ಕೂಡಿಗೆ, ಏ. ೨೯: ಕೂಡಿಗೆ ಗ್ರಾಮದಲ್ಲಿರುವ ಶ್ರೀ ದಂಡಿನಮ್ಮ ದೇವಾಲಯದ ಅಭಿವೃದ್ಧಿಗೆ, ಮತ್ತು ನೂತನವಾಗಿ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಈ ಸಾಲಿನಲ್ಲಿ ರೂ. ೧೦. ಲಕ್ಷ ಅನುದಾನವನ್ನು ನೀಡುವುದಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ತಿಳಿಸಿದರು. ಅವರು ಕೂಡಿಗೆ ಗ್ರಾಮದ ಶ್ರೀ ದಂಡಿನಮ್ಮ, ಶ್ರೀ ಬಸವೇಶ್ವರ, ಶ್ರೀ ಮುತ್ತತ್ ರಾಯ ದೇವಸ್ಥಾನ ಹಾಗೂ ಗ್ರಾಮದೇವಾ ಸಮಿತಿ ಕೂಡಿಗೆ-ಕೊಪ್ಪಲು, ಹೆಗ್ಗಡಳ್ಳಿ-ಕೋಟೆ ಇವರ ವತಿಯಿಂದ ಹಮ್ಮಿಕೊಂಡಿದ್ದ, ಗ್ರಾಮ ದೇವತೆಯ ಹಬ್ಬದ ಪೂಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಡಾ. ಮಂತರ್ ಗೌಡ ಮಾತನಾಡುತ್ತಾ ಗ್ರಾಮಗಳಲ್ಲಿ ಹಬ್ಬಾಚರಣೆಗಳ ಮೂಲಕ ಹಿಂದಿನ ಸಂಪ್ರದಾಯ, ಸಂಸ್ಕೃತಿಗಳನ್ನು ನಡೆಸುತ್ತಾ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಕರಾಗಬೇಕಾಗಿದೆ., ಜೊತೆಯಲ್ಲಿ ಯುವಕರು ಒಗ್ಗೂಡಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುವಂತೆ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ ಯುವಕರು ಹಬ್ಬ ಹರಿದಿನಗಳಲ್ಲಿ ಭಾಗವಹಿಸಿ ಸೇವಾ ಮನೋಭಾವದ ಮೂಲಕ ಉತ್ತಮ ಸಮಾಜ ನಿರ್ಮಾಣ, ಮತ್ತು ಪಾರಂಪರಿಕವಾಗಿ ನಡೆದು ಬಂದು ಧಾರ್ಮಿಕ ಆಚರಣೆಗಳು ಬಹುಮುಖ್ಯ, ಅವುಗಳ ಆಚರಣೆಯ ಮೂಲಕ ಗ್ರಾಮದ ಪ್ರಗತಿಗೆ, ಅನುಕೂಲ, ಮತ್ತು ಸೌಹಾರ್ದ ಮೂಲಕ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ದೇವಾಲಯ ಸಮಿತಿ ವತಿಯಿಂದ ಶಾಸಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಸ್. ಚಂದ್ರು , ಉಪಾಧ್ಯಕ್ಷ ಕೆ ಬಿ. ಪ್ರಕಾಶ್, ಕಾರ್ಯದರ್ಶಿ ಕೆ.ಟಿ ವೆಂಕಟೇಶ್, ಸಹ ಕಾರ್ಯದರ್ಶಿ ಸಂತೋಷ್, ಸಮಿತಿಯ ಸಲಹೆಗಾರರಾದ ಕೆ.ಕೆ. ತಿಮ್ಮಪ್ಪ, ಕೆ.ಕೆ. ನಾಗರಾಜಶೆಟ್ಟಿ, ಕೆ.ಜೆ.ರಾಜಶೇಖರ್, ಕೆ.ಬಿ. ಪ್ರಕಾಶ್, ಸೇರಿದಂತೆ ಸಮಿತಿ ನಿರ್ದೇಶಕರು, ನಿಕಟಪೂರ್ವ ಅಧ್ಯಕ್ಷರು ಹಾಗೂ ನೂರಾರು ಭಕ್ತರು ಹಾಜರಿದ್ದರು.