ಮಡಿಕೇರಿ, ಮೇ ೪: ದೇಶದಲ್ಲಿ ಅತ್ಯಂತ ಕುತೂಹಲ ಕೆರಳಿಸಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಹೊರಬಿದ್ದಿದೆ. ಕಳೆದ ೧೫ ವರ್ಷಗಳಿಂದ ನಿರಂತರವಾಗಿ ಪಶ್ಚಿಮ ಬಂಗಾಳದ ಗದ್ದುಗೆ ಅಲಂಕರಿಸಿ ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹೊಂದಿದ್ದ ಮಮತಾ ಬ್ಯಾನರ್ಜಿ ಇದೀಗ ತನ್ನ ಸ್ಥಾನ ಕಳೆದುಕೊಂಡಿದ್ದಾರೆ. ಪ್ರಮುಖ ವಿರೋಧ ಪಕ್ಷವಾಗಿ ಮಾತ್ರ ಕಾರ್ಯ ನಿರ್ವಹಿಸುವ ಅವಕಾಶವನ್ನು ಮತದಾರರು ಟಿಎಂಸಿ ಪಕ್ಷಕ್ಕೆ ಕಲ್ಪಿಸಿದ್ದಾರೆೆ. ಕಳೆದ ಚುನಾವಣೆಯಲ್ಲಿ ಭಾರೀ ಪೈಪೋಟಿ ನೀಡಿದ್ದರೂ ಬಹುಮತ ದೊರಕದೆ ಎರಡನೇ ಸ್ಥಾನಕ್ಕಷ್ಟೇ ತೃಪ್ತಿಗೊಂಡಿದ್ದ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ನಿಚ್ಚಳ ಬಹುಮತ ಸಾಧಿಸಲು ಸಫಲಗೊಂಡಿದ್ದು ಆಡಳಿತ ಯಂತ್ರವನ್ನು ತನ್ನದಾಗಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೆಂದ್ರ ಗೃಹ ಸಚಿವ ಅಮಿತ್ ಶಾ ಜಂಟಿಯಗಿ ನಡೆಸಿದ ಪ್ರಚಾರ ಪರಿಶ್ರಮಕ್ಕೆ ಪಶ್ಚಿಮ ಬಂಗಾಳದ ಮತದಾರರು ಪರಿಣಾಮಕಾರಿಯಗಿ ಓಗೊಟ್ಟಿದ್ದಾರೆ. ೧೫ ವರ್ಷಗಳ ಹಿಂದೆ ಕಮ್ಯುನಿಸ್ಟ್ ತೆಕ್ಕೆಯಲ್ಲಿದ್ದ ಈ ರಾಜ್ಯದ ಆಡಳಿತವನ್ನು ಆಗ ಮಮತಾ ಬ್ಯಾನರ್ಜಿ ಪ್ರಯತ್ನಪೂರ್ವಕವಾಗಿ ಕಸಿದುಕೊಂಡಿದ್ದರು. ಆದರೆ, ಇದೀಗ ಅವರಿಂದ ಬಿಜೆಪಿ ಅಧಿಕಾರ ಕಸಿದುಕೊಳ್ಳಲು ಸಫಲವಾಗಿದೆ. ಕಾಂಗ್ರೆಸ್ ಮತ್ತಿತರ ಪಕ್ಷಗಳು ಪಶ್ಚಿಮ ಬಂಗಾಳದಲ್ಲಿ ಹೀನಾಯ ಸೋಲನುಭüವಿಸಿವೆ.

ಈ ನಡುವೆ ಕೇರಳಂ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟವು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಕಮ್ಯುನಿಸ್ಟ್ ಮೈತ್ರಿ ಕೂಟವನ್ನು ಎರಡನೇ ಸ್ಥಾನಕ್ಕೆ ತಳ್ಳಿ ಭಾರೀ ಬಹುಮತ ಗಳಿಸಲು ಸಫಲಗೊಂಡಿದೆÉ. ವಿಜಯನ್ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದು ಇದೀಗ ಪತನಗೊಂಡಿದ್ದಾರೆ, ವಿಪಕ್ಷ ನಾಯಕÀ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಲೋಕಸಭಾ ಸದಸ್ಯೆ ಪ್ರಿಯಾಂಕ ಗಾಂಧಿ ಈ ಬಾರಿ ಕೇರಳಂ ಚುನಾವಣೆಯಲ್ಲಿ ನಿರಂತರ ಪ್ರಚಾರ ನಡೆಸಿ ಕಾಂಗ್ರೆಸ್ ಮೈತ್ರಿ ಕೂಟದ ಗೆಲುವಿನ ಸೂತ್ರಧಾರಿಗಳೆನಿಸಿದ್ದಾರೆ. ಇನ್ನೊಂದೆಡೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಆಡಳಿತಾರೂಢ ಡಿ.ಎಂ.ಕೆ ಈ ಸಾಲಿನ ಚುನಾವಣೆಯಲ್ಲಿ ಭಾರೀ ಮುಖಭಂಗ ಅನುಭವಿಸಿದೆ. ಇತ್ತೀಚೆಗಷ್ಟೆ ರಾಜಕೀಯಕ್ಕೆ ಧುಮುಕಿದ ತಮಿಳುನಾಡುವಿನ ಪ್ರಸಿದ್ಧ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಪ್ರಥಮ ಬಾರಿಗೇ ಈ ಚುನಾವಣೆಯಲ್ಲಿ ಅಧಿಕ ಸ್ಥಾನ ಪಡೆದು ಡಿಎಂಕೆಯನ್ನು ಎರಡನೇ ಸ್ಥಾನಕ್ಕೆ ತಳ್ಳಿದೆ. ಬಿಜೆಪಿ-ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಕೇವಲ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳÀಬೇಕಿದೆ. ಆದರೆ, ಈ ಮೈತ್ರಿಕೂಟ ತಮಿಳುನಾಡುವಿನ ಆಡಳಿತ ನಡೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಏಕೆಂದರೆ, ಟಿವಿಕೆ ಏಕೈಕವಾಗಿ ಪೂರ್ಣ ಬಹುಮತ ಸಾಧಿಸಲು ವಿಫಲವಾಗಿರುವುದರಿಂದ ಎನ್‌ಡಿಎ ಬೆಂಬಲ ಪಡೆದು ಆಡಳಿತ ನಡೆಸುವ ಅನಿವಾರ್ಯತೆಯಿದೆ ಎನ್ನಲಾಗಿದೆ. ಅಲ್ಲದೆ, ಆಡಳಿತಾರೂಢ ಡಿಎಂಕೆಯನ್ನು ಚುನಾವಣೆಯಲ್ಲಿ ನೇರ ಎದುರಿಸುವುದಾಗಿ ಹೇಳಿಕೊಂಡಿದ್ದ ಟಿವಿಕೆ ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಕಷ್ಟಸಾಧ್ಯ ಎನ್ನುವುದು ರಾಜಕೀಯ ಪರಿಣಿತರ ಅಭಿಮತ. ಮತ್ತೊಂದೆಡೆ ಅಸ್ಸಾಂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಲೆ ಮತ್ತೆ ಮೂರನೇ ಬಾರಿಗೆ ಮರುಕಳಿಸಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ನೇತೃತ್ವದಲ್ಲಿ ಇದೀಗ ಬಿಜೆಪಿ ಭಾರೀ ಬಹುಮತದಿಂದ ಮತ್ತೆ ಅಧಿಕಾರ ಗಳಿಸಿದೆ.

ಪುದುಚೇರಿಯಲ್ಲಿ ಆಡಳಿತಾರೂಢ ಎಐಎನ್‌ಆರ್‌ಸಿ-ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟ ಮತ್ತೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು ನಿಚ್ಚಳ÷ಬಹುಮತ ಸಾಧಿಸಿದೆ. ಮುಖ್ಯಮಂತ್ರಿ ಎನ್ ರಂಗಸ್ವಾಮಿ ಈ ಕೇಂದ್ರಾಡಳಿತ ಪ್ರದೇಶವಾದ ರಾಜ್ಯದಲ್ಲಿ ಪುನಃ ಗೆಲುವಿನ ನಗೆ ಬೀರಿದ್ದಾರೆ.