ಮಡಿಕೇರಿ, ಮೇ ೪: ಯಾವುದೇ ಪ್ರವಾಸೋದ್ಯಮ ಅಭಿವೃದ್ಧಿಯ ನೆಪದಲ್ಲಿ ಪರಿಸರ ನಾಶ ಮತ್ತು ಸಂಸ್ಕೃತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಾರದು ಎಂದು ಸಂಸದ ರಾಜೀವ್ ಪ್ರತಾಪ್ ರೂಡಿ ಅಭಿಪ್ರಾಯಪಟ್ಟರು.
ಕೇಂದ್ರ ಸಾರಿಗೆ, ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಕುರಿತ ಸಂಸದರ ಸ್ಥಾಯಿ ಸಮಿತಿ ಇಂದು ನಗರದ ಹೊರವಲಯದಲ್ಲಿ ನಡೆಸಿದ ಕೊಡಗು ಪ್ರವಾಸೋದ್ಯಮ ಕುರಿತ ಚರ್ಚೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಕೊಡಗಿಗೆ ತಾನು ೮ನೇ ಬಾರಿ ಬರುತ್ತಿದ್ದು, ಅನೇಕ ಬದಲಾವಣೆಗಳು ಕಂಡು ಬರುತ್ತಿವೆ. ಒಂದು ಬಾರಿಗೆ ಎಷ್ಟು ಪ್ರಮಾಣದ ಪ್ರವಾಸಿಗರನ್ನು ಪುಟ್ಟ ಜಜಿಲ್ಲೆ ಹೊಂದಬಹುದು ಎಂಬ ಬಗ್ಗೆ ರಾಜ್ಯ ಸರಕಾರ ಸರ್ವೆ ನಡೆಸಬೇಕಿದೆ. ಇಲ್ಲವಾದಲ್ಲಿ ಇಲ್ಲಿನ ಸಂಸ್ಕೃತಿ ಮತ್ತು ಪರಿಸರ ಅಪಾಯದ ಅಂಚಿಗೆ ಹೋಗುತ್ತದೆ ಎಂದು ರೂಡಿ ಆತಂಕ ವ್ಯಕ್ತಪಡಿಸಿದರು. ತಾನು ಅಧ್ಯಯನ ನಡೆಸಿದಂತೆ ಕೊಡಗಿನಲ್ಲಿ ಅಪಾಯದ ಬೆಳವಣಿಗೆ ನಡೆಯುತ್ತಿದೆ. ದೊಡ್ಡ ದೊಡ್ಡ ರೆಸಾರ್ಟ್ಗಳ ಹೆಸರಿನಲ್ಲಿ ಪರಿಸರ ನಾಶ ಮಾಡುವ ಬದಲು ಹೋಂಸ್ಟೇಗಳನ್ನು ಪ್ರೋತ್ಸಾಹಿಸುವುದು ಈ ನಿಟ್ಟಿನಲ್ಲಿ ಉತ್ತಮ ಯೋಜನೆ ಎಂದು ಅವರು ವಿಶ್ಲೇಷಿಸಿದರು.
ಅಭಿವೃದ್ಧಿಯ ಹೆಸರಿನಲ್ಲಿ ಮೀಸಲು ಅರಣ್ಯ ಬಳಸಿ ರಸ್ತೆ ವಿಸ್ತರಿಸುವ ಅವಶ್ಯಕತೆ ಇಲ್ಲ ಎಂದ ಪ್ರತಾಪ್ ರೂಡಿ, ಕೊಡಗಿನಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಹೋಂಸ್ಟೇಗಳ ವಿರುದ್ಧ ಕಠಿಣ ಕ್ರಮ ಅಗತ್ಯವಿದೆ ಎಂದರು. ಸಭೆಯಲ್ಲಿ ಹಾಜರಿದ್ದ ಪ್ರವಾಸೋದ್ಯಮ ಹಾಗೂ ಇತರ ಸಂಬAಧಿತ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಉದ್ದೇಶಿಸಿ ಈ ನಿಟ್ಟಿನಲ್ಲಿ ಕೂಡಲೇ ಕಾರ್ಯೋನ್ಮುಖರಾಗುವಂತೆ ಅವರು ಸೂಚಿಸಿದರು. ಅನಧಿಕೃತ ಹೋಂಸ್ಟೇಗಳ ವಿರುದ್ಧ ತೆಗೆದುಕೊಂಡ ಕ್ರಮಗಳ ಬಗ್ಗೆ ಸಂಸದರ ಸಮಿತಿಗೆ ಪ್ರತಿ ತಿಂಗಳೂ ವರದಿ ಸಲ್ಲಿಸುವಂತೆ ಸೂಚಿಸಿದರು.
ಕೊಡಗಿನಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಶಿಸ್ತು ಬದ್ಧ ಬೆಳವಣಿಗೆ ಇಲ್ಲದಿದ್ದಲ್ಲಿ ೧೦೦ ವರ್ಷಗಳಲ್ಲಿ ಕೊಡಗು ಎಂಬ ಹೆಸರು ಇಲ್ಲದಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಕೊಡಗು ಹೆಚ್ಚು ಪ್ರವಾಸಿಗರನ್ನೂ ಆಕರ್ಷಿಸುತ್ತಿದ್ದರೂ ಸರಕಾರಗಳು ಅಭಿವೃದ್ಧಿಗೆ ಹೆಚ್ಚಿನ ಹಣ ನೀಡುತ್ತಿಲ್ಲವೆಂದರು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬೇರೆ ಬೇರೆ ಯೋಜನೆಗಳಲ್ಲಿ ಹಣ ಹೂಡುವಾಗ ಸ್ಥಳ ಗುರುತಿಸುವಿಕೆಯಲ್ಲಿ ಹೆಚ್ಚಿನ ಗಮನಹರಿಸಬೇಕು ಎಂದರು. ಕೊಡಗು ಜಿಲ್ಲೆಯಲ್ಲಿ ಕೊಡವ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವ, ಸ್ಥಳೀಯ ಆಹಾರಗಳನ್ನು ಎಲ್ಲ ಆತಿಥ್ಯ ಕೇಂದ್ರಗಳಲ್ಲಿ ಪರಿಚಯಿಸುವ ಕೆಲಸ ಆಗಬೇಕೆಂಬ ಹೆಗಡೆ ಅವರು, ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿರುವ ಸ್ಥಳೀಯ ಪದಾರ್ಥಗಳು ಗುಣಮಟ್ಟದಲ್ಲಿ ಕೂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಚಿತ್ರನಟ ಹಾಗೂ ಸಂಸದ ಜಗ್ಗೇಶ್ ಅವರು ಕೊಡಗನ್ನು ದೇಶ ವಿದೇಶಗಳಲ್ಲಿ ಪರಿಚಯಿಸುವ ಕೆಲಸವಾಗಬೇಕು ಎಂದರು. ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ಯೋಜನೆಗಳನ್ನೂ ಸರಕಾರ ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದ ಅವರು, ಕೊಡಗಿನಲ್ಲಿ ನೈಸರ್ಗಿಕ ಸೌಂದರ್ಯವಿದ್ದು, ಪ್ರವಾಸಿಗರು ವಿದೇಶಕ್ಕೆ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಹೋಗುವ ಬದಲು ಕೊಡಗಿಗೆ ಬರುವ ರೀತಿ ಪ್ರಚಾರ ವ್ಯವಸ್ಥೆ ಕಲ್ಪಿಸಬೇಕಿದೆ ಎಂದರು. ಬೇರೆಡೆ ಇರುವಂತಹ ಹೆಲಿ ಟೂರಿಸಂ ವ್ಯವಸ್ಥೆ ಕಲ್ಪಿಸಬೇಕೆಂದು ಜಗ್ಗೇಶ್ ಆಶಿಸಿದರು.
ಸಂಸದಿಯ ಸಮಿತಿ ಅಧ್ಯಕ್ಷ ಸಂಜಯ್ ಕುಮಾರ್ ಜ್ಹಾ ಅವರು ಮಾತನಾಡಿ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರನ್ನು ದೇಶಕ್ಕೆ ನೀಡಿರುವ ಕೊಡಗು ಅಭಿವೃದ್ಧಿಯಾಗಬೇಕಿದೆ ಎಂದರು.
ಕೊಡಗು ಹೊಟೇಲ್ ಮತ್ತು ರೆಸಾರ್ಟ್ ಅಸೋಸಿಯೇಷನ್ ಸಲಹೆಗಾರ ಜಿ. ಚಿದ್ವಿಲಾಸ್ ಅವರು ಮಾತನಾಡಿ, ನೆನೆಗುದಿಗೆ ಬಿದ್ದಿರುವ ಕುಶಾಲನಗರ ಏರ್‌ಸ್ಟಿçಪ್ ಮತ್ತು ಮೈಸೂರು ಕುಶಾಲನಗರ ರೈಲ್ವೆ ಸಂಪರ್ಕಗಳಿಗೆ ಕಾಯಕಲ್ಪ ನೀಡಬೇಕೆಂದರು. ಕೊಡಗಿನಲ್ಲಿ ಸುಸ್ಥಿರ, ಪರಿಸರ ಪ್ರೇಮಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು ಎಂದು ಪ್ರತಿಪಾದಿಸಿದ ಅವರು, ಪ್ರವಾಸೋದ್ಯಮವನ್ನು ವಿವಿಧ ರೀತಿಯಲ್ಲಿ ವಿಂಗಡಿಸಿದರೆ ಪ್ರವಾಸೋದ್ಯಮ ಸುಸ್ಥಿರವಾಗಲಿದೆ ಎಂದರು. ಪ್ರವಾಸೋದ್ಯಮ, ಸಂಸ್ಕೃತಿ, ಆರೋಗ್ಯ, ಧಾರ್ಮಿಕ, ಪರಿಸರ, ವನ್ಯಜೀವಿ, ಗ್ರಾಮೀಣ, ಕ್ರೀಡೆ, ಆಹಾರ, ಕೃಷಿ, ಛಾಯಾಚಿತ್ರ, ಶೈಕ್ಷಣಿಕ, ಮಳೆ ಹೀಗೆ ಬೇರೆ ಬೇರೆ ರೀತಿಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಬಹುದು ಎಂದು ಅವರು ವಿವರಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಬೇರೆರ ಮಂಜುನಾಥ್ ಅವರು ತಮ್ಮ ಅಭಿಪ್ರಾಯ ಮಂಡಿಸಿ, ಪ್ರವಾಸೋದ್ಯಮ ಅಭಿವೃದ್ಧಿ ಸಂದರ್ಭ, ಪರಿಸರ, ಸಂಸ್ಕೃತಿ ಮತ್ತು ಪ್ರಕೃತಿಯನ್ನು ಕಾಪಾಡಿಕೊಳ್ಳುವ ಅಗತ್ಯತೆ ಬಗ್ಗೆ ವಿವರಿಸಿದರು.
ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್ ಅವರು ಮಾತನಾಡಿ, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಹೋಂಸ್ಟೇಗಳ ಪಾತ್ರ ಮಹತ್ವದ್ದಾಗಿದೆ ಎಂದರು. ಪ್ರವಾಸೋದ್ಯಮ ಇಲಾಖೆಯಲ್ಲಿ ಸೂಕ್ತ ಅಧಿಕಾರಿಗಳ ನೇಮಕಾತಿ ಇಲ್ಲದಿದ್ದು ಕೂಡಲೇ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.
ಸಂಸ್ಥೆಯ ಮಾಜಿ ಅಧ್ಯಕ್ಷ ಕೆ.ಎಂ. ಕರುಂಬಯ್ಯ ಅವರು ಜಿಲ್ಲೆಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಹೋಂಸ್ಟೇಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಸೋಮವಾರಪೇಟೆ ಹೋಂಸ್ಟೇ ಅಸೋಸಿಯೇಷನ್ ಪರವಾಗಿ ರಾಜಶ್ರೀ ಸದಾನಂದ್ ಹಾಗೂ ಕಾರ್ತಿಕ್ ಪ್ರತಿನಿಧಿಸಿದರೆ, ಕೂರ್ಗ್ ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಕುಪ್ಪಂಡ ವಸಂತ್ ಹಾಗೂ ಉಪಾಧ್ಯಕ್ಷ ಎಸ್. ಕುಮಾರ್ ಪಾಲ್ಗೊಂಡಿದ್ದರು.
ರಾಜ್ಯ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ತ್ರಿಲೋಕ್ ಚಂದ್ರ, ನಿರ್ದೇಶಕ ಅಕ್ರಂ ಪಾಷಾ, ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ, ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಜತಿನ್ ಹಾಗೂ ಇತರರು ಪಾಲ್ಗೊಂಡಿದ್ದರು.