ಮಡಿಕೇರಿ, ಮೇ ೪; ಸ್ಥಳಿಯ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ನಗರಸಭೆ, ಪುರಸಭೆಗಳು ಸ್ಥಳೀಯ ಸರಕಾರಗಳಾಗಿ ಕೆಲಸ ಮಾಡುವದರೊಂದಿಗೆ ಬದಲಾವಣೆ ತರಬೇಕೆಂದು ರಾಜ್ಯ ವಿಕೇಂದ್ರೀಕರಣ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ೨೦೨೭-೨೮ರ ಯೊಜನೆಯನ್ನು ಜನರ ಯೋಜನೆಯನ್ನಾಗಿ ತಯಾರಿಸುವ ಕುರಿತು ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಈ ಹಿಂದೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ಇರಲಿಲ್ಲ, ಸದಸ್ಯರುಗಳಿಗೆ ಮಾತ್ರವಿತ್ತು. ಇದಕ್ಕೆ ತಿದ್ದುಪಡಿ ತಂದು ಅಧಿಕಾರ ನೀಡಿದರೂ ೩೩ ವರ್ಷ ಕಳೆದರೂ ಕೂಡ ಪಾರದರ್ಶಕವಾಗಿಲ್ಲ. ಇದೀಗ ಮತ್ತೆ ತಿದ್ದುಪಡಿ ಮಾಡಿ ಗ್ರಾಮ ಪಂಚಾಯ್ತಿಯಿAದ ಹಿಡಿದು ಜಿಲ್ಲಾ ಪಂಚಾಯ್ತಿವರೆಗೆ ಸಾಕಷ್ಟು ಅಧಿಕಾರ ನೀಡಲಾಗಿದೆ. ಪ್ರತಿ ೧೦೦ ಮತದಾರರಿರುವಲ್ಲಿ ಒಂದು ಗುಂಪು ರಚನೆ ಮಾಡಿ ಇಬ್ಬರು ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಇದರಲ್ಲಿ ಚುನಾವಣೆ ಇರುವದಿಲ್ಲ, ಆಯ್ಕೆ ಮಾತ್ರ ಇರುತ್ತದೆ. ಎಲ್ಲರೂ ಒಂದೇ ಎಂಬ ಭಾವನೆ ಬರಬೇಕೆಂಬ ಉದ್ದೇಶ ಹೊಂದಲಾಗಿದೆ. ಇಲ್ಲಿ ಜನರ ತೀರ್ಮಾನ ಆಗಬೇಕು. ಬಡವರಿಗೆ, ಹೆಣ್ಣು ಮಕ್ಕಳಿಗೆ ಅಧಿಕಾರ ಸಿಗಬೇಕೆಂದು ಹೇಳಿದರು.
ಜನರಿಗೆ ಅವಕಾಶ
ಹಿಂದೆ ಗೌಡರು, ಶಾನುಭೋಗರು, ಶ್ರೀಮಂತರು ಆಡಳಿತ ನಡೆಸುತ್ತಿದ್ದರು. ಹುಟ್ಟು ನಮ್ಮ ಕೈಯ್ಯಲ್ಲಿಲ್ಲ, ಬಡವ, ಶ್ರೀಮಂತರಾಗಿ ಹುಟ್ಟುವದು ನಮ್ಮ ತಪ್ಪಲ್ಲ, ಹುಟ್ಟಿದ ನಂತರ ಸಮಾಜದಲ್ಲಿ ಸ್ಥಾನ ಮಾನ ಗಿಟ್ಟಿಸಿಕೊಳ್ಳುವದು ನಮ್ಮ ಕರ್ತವ್ಯವಾಗಿದೆ. ಕಾನೂನಿನನ್ವಯ, ಸಂವಿಧಾನದಡಿ ಇರುವ ಅವಕಾಶವನ್ನು ಚಲಾಯಿಸಲು ಜನರಿಗೆ ಅವಕಾಶ ಕಲ್ಪಿಸಿಕೊಡಬೇಕು. ಸಮಾಜದಲ್ಲಿ ಬದಲಾವಣೆ ತರುವದು ವಿಕೇಂದ್ರೀಕರಣದ ಉದ್ದೇಶವಾಗಿದೆ ಎಂದು ಹೇಳಿದರು.
ಅಂತರಗಳ ಬದಲಾವಣೆ
ಯೊಜನೆ ರೂಪಿಸಿಸುವದು ಅಂದರೆ ಹೊರ ಪ್ರಪಂಚದ ಅಭಿವೃದ್ಧಿ ಕೆಲಸ ಮಾತ್ರವಲ್ಲ; ಒಳ ವ್ಯವಸ್ಥೆಯ ಬಗ್ಗೆಯೂ ಯೋಜನೆ ರೂಪಿಸಬೇಕಿದೆ. ಮನುಷ್ಯ ಬದಲಾಗಬೇಕು. ಪ್ರೀತಿ, ವಿಶ್ವಾಸದಿಂದ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ವ್ಯವಹರಿಸುವ ಮನಸ್ಥಿತಿ ಬರಬೇಕು. ಅಂತರಗಳ ಬದಲಾವಣೆ ಆಗಬೇಕು. ಮನುಷ್ಯನಲ್ಲಿ ಪರಿವರ್ತನೆ ಆಗಬೇಕು, ಬೆದರಿಕೆಯ ಪರಿವರ್ತನೆ ತಾತ್ಕಾಲಿಕವಾದುದು. ಪ್ರೀತಿಯಿಂದ ಪರಿವರ್ತನೆ ಮಾಡಬೇಕು. ಎಲ್ಲರೂ ಪ್ರೀತಿ ವಿಶ್ವಾಸದಿಂದ ಬದುಕುವ ಮನಸ್ಥಿತಿ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಿಸಿದರು.
ಮಡಿಕೇರಿಯಿಂದ ಪ್ರಾರಂಭ
ಸAವಿಧಾನದಲ್ಲಿರುವAತೆ ಸ್ಥಳೀಯ ಸಂಸ್ಥೆಗಳು ಸ್ಥಳೀಯ ಸರಕಾರಗಳಾಗಿ ಕೆಲಸ ಮಾಡಬೇಕು. ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು. ರಾಜ್ಯದ ೩೦ ಜಿಲ್ಲೆಗಳಲ್ಲಿ ಮಾದರಿಯಾಗುವಂತೆ ಕೊಡಗು ಜಿಲ್ಲೆಯಲ್ಲಿ ಯೋಜನೆ ರೂಪುಗೊಳ್ಳಬೇಕು. ಹೊಸ ವ್ಯವಸ್ಥೆ ಪ್ರಾರಂಭವಾಗುತ್ತಿದ್ದು, ಸಂವಿಧಾನ, ಕಾನೂನಿನಲ್ಲಿರುವದು ಅನುಷ್ಠಾನಕ್ಕೆ ಬರಬೇಕು. ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು. ಮಡಿಕೇರಿಯಿಂದಲೇ ಇದನ್ನು ಪ್ರಾರಂಭ ಮಾಡೋಣವೆಂದು ಹೇಳಿದರು.
ಜನಪರವಾಗಿ ಕಾರ್ಯನಿರ್ವಹಿಸಬೇಕು
ಸಭೆಯಲ್ಲಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಮಾತನಾಡಿ; ವಿಕೇಂದ್ರೀಕರಣ ಯೋಜನೆಯನ್ನು ವ್ಯವಸ್ಥಿತವಾಗಿ ಜಾರಿಮಾಡುವ ನಿಟ್ಟಿನಲ್ಲಿ ಸರಕಾರದ ಪ್ರಯತ್ನವಾಗಿದ್ದು, ಇದರ ಭಾಗವಾಗಿ ಉಪಾಧ್ಯಕ್ಷರಾಗಿರುವ ಪಾಟೀಲರು ಎಲ್ಲ ಜಿಲ್ಲೆಗಳಿಗೂ ಪ್ರವಾಸ ಹಮ್ಮಿಕೊಂಡಿದ್ದಾರೆ. ವ್ಯವಸ್ಥೆಯಲ್ಲಿನ ತಪ್ಪುಗಳನ್ನು ಸರಿಪಡಿಸುವ ಚಿಂತನೆ ಹೊಂದಲಾಗಿದ್ದು, ಕೊಡಗು ಜಿಲ್ಲೆಯಲ್ಲಿ ಎಲ್ಲರೊಂದಿಗೆ ಸೇರಿ ಸರಿಯಾದ ರೀತಿಯಲ್ಲಿ ಮಾಡಬೇಕಿದೆ. ವ್ಯವಸ್ಥೆಗಳು ಜನರ, ಪ್ರದೇಶದ ಪರವಾಗಿರಬೇಕು. ಯಾವದೇ ತೊಂದರೆಗಳಿದ್ದಲ್ಲಿ ಸರಕಾರೀ ಮಟ್ಟದಲ್ಲಿ ಪರಿಹರಿಸಲು ಪ್ರಯತ್ನಿಸಲಾಗುವದು. ಯೋಜನೆಗಳು ಜನರ ಅಭಿಪ್ರಾಯದಂತೆ ಜನಪರವಾಗಿರಬೇಕೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಸೋಮಶೇಖರ್; ಸ್ಥಳೀಯ ಮಟ್ಟದಲ್ಲಿ ವಿಕೇಂದ್ರೀಕರಣದಡಿ ಜನರಿಂದ ಜನರಿಗಾಗಿ ಅವಶ್ಯಕತೆಗನುಗುಣವಾಗಿ ಯೋಜನೆ ರೂಪಿಸುವ ವ್ಯವಸ್ಥೆಯಾಗಿದೆ. ಗ್ರಾಮ ಪಂಚಾಯ್ತಿ ಮೂಲಕ ರೂಪುರೇಷೆ ತಯಾರು ಮಾಡಿ ತಾಲೂಕು ಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಚರ್ಚಿಸುವ ಸಲುವಾಗಿ ಸಭೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಮಡಿಕೇರಿ ನಗರಸಭಾಧ್ಯಕ್ಷೆ ಪಿ.ಕಲಾವತಿ, ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ವಿಕೇಂದ್ರಿಕರಣ ಅಭಿವೃದ್ಧಿ ಸಮಿತಿ ಸಲಹೆಗಾರ ಕೆಂಪೇಗೌಡ ಇದ್ದರು. ಜಿ.ಪಂ. ಸಿಬ್ಬಂದಿಗಳಾದ ಹರ್ಷಿತ ತಂಡ ನಾಡಗೀತೆ ಹಾಡಿದರೆ, ಸಹಾಯಕ ಸಾಂಖ್ವಿಕ ಅಧಿಕಾರಿ ನಂದೀಶ್ ಸ್ವಾಗತಿಸಿದರು. ಪವನ್ ಕುಮಾರ್ ನಿರೂಪಿಸಿ, ವಂದಿಸಿದರು.