ಕೂಡಿಗೆ, ಏ. ೨೬: ಕೂಡಿಗೆ ಸೈನಿಕ ಶಾಲೆ ೨೦೨೬-೨೭ನೇ ಸಾಲಿನ ದಕ್ಷಿಣ ವಲಯದ ಅಂತರ ಗುಂಪು ಫುಟ್‌ಬಾಲ್ ಪಂದ್ಯಾವಳಿಯ (ಗುಂಪು-ಹೆಚ್) ಉದ್ಘಾಟನಾ ಸಮಾರಂಭ ನಡೆಯಿತು.

ಪಂದ್ಯಾವಳಿಯು ಸೈನಿಕ ಶಾಲೆಗಳು ಮತ್ತು ಹೊಸ ಸೈನಿಕ ಶಾಲೆಗಳ ನಡುವಿನ ಪ್ರತಿಷ್ಠಿತ ಅಂತರ-ಶಾಲಾ ಕ್ರೀಡಾ ಸ್ಪರ್ಧೆಗೆ ಮುನ್ನುಡಿ ಬರೆಯಿತು.

ಸೈನಿಕ ಶಾಲೆ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಮುಖ್ಯ ಅತಿಥಿ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ರವರು ಉದ್ಘಾಟನಾ ಭಾಷಣದಲ್ಲಿ ಸೈನಿಕ ಶಾಲೆ ಅಮರಾವತಿನಗರ (ತಮಿಳುನಾಡು), ಸೈನಿಕ ಶಾಲೆ ಕಲಿಕಿರಿ (ಆಂಧ್ರಪ್ರದೇಶ), ಸೈನಿಕ ಶಾಲೆ ಕಝಕೂಟಂ (ಕೇರಳ), ಮಧುರೈನ ವಲ್ಲಭ ವಿದ್ಯಾಲಯ (ತಮಿಳುನಾಡು), ಮತ್ತು ಟ್ಯೂಟಿಕೋರಿನ್‌ನ ವಿಕಾಸ ಶಾಲೆ (ತಮಿಳುನಾಡು) ತಂಡಗಳನ್ನು ಹಾಗೂ ಆತಿಥೇಯ ಶಾಲೆಯ ತಂಡವನ್ನು ಸ್ವಾಗತಿಸಿದರು. ತಂಡದ ಕೆಲಸ, ನಾಯಕತ್ವ ಮತ್ತು ಸ್ಥಿತಿ ಸ್ಥಾಪಕತ್ವವನ್ನು ಬೆಳೆಸುವಲ್ಲಿ ಕ್ರೀಡೆಗಳ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು. ಫುಟ್‌ಬಾಲ್ ಕ್ರೀಡೆಯು ಸಮನ್ವಯತೆ, ನಂಬಿಕೆ ಮತ್ತು ಸಾಂಘಿಕ ಹೋರಾಟದ ಗುಣಗಳನ್ನು ಕಲಿಸುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳಿಂದ ಪಥಸಂಚಲನ ಮತ್ತು ಸಾಂಸ್ಕೃತಿಕ ಪ್ರದರ್ಶನ ನಡೆಯಿತು. ಕೆಡೆಟ್ ತ್ರಿನಭ್ ವಂದಿಸಿ ಕೆಡೆಟ್ ಧ್ರುವ್ ಮತ್ತು ಕೆಡೆಟ್ ವಿಜಯ್ ನಿರೂಪಿಸಿದರು.

ಪಂದ್ಯಾವಳಿಯು ೧೫ ವರ್ಷದೊಳಗಿನ ಬಾಲಕರು, ೧೭ ವರ್ಷದೊಳಗಿನ ಬಾಲಕರು ಮತ್ತು ೧೭ ವರ್ಷದೊಳಗಿ ಬಾಲಕಿಯರು ಹೀಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆಯು ಒಳಗೊಂಡಿರುತ್ತದೆ. ಮಧುರೈಯ ವಲ್ಲಭ ವಿದ್ಯಾಲಯವು ೧೫ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಭಾಗವಹಿಸುತ್ತಿದ್ದರೆ, ಟ್ಯೂಟಿಕೋರಿನ್‌ನ ವಿಕಾಸ ಶಾಲೆಯು ವರ್ಷದೊಳಗಿನ ಬಾಲಕರು, ೧೭ ವರ್ಷದೊಳಗಿನ ಬಾಲಕರ ವಿಭಾಗಗಳಲ್ಲಿ ಸ್ಪರ್ಧಿಸುತ್ತಿದೆ.

ಕಾರ್ಯಕ್ರಮದಲ್ಲಿ ದಿವ್ಯಾ ಸಿಂಗ್, ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ ಪ್ರಕಾಶ್ ರಾವ್ ಉಪಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕರು, ಶಾಲಾ ವೈದ್ಯಾಧಿಕಾರಿಗಳು, ವಿವಿಧ ತಂಡಗಳ ಮೇಲ್ವಿಚಾರಕರು, ವ್ಯವಸ್ಥಾಪಕರು, ತರಬೇತುದಾರರು, ತೀರ್ಪುಗಾರರು, ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ಎನ್‌ಸಿಸಿ ಪಿಐ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕೆಡೆಟ್ ಭಾಗ್ಯಶ್ರೀ ಸ್ವಾಗತಿಸಿದರು.