ ಅಂಗಡಿ ಮಾಲೀಕರು ಸ್ವ ಇಚ್ಛೆಯಿಂದ ತಮ್ಮ ಅಂಗಡಿ ಮುಂಗಟ್ಟು, ಮನೆಗಳನ್ನು ತೆರವುಗೊಳಿಸಿ ಅಭಿವೃದ್ಧಿ ಕಾರ್ಯಕ್ಕೆ ನೆರವು ನೀಡಿದ್ದರು. ಅಗಲೀಕರಣದ ನಂತರ ಮೀನುಪೇಟೆ ಜೀಪು ನಿಲ್ದಾಣದಿಂದ ಮುತ್ತಪ್ಪ ದೇವಾಲಯದ ಸಮೀಪದ ಮೋರಿವರೆಗೆ ಒಳಚರಂಡಿ ನಿರ್ಮಿಸುವ ಕಾರ್ಯ ಆರಂಭವಾಯಿತು. ಆದರೆ ಒಳಚರಂಡಿ ಕಾರ್ಯ ಪೂರ್ಣಗೊಳ್ಳದೆ ಮೋರಿಯನ್ನು ಸೇರಲು ೨೦೦ ಮೀಟರ್ ದೂರ ಇರುವಾಗಲೇ ಒಳಚರಂಡಿ ಕಾಮಗಾರಿ ಸ್ಥಗಿತವಾಗಿದ್ದು ಇದರಿಂದ ಮೀನುಪೇಟೆ ಹೊಟೇಲು, ಮೇಲ್ಭಾಗದ ಮನೆಗಳಿಂದೆಲ್ಲ ಹರಿದು ಬರುವ ತ್ಯಾಜ್ಯದ ನೀರು ರಸ್ತೆ ಬದಿಯಲ್ಲಿ ಅಂಗಡಿ, ಗ್ಯಾರೇಜುಗಳ ಮುಂದೆ ಶೇಖರಣೆಗೊಂಡಿದೆ. ದಿನದಿಂದ ದಿನಕ್ಕೆ ಶೇಖರಣೆಯಾಗುತ್ತಿರುವ ತ್ಯಾಜ್ಯದ ಪ್ರಮಾಣ ಹೆಚ್ಚುತ್ತಿದೆ.

ದುರಸ್ತಿಗೊಳ್ಳಬೇಕಿದೆ ಒಳಚರಂಡಿ

ಕೆಲವೇ ದಿನಗಳಲ್ಲಿ ಮುಂಗಾರು ಆರಂಭವಾಗಲಿದೆ. ಮಳೆಗಾಲ ಆರಂಭಕ್ಕೂ ಮುನ್ನ ಚರಂಡಿಗಳ ದುರಸ್ತಿ ಮಾಡದಿದ್ದರೆ ಮಳೆ ನೀರು ಹರಿದು ಚರಂಡಿಯಲ್ಲಿರುವAತಹ ತ್ಯಾಜ್ಯ, ಕಸ, ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತದೆ. ವಾಹನ ಸಂಚರಿಸಿದಾಗ ಪಾದಾಚಾರಿಗಳ ಮೇಲೆ ಸಮೀಪದ ಅಂಗಡಿ ಮುಂಗಟ್ಟಿನ ಮೇಲೆ ತ್ಯಾಜ್ಯ ನೀರು ಹಾರುವ ಸನ್ನಿವೇಶಗಳು ಎದುರಾಗುತ್ತಿವೆ. ಪುರಸಭೆ ಆದಷ್ಟು ಬೇಗ ಇತ್ತ ಗಮನ ಹರಿಸಿ ಒಳ ಚರಂಡಿಗಳನ್ನು ಆದಷ್ಟು ಬೇಗ ದುರಸ್ತಿಗೊಳಿಸಬೇಕಿದೆ.