ಚೆಯ್ಯAಡಾಣೆ, ಏ. ೨೮: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು, ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಕಾಫಿ, ಬಾಳೆ, ಅಡಿಕೆ ಮತ್ತಿತರ ಗಿಡಗಳನ್ನು ಹಾನಿಪಡಿಸಿದೆ. ಮಂಗಳವಾರ ಮಧ್ಯಾಹ್ನ ನಾಪೋಕ್ಲು, ವೀರಾಜಪೇಟೆ ಮುಖ್ಯರಸ್ತೆಯ ಬೊವ್ವೇರಿಯಂಡ ರಮೇಶ್ ಅವರ ಗದ್ದೆಯಲ್ಲಿ ಕಾಣಿಸಿಕೊಂಡ ೬ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಕಾಡಿಗಟ್ಟುವಲ್ಲಿ ಯಶಸ್ವಿಯಾದರು. ಬೆಳಿಗ್ಗೆ ಹಾಗೂ ಮಧ್ಯಾಹ್ನ ಸಮಯದಲ್ಲಿ ಮುಖ್ಯ ರಸ್ತೆಯ ಮೂಲಕವೇ ೬ ಕಾಡಾನೆಗಳು ಸಂಚರಿಸುತ್ತಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಕಾಡಾನೆಯನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಬೇಕು, ಆನೆಗಳನ್ನು ಕಾಡಿಗಟ್ಟಿ ಯಾವುದೇ ಪ್ರಯೋಜನವಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಗಳನ್ನು ಕಾಡಿಗಟ್ಟಿ ಮನೆಗೆ ತಲುಪುವ ಮುನ್ನ ಕಾಡಾನೆಗಳು ಮರಳಿ ತೋಟಕ್ಕೆ ಲಗ್ಗೆ ಇಡುತ್ತಿವೆ ಎಂದು ಸ್ಥಳೀಯರಾದ ಬೊವ್ವೇರಿಯಂಡ ಮೋಹನ್ ತಿಳಿಸಿದ್ದಾರೆ. ಆರ್‌ಎಫ್‌ಓ ಶಿವರಾಂ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಓ ಶ್ರೀನಿವಾಸ್, ಇಟಿಎಫ್ ಡಿಆರ್‌ಎಫ್‌ಓ ಪ್ರಶಾಂತ್ ಹಾಗೂ ತಂಡ, ಚೆಯ್ಯಂಡಾಣೆ ಹಾಗೂ ಹೆಗ್ಗಳ ಕ್ಯಾಂಪ್ ಸಿಬ್ಬಂದಿ ಪಾಲ್ಗೊಂಡಿದ್ದರು.