ಸಿದ್ದಾಪುರ, ಮೇ ೧೪: ಸಿದ್ದಾಪುರ ಗ್ರಾಮಸ್ಥರ ಬಹುದಿನದ ಬೇಡಿಕೆಯಾದ ೬೬ ಕೆ.ವಿ. ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ಸ್ಥಾಪನೆ ಕೊನೆಗೂ ಈಡೇರುವತ್ತ ಸಾಗಿದ್ದು, ೨೦೨೭ ಸೆಪ್ಟೆಂಬರ್ ತಿಂಗಳಲ್ಲಿ ಕಾಮಗಾರಿ ಅಂತ್ಯವಾಗಲಿದ್ದು ವ್ಯಾಪ್ತಿಯ ಬಹುತೇಕ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ.
ಸಿದ್ದಾಪುರ ಸೆಸ್ಕ್ ಶಾಖೆಯು ನೆಲ್ಲಿಹುದಿಕೇರಿ, ಗುಹ್ಯ, ಮಾಲ್ದಾರೆ, ಇಂಜಿಲಗೆರೆ, ಪಳ್ಳಕೆರೆ, ಚೆನ್ನಯ್ಯನಕೋಟೆ, ಯಡೂರು, ಪಾಲಿಬೆಟ್ಟ, ಚೆನ್ನಂಗಿ, ಸಿದ್ದಾಪುರ ಸೇರಿದಂತೆ ವಿವಿಧ ಗ್ರಾಮಗಳನ್ನು ಒಳಗೊಂಡ ಶಾಖೆಯಾಗಿದೆ. ಶಾಖೆಯಿಂದ ವಿವಿಧ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಪ್ರಸ್ತುತ ಸಿದ್ದಾಪುರ ಶಾಖೆಗೆ ಪೊನ್ನಂಪೇಟೆ, ಸುಂಟಿಕೊಪ್ಪ, ವೀರಾಜಪೇಟೆ ಕೇಂದ್ರದಿAದ ೩೩ ಕೆ.ವಿ ಘಟಕದಿಂದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ವೀರಾಜಪೇಟೆ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಅಡಚಣೆಗಳು ಆದಲ್ಲಿ ಸಿದ್ದಾಪುರಕ್ಕೆ ವಿದ್ಯುತ್ ಸ್ಥಗಿತಗೊಳಿಸಲಾಗುತ್ತಿತ್ತು. ಅಲ್ಲದೆ ವ್ಯಾಪ್ತಿಯ ಪ್ರಮುಖ ವಿದ್ಯುತ್ ಕಾಮಗಾರಿಗಳ ಸಂದರ್ಭದಲ್ಲಿ ವೀರಾಜಪೇಟೆ ಕೇಂದ್ರ ಕಚೇರಿಯಿಂದ ವಿದ್ಯುತ್ ಸ್ಥಗಿತಗೊಳಿಸಬೇಕಾಗುತ್ತಿತ್ತು. ಆದರೆ ಸಿದ್ದಾಪುರದಲ್ಲಿ ಉಪಕೇಂದ್ರ ಪ್ರಾರಂಭವಾದಲ್ಲಿ ಸಿದ್ದಾಪುರ ವ್ಯಾಪ್ತಿಯ ಸುಮಾರು ಹತ್ತು ಕಿ.ಮೀ. ದೂರದ ಗ್ರಾಮಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಬಹುದಾಗಿದೆ. ಅಲ್ಲದೆ ೩೩ ಕೆ.ವಿ. ಬದಲು ೬೬ ಕೆ.ವಿ. ಸಾಮರ್ಥ್ಯದ ಉಪಕೇಂದ್ರ ನಿರ್ಮಾಣದಿಂದ ವಿದ್ಯುತ್ ಸಮಸ್ಯೆಗಳು ಬಗೆಹರಿಯಲಿದೆ.
ಎರಡು ಎಕರೆ ಜಾಗದಲ್ಲಿ ಉಪಕೇಂದ್ರ ಸಿದ್ದಾಪುರದ-ಪಾಲಿಬೆಟ್ಟ ರಸ್ತೆಯಲ್ಲಿನ ಬೀಟಿಕಾಡುವಿನಲ್ಲಿ ಎರಡು ಎಕರೆ ಜಾಗವನ್ನು ಕೆಪಿಟಿಸಿಎಲ್ ಕೆಲವು ವರ್ಷಗಳ ಹಿಂದೆ ಉಪಕೇಂದ್ರ ಸ್ಥಾಪನೆಯ ಉದ್ದೇಶಕ್ಕೆ ಖರೀದಿಸಿತ್ತ್ತು. ಇದೀಗ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಕಾಮಗಾರಿ ಪ್ರಾರಂಭಗೊAಡಿದೆ. ೬೬ ಕೆ.ವಿ. ಸಾಮರ್ಥ್ಯದ ಫೀಡರ್ ಅಳವಡಿಸಲಾಗುತ್ತದೆ. ಇಲ್ಲಿಂದ ಸುಮಾರು ಹತ್ತು ಕಿ.ಮೀ. ವ್ಯಾಪ್ತಿಯ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತದೆ.
ಯೋಜನೆಯ ಪ್ರಯೋಜನಗಳು
* ಪ್ರಸ್ತುತ ಇರುವ ೬೬/೩೩/೧೧ ಕೆ.ವಿ, ವೀರಾಜಪೇಟೆ ವಿ.ವಿ. ಕೇಂದ್ರದಲ್ಲಿನ ೧೧ ಕೆ.ವಿ. ಮಾರ್ಗಗಳ ವಿದ್ಯುತ್ ಹೊರೆಯನ್ನು ಕಡಿಮೆಗೊಳಿಸಲು ಹೊಸದಾಗಿ ೧೨ ಸಂಖ್ಯೆಯ ೧೧ ಕೆ.ವಿ. ಮಾರ್ಗಗಳನ್ನು ಸಿದ್ದಾಪುರದಲ್ಲಿ ನಿರ್ಮಾಣ ಮಾಡಲಾಗುವುದು. ಹಾಲಿ ಇರುವ ೧೧ ಕೆ.ವಿ. ಮಾರ್ಗಗಳ ಉದ್ದವನ್ನು ಕಡಿಮೆಗೊಳಿಸುವುದರಿಂದ ವಿದ್ಯುತ್ ಅಡಚಣೆಗಳು ಕಡಿಮೆಯಾಗುವುದು ಮತ್ತು ವೋಲ್ಟೇಜ್ ಸುಧಾರಣೆಯಾಗುವುದು.
* ವಿ.ವಿ. ಕೇಂದ್ರದ ವ್ಯಾಪ್ತಿಯ ಗ್ರಾಮಗಳ ಗ್ರಾಹಕರಿಗೆ, ರೈತರ ಕೃಷಿ ಪಂಪ್ ಸೆಟ್‌ಗಳಿಗೆ, ಕುಡಿಯುವ ನೀರಿನ ಯೋಜನೆಗಳಿಗೆ ಹಾಗೂ ಇನ್ನಿತರ ಸರ್ಕಾರಿ ಮತ್ತು ಖಾಸಗಿ ವಿದ್ಯುತ್ ಅವಲಂಬಿತ ಚಟುವಟಿಕೆಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲಾಗುವುದು.
* ಸಿದ್ದಾಪುರದಲ್ಲಿ ಈಗಾಗಲೇ ಇರುವ ೩೩/೧೧ ಕೆ.ವಿ. ವಿ.ವಿ. ಕೇಂದ್ರದಲ್ಲಿನ ವಿದ್ಯುತ್ ಹೊರೆ ಕಡಿಮೆಯಾಗಲಿದೆ. - ವಾಸು ಎ.ಎನ್.