ಲಕ್ನೋ, ಮೇ ೧೪: ಉತ್ತರ ಪ್ರದೇಶದಲ್ಲಿ ಬುಧವಾರ ಬೀಸಿದ ಭೀಕರ ಬಿರುಗಾಳಿ, ಮಳೆ ಮತ್ತು ಆಲಿಕಲ್ಲು ಮಳೆಗೆ ಸುಮಾರು ೧೦೦ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ಪಶ್ಚಿಮ ಉತ್ತರ ಪ್ರದೇಶ ವ್ಯಾಪ್ತಿಯಲ್ಲಿ ಚಂಡಮಾರುತ ಮತ್ತು ದಕ್ಷಿಣ ರಾಜಸ್ಥಾನದಿಂದ ಬೀಸುತ್ತಿರುವ ಗಾಳಿಯ ಪ್ರಭಾವದಿಂದಾಗಿ ಗಂಟೆಗೆ ೮೦ ರಿಂದ ೧೦೦ ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಿದೆ. ಬುಧವಾರ ಮಧ್ಯಾಹ್ನ ಆರಂಭವಾದ ಈ ಹವಾಮಾನ ವೈಪರೀತ್ಯ ಸಂಜೆ ವೇಳೆಗೆ ಭೀಕರ ಚಂಡಮಾರುತವಾಗಿ ಮಾರ್ಪಟ್ಟು ಭಾರಿ ಅವಾಂತರ ಸೃಷ್ಟಿಸಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಭೀಕರ ಮಳೆಗೆ ಪ್ರಯಾಗ್‌ರಾಜ್ ಜಿಲ್ಲೆ ಅತಿ ಹೆಚ್ಚು ಹಾನಿಗೊಳಗಾಗಿದ್ದು, ಅಲ್ಲಿ ೧೭ ಜನರು ಮೃತಪಟ್ಟಿದ್ದಾರೆ. ಮೃತರ ಪೈಕಿ ಐವರು ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ. ಉಳಿದಂತೆ ಭದೋಹಿಯಲ್ಲಿ ೧೦, ಫತೇಪುರ್ ೮, ಉನ್ನಾವ್ ೭, ಬದಾಯೂನ್ ೬ ಮತ್ತು ಬರೇಲಿಯಲ್ಲಿ ೪ ಜನರು ಸಾವನ್ನಪ್ಪಿದ್ದಾರೆ. ಉನ್ನಾವ್ ಜಿಲ್ಲೆಯ ದಹಿ ಎಂಬಲ್ಲಿ ಮರ ಬಿದ್ದು ೭೦ ವರ್ಷದ ರೈತ ಮೃತಪಟ್ಟರೆ, ಅಸಿವಾನ್‌ನಲ್ಲಿ ೯ ವರ್ಷದ ಬಾಲಕ ಬಲಿಯಾಗಿದ್ದಾನೆ ಎಂದು ವರದಿ ತಿಳಿಸಿದೆ. ಬಿರುಗಾಳಿಯ ಆರ್ಭಟಕ್ಕೆ ನೂರಾರು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಅನೇಕ ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದೆ. ರಸ್ತೆಗಳ ಮೇಲೆ ಮರಗಳು ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದ್ದು, ಹಲವಾರು ಕಾರುಗಳು ಮತ್ತು ಮನೆಗಳಿಗೆ ಹಾನಿಯಾಗಿದೆ.