ಸಿದ್ದಾಪುರ, ಏ. ೩೦: ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿಯೊಂದರಲ್ಲಿ ನಾಗರಹಾವು ಸೇರಿಕೊಂಡು ಮನೆಯವರಲ್ಲಿ ಆತಂಕ ಮೂಡಿಸಿದ ಘಟನೆ ಸಮೀಪದ ಗುಹ್ಯ ಗ್ರಾಮದಲ್ಲಿ ನಡೆದಿದೆ.
ಗುಹ್ಯ ಗ್ರಾಮದ ಅಗಸ್ತ್ಯೇಶ್ವರ ದೇವಾಲಯದ ಅರ್ಚಕರಾದ ರವಿಶಂಕರ್ ಅವರ ಸ್ಕೂಟಿಯಲ್ಲಿ ಬೃಹತ್ ಗಾತ್ರದ ನಾಗರಹಾವು ಪತ್ತೆಯಾಗಿದೆ. ರವಿಶಂಕರ್ ಅವರು ಸಂಜೆ ಸುಮಾರು ೪ ಗಂಟೆಯ ವೇಳೆಗೆ ಸ್ಕೂಟಿ ಬಳಿ ತೆರಳಿದಾಗ ಏನೋ ಸದ್ದು ಕೇಳಿಬಂದಿದೆ. ಗಮನದಿಂದ ಆಲಿಸಿದಾಗ ಹಾವು ಬುಸುಗುಡುತ್ತಿರುವ ಶಬ್ದ ಕೇಳಿ, ಸ್ಕೂಟಿಯೊಳಗೆ ಹಾವು ಸೇರಿಕೊಂಡಿರುವುದು ಖಚಿತವಾಗಿದೆ.
ತಕ್ಷಣವೇ ಅವರು ಉರಗ ರಕ್ಷಕರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಗುಹ್ಯ ಗ್ರಾಮದ ಸುರೇಶ್ ಪೂಜಾರಿ ಅವರು ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಸ್ಕೂಟಿಯ ಬಿಡಿಭಾಗಗಳನ್ನು ತೆಗೆಯುವ ಮೂಲಕ ಒಳಗೆ ಅಡಗಿದ್ದ ನಾಗರಹಾವನ್ನು ಸುರಕ್ಷಿತವಾಗಿ ಹೊರತೆಗೆದರು. ಬಳಿಕ ಹಾವನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.
ಈ ಸಂದರ್ಭ ಮಾತನಾಡಿದ ಸುರೇಶ್ ಪೂಜಾರಿ, “ಬಿಸಿಲಿನ ತೀವ್ರತೆ ಹೆಚ್ಚಾದ ಸಂದರ್ಭದಲ್ಲಿ ಹಾವುಗಳು ನೀರು ಹಾಗೂ ತಂಪಿಗಾಗಿ ಮನೆಗಳತ್ತ ಬರುತ್ತವೆ. ಮನೆಗಳ ಬಾಗಿಲು, ಕಿಟಕಿಗಳನ್ನು ತೆರೆದಿಡುವಾಗ ಎಚ್ಚರಿಕೆ ವಹಿಸಬೇಕು” ಎಂದು ತಿಳಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತು.