ಸೋಮವಾರಪೇಟೆ, ಏ. ೨೮: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಕರ ಗ್ರಾಮಾಭಿವೃದ್ಧಿ ಮಂಡಳಿ ಮತ್ತು ಸಂಶೋಧನಾ ಸಂಸ್ಥೆಯ ಆಶ್ರಯದಲ್ಲಿ ಗ್ರಾಮದ ಸಮುದಾಯ ಭವನದಲ್ಲಿ ವಿಜ್ಞಾನ ಆಧಾರಿತ ಪೋಷಕಾಂಶ ಮತ್ತು ಇತÀರ ಪರಿಕರಗಳ ಅಳವಡಿಕೆಯ ಜಾಗೃತಿ ಅಭಿಯಾನ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಮಡಿಕೇರಿ ಅಪ್ಪಂಗಳದ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ರಾಜಣ್ಣ ಅವರು, ಮಕ್ಕಳಿಗೆ ತಮ್ಮ ಆಸ್ತಿಯಲ್ಲಿ ಫಲವತ್ತತೆಯ ಮಣ್ಣನ್ನು ಉಳಿಸಿ ಕೊಡುವುದು ಪೋಷಕರ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಿಸಿದರು.

ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕಾದರೆ ಜೈವಿಕ ಗೊಬ್ಬರ ಮತ್ತು ಸಾವಯವ ಪೋಷಕಾಂಶಗಳನ್ನು ಪೂರೈಕೆ ಮಾಡಬೇಕು. ಮಿಶ್ರಗೊಬ್ಬರ ತಯಾರಿಕೆಯಲ್ಲಿ ಜೈವಿಕ ಕೊಳೆಯುವ ಘನತ್ಯಾಜ್ಯವನ್ನು ಸಂಸ್ಕರಿಸಿ ವಿಲೇವಾರಿ ಮಾಡುವುದು ಭರವಸೆಯ ಪ್ರಯತ್ನವಾಗಿದೆ ಎಂದು ಮಾಹಿತಿಯಿತ್ತರು.

ಕೃಷಿ ಆಧಾರಿತ ಆರ್ಥಿಕ ವ್ಯವಸ್ಥೆಯಲ್ಲಿ ಪೋಷಕಾಂಶಗಳ ಮರುಬಳಕೆ ಹಾಗು ಮಣ್ಣಿನ ಸುಧಾರಣೆಗೆ ಇದು ಅತ್ಯವಶ್ಯಕ ವಿಧಾನವಾಗಿದೆ. ಕಾಂಪೋಸ್ಟಿAಗ್ ಎನ್ನುವುದು ಜೈವಿಕ ವಸ್ತುಗಳನ್ನು ಪೋಷಕಾಂಶಗಳಿAದ ರಸಗೊಬ್ಬರವಾಗಿ ಪರಿವರ್ತಿಸುವ ಪ್ರಕ್ರಿಯೆಯಾಗಿದೆ. ಕಾಂಪೋಸ್ಟ್ ಪೋಷಕಾಂಶಗಳನ್ನು ತಯಾರಿಸುವುದು ಬಹುತೇಕ ರೈತರಿಗೆ ತಿಳಿದಿದೆ. ಆದರೂ ಸಂಶೋಧನ ಕೇಂದ್ರದ ಮೂಲಕ ರೈತರಿಗೆ ತರಬೇತಿ ಕಾರ್ಯಾಗಾರವನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು.

ಹಿರಿಯ ವಿಜ್ಞಾನಿ ಶಿವಕುಮಾರ್ ಮಾತನಾಡಿ, ಕಾಫಿ ಕೃಷಿ ಜೀವನ ಕಟ್ಟಿಕೊಟ್ಟರೆ, ಕಾಳುಮೆಣಸು ಶ್ರೀಮಂತಿಕೆಯನ್ನು ದಯಪಾಲಿಸಿದೆ. ಹವಾಮಾನ ವೈಪ್ಯರೀತ್ಯ ಹಾಗು ರೋಗಬಾಧೆಯಿಂದ ಕಾಳುಮೆಣಸು ಬಳ್ಳಿಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರೈತರು ಮೊದಲು ಉತ್ತಮ ಗುಣಮಟ್ಟದ ತಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಸಕಾಲದಲ್ಲಿ ನೀರು ಮತ್ತು ಪೋಷಕಾಂಶಗಳನ್ನು ಬಳ್ಳಿಗೆ ಪೂರೈಕೆ ಮಾಡಿದರೆ ಮಾತ್ರ ಕಾಳುಮೆಣಸು ಬಳ್ಳಿಗಳನ್ನು ಉಳಿಸಿಕೊಳ್ಳಬಹುದು ಎಂದರು.

ಮಣ್ಣು ಪರೀಕ್ಷೆಯ ನಂತರ ಸಾವಯವ ಪೋಷಕಾಂಶಗಳನ್ನು ಅಗತ್ಯತೆಗೆ ತಕ್ಕಂತೆ ಹಾಕಬೇಕು. ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆಗೆ ದೂರವಾಣಿ ಕರೆ ಮಾಡಿದರೆ, ಎಲ್ಲಾ ಸಲಹೆ, ತರಬೇತಿ ನೀಡಲಾಗುವುದು ಎಂದು ಹೇಳಿದರು.

ಅಪ್ಪಂಗಳ ಸಂಶೋಧನಾ ಕೇಂದ್ರದಲ್ಲಿ ವಿವಿಧ ತಳಿಯ ಕಾಳುಮೆಣಸಿನ ಬಳ್ಳಿಗಳು ಲಭ್ಯವಿದೆ. ೧೦ ಬುಟ್ಟಿಗಳನ್ನು ನೀಡಲಾಗುತ್ತದೆ. ಅದರಿಂದ ಹೆಚ್ಚಿನ ಬಳ್ಳಿಯನ್ನು ಬೆಳೆಸಬಹುದು ಎಂದು ಹೇಳಿದರು.

ಹಿರಿಯ ವಿಜ್ಞಾನಿ ಡಾ.ಹೊನ್ನಪ್ಪ, ಡಾ.ಗಾಯತ್ರಿ, ಕಾಂಪೋಸ್ಟ್ ಗೊಬ್ಬರ ತಯಾರಿಕೆ, ಜೀವಾಮೃತ ತಯಾರಿಕೆ, ಟ್ರೆöÊಕೋಡರ್ಮಾದ ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಹಿರಿಕರ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಕೆ.ಶಿವಪ್ರಕಾಶ್, ಮಾಜಿ ಅಧ್ಯಕ್ಷ ಎಚ್.ಡಿ. ಸುಬ್ರಮಣಿ ಇದ್ದರು.