ಶ್ರೀಮಂಗಲ, ಮೇ ೧೬: ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರುಗ ಗ್ರಾಮದ ಚೆಪ್ಪುಡಿಕೊಲ್ಲಿಯಲ್ಲಿ ಬೊಮ್ಮುಂಜಿ ನದಿಗೆ ಕಟ್ಟಲಾಗಿದ್ದ ಹಲವು ವರ್ಷದಿಂದ ಕುಸಿದ ಸೇತುವೆಗೆ ಬದಲಾಗಿ ನೂತನ ಸೇತುವೆ ಮತ್ತು ಚೆಕ್ ಡ್ಯಾಮ್ ನಿರ್ಮಾಣ ಯೋಜನೆಯನ್ನು ರೂ. ೨.೫೦ ಕೋಟಿ ಅನುದಾನದ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಭೂಮಿಪೂಜೆ ಸಲ್ಲಿಸಿದರು.

ಈ ಸಂದರ್ಭ ಅವರು ಮಾತನಾಡಿ, ಬಹಳಷ್ಟು ವರ್ಷಗಳಿಂದ ದುರಸ್ತಿಯಾಗಬೇಕಾಗಿದ್ದ ಸೇತುವೆಯನ್ನು ಸಣ್ಣ ನೀರಾವರಿ ಇಲಾಖೆಯಿಂದ ಉಸ್ತುವಾರಿ ಸಚಿವ ಬೋಸರಾಜು ಅವರು ತಮ್ಮ ಮನವಿಗೆ ಸ್ಪಂದಿಸಿ ರೂ. ೨.೫೦ ಕೋಟಿ ಅನುದಾನವನ್ನು ಒದಗಿಸಿದ್ದು, ಇದರಲ್ಲಿ ಸೇತುವೆ ಮತ್ತು ಚೆಕ್ ಡ್ಯಾಮ್ ನಿರ್ಮಾಣವಾಗಲಿದೆ. ಇದರಿಂದ ಇಲ್ಲಿನ ಮುಖ್ಯ ದೇವಸ್ಥಾನದ ಭಕ್ತಾದಿಗಳಿಗೆ ಮತ್ತು ಗ್ರಾಮಸ್ಥರಿಗೆ ತೆರಳಲು ಮಾರ್ಗ ಸುಗಮವಾಗಲಿದೆ ಹಾಗೂ ಚೆಕ್ ಡ್ಯಾಮ್ ನಿರ್ಮಾಣದಿಂದ ಈ ಭಾಗದ ರೈತರಿಗೆ ಬೇಸಿಗೆಯಲ್ಲಿ ನೀರಿನ ಸಂಗ್ರಹದಿAದ ಕೃಷಿಗೆ ಉಪಯೋಗಿಸಿಕೊಳ್ಳಲು ಅವಕಾಶವಾಗಲಿದೆ ಎಂದು ಹೇಳಿದರು.

ತ್ವರಿತವಾಗಿ ಪೂರ್ಣಗೊಳಿಸಲು ಗುತ್ತಿಗೆದಾರರು ಹಾಗೂ ಇಂಜಿನಿಯರ್ ಅವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಇಲ್ಲಿನ ಚೆಪ್ಪುಡಿಕೊಲ್ಲಿ ಈಶ್ವರ, ಚಾಮುಂಡಿ ದೇವಸ್ಥಾನದ ಪ್ರಮುಖರಾದ ಚೆಪ್ಪುಡಿರ ಪೊನ್ನಪ್ಪ ಮಾತನಾಡಿ, ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕರು ರೂ. ೨.೫೦ ಕೋಟಿ ಅನುದಾನದಲ್ಲಿ ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸುವ ಮೂಲಕ ಈ ಭಾಗದ ಜನರಿಗೆ ನದಿ ದಾಟಲು ಉಂಟಾಗಿದ್ದ ಸಮಸ್ಯೆಯನ್ನು ಬಗೆಹರಿಸಿದ್ದಾರೆ ಎಂದರು.

ದೇವಸ್ಥಾನ ಸಮಿತಿಯ ಪ್ರಮುಖರಾದ ಬಾದುಮಂಡ ವಿಷ್ಣು ಕಾರ್ಯಪ್ಪ ಮಾತನಾಡಿ, ಬೆಟ್ಟದ ತಪ್ಪಲಿನಲ್ಲಿರುವ ಮತ್ತು ಕುಗ್ರಾಮವಾಗಿರುವ ಈ ಜನರ ಸಮಸ್ಯೆಯನ್ನು ಆಲಿಸಿದ ಶಾಸಕರು ದೊಡ್ಡ ಸೇತುವೆ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದು, ದೇವಸ್ಥಾನದ ಭಕ್ತಾದಿಗಳು ನಾಡಿನ ಜನರು ಗ್ರಾಮಸ್ಥರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ಚೆಪ್ಪುಡಿಕೊಲ್ಲಿಯ ಚಾಮುಂಡಿ ಹಾಗೂ ಈಶ್ವರ ದೇವಸ್ಥಾನಕ್ಕೆ ಶಾಸಕರು ಭೇಟಿ ನೀಡಿದರು. ಈ ಸಂದರ್ಭ ದೇವಸ್ಥಾನ ಸಮಿತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎ.ಜೆ. ಬಾಬು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಹಿರಿಯರಾದ ಚೆಪ್ಪುಡೀರ ಪೊನ್ನಪ್ಪ, ಚೆಕ್ಕೇರ ಕಾಳಯ್ಯ, ತೀತಿರ ಪ್ರಭು ಸುಬ್ಬಯ್ಯ, ಪೆಮ್ಮಂಡ ರಾಜಾ ಕುಶಾಲಪ್ಪ, ಮಚ್ಚಮಾಡ ಉದಯ, ಬಾದುಮಂಡ ವಿಷ್ಣು ಕಾರ್ಯಪ್ಪ, ಅಪ್ಪಚಂಗಡ ಮೋಟಯ್ಯ, ಚೊಟ್ಟೆಯಂಡಮಾಡ ಉದಯ, ಬೊಳ್ಳೇರ ದೀಪಕ್, ಅಜ್ಜಿಕುಟ್ಟಿರ ಗಿರೀಶ್, ಪಮ್ಮು, ಪೊನ್ನು, ಚೆಪ್ಪುಡೀರ ಬೋಪಣ್ಣ, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಕುಮಾರಸ್ವಾಮಿ ಹಾಗೂ ದೇವಸ್ಥಾನ ಸಮಿತಿಯ ಪ್ರಮುಖರು, ಗ್ರಾಮಸ್ಥರು ಹಾಜರಿದ್ದರು.