ಕಡಂಗ, ಏ. ೨೮: ಕಡಂಗ ಸುತ್ತಮುತ್ತಲಿನ ಕ್ರೀಡಾಪಟುಗಳನ್ನು ಒಳಗೊಂಡು ನಡೆಸುವ ಕೆಪಿಎಲ್ ಕ್ರಿಕೆಟ್ ಕ್ರೀಡಾಕೂಟ ಮೇ ೧೪ ರಿಂದ೧೭ ರತನಕ ಕಡಂಗ ಸರಕಾರಿ ಪ್ರಾಥಮಿಕ ಹಿರಿಯ ಶಾಲಾ ಮೈದಾನದಲ್ಲಿ ನಡೆಸಲಾಗುವುದೆಂದು ಸಮಿತಿ ಸದಸ್ಯ ನೌಫಲ್ ಎಂ.ಬಿ. ತಿಳಿಸಿದ್ದಾರೆ.
ಕ್ರೀಡಾಕೂಟದಲ್ಲಿ ಎಂಟು ಬಲಿಷ್ಠ ತಂಡಗಳ ೧೫೦ಕ್ಕಿಂತಲೂ ಕ್ರೀಡಾಪಟುಗಳು ಭಾಗವಹಿಸಲಿದೆ. ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ೫೦೦೦೦ ರೂಪಾಯಿ ಹಾಗೂ ಆಕರ್ಷಕ ಪಾರಿತೋಷಕ ಹಾಗೂ ದ್ವಿತೀಯ ಬಹುಮಾನ ಪಡೆಯುವ ತಂಡಕ್ಕೆ ನಲವತ್ತು ಸಾವಿರ ರೂಪಾಯಿ ನಗದು ಮತ್ತು ಆಕರ್ಷಕ ಪಾರಿತೋಷಕ ನೀಡಲಾಗುವುದು, ತೃತೀಯ ಮತ್ತು ಚತುರ್ಥ ಸ್ಥಾನದ ತಂಡಗಳಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು ಮತ್ತು ವೈಯಕ್ತಿಕ ಪಾರಿತೋಷಕ ನೀಡ ಲಾಗುವುದು ಎಂದು ತಿಳಿಸಿದರು.
ಕ್ರೀಡಾಕೂಟದ ಉದ್ಘಾಟನೆ ಯನ್ನು ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ನಿರ್ವಹಿಸಲಿದ್ದಾರೆ ಮತ್ತು ಕ್ರೀಡಾಕೂಟದಲ್ಲಿ ವಿವಿಧ ರಾಜಕೀಯ ಪಕ್ಷದ ಹಾಗೂ ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ ಎಂದರು.
ಕ್ರೀಡಾಕೂಟದಲ್ಲಿ ಕಡಂಗ ಗ್ರಾಮದ ಸುತ್ತಮುತ್ತಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿಭಾಗದಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಹಾಗೂ ಸ್ಥಳೀಯ ಸರಕಾರಿ ಪ್ರಾಥಮಿಕ ಶಾಲೆಗೆ ನೋಟ್‌ಬುಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಕೆಪಿಎಲ್ ೧೧ನೇ ಆವೃತ್ತಿಯ ಅಧ್ಯಕ್ಷ ರಹಿಮ್ ಟಿ.ಎಂ., ಕಾರ್ಯದರ್ಶಿ ಅಶ್ರಫ್ ಪಿ.ಎಂ., ಕೋಶಾಧಿಕಾರಿ ಅಸ್ಕರ್, ಸಮಿತಿ ಸದಸ್ಯರಾದ ಶಮೀರ್ ಪಿ.ಎಚ್., ಯುನಸ್ ಕಾಶಿ ಉಪಸ್ಥಿತರಿದ್ದರು.