ಮಡಿಕೇರಿ, ಏ. ೨೫: ರಾಜ್ಯ ಸರಕಾರ ಅಳಿವಿನಂಚಿನಲ್ಲಿರುವ ಹಾಗೂ ವಿಭಿನ್ನ, ಸಂಸ್ಕೃತಿ ಆಚಾರ-ವಿಚಾರಗಳನ್ನೊಳಗೊಂಡಿರುವ ಭಾಷೆಗಳ ಉಳಿವು ಹಾಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿವಿಧ ಭಾಷಾ ಅಕಾಡೆಮಿಗಳನ್ನು ಸ್ಥಾಪಿಸಿದೆ. ಸರಕಾರದಿಂದಲೇ ಈ ಅಕಾಡೆಮಿಗಳಿಗೆ ಅನುದಾನ ಮೀಸಲಿಟ್ಟು ವಿವಿಧ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಸಲುವಾಗಿ ಪ್ರೋತ್ಸಾಹ ಕೂಡ ನೀಡುತ್ತಿದೆ. ಪ್ರತಿ ಅಕಾಡೆಮಿಗಳಿಗೂ ಅಧ್ಯಕ್ಷ, ಸದಸ್ಯರುಗಳನ್ನು ನೇಮಕ ಮಾಡಿ ಅಕಾಡೆಮಿಯನ್ನು ಸುಸೂತ್ರವಾಗಿ ಮುನ್ನಡೆಸಿಕೊಂಡು ಹೋಗಲು ಅವಕಾಶ ಕೂಡ ಮಾಡಿಕೊಟ್ಟಿದೆ.
ಈ ಭಾಷಾ ಅಕಾಡೆಮಿಗಳ ಪೈಕಿ ಕೊಡವ, ತುಳು, ಕೊಂಕಣಿ, ಅರೆಭಾಷೆ ಹಾಗೂ ಬ್ಯಾರಿ ಅಕಾಡೆಮಿಗಳು ಸೇರಿವೆ. ಈ ಎಲ್ಲಾ ಅಕಾಡೆಮಿಗಳು ಕೂಡ ತಮ್ಮ ಭಾಷೆ ಸಾಹಿತ್ಯ, ಸಂಸ್ಕೃತಿಯನ್ನು ಪಸರಿಸುವ ಕೆಲಸ ಮಾಡುತ್ತಲೇ ಬಂದಿದೆ. ಇದೀಗ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯದಲ್ಲೇ ಇದೇ ಪ್ರಥಮ ಬಾರಿಗೆ ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಬ್ಯಾರಿ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಿದೆ. ಇದುವರೆಗೂ ದಕ್ಷಿಣ ಕನ್ನಡ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ಸಮ್ಮೇಳನಗಳು ನಡೆಯುತ್ತಿದ್ದವೇ ಹೊರತು ಜಿಲ್ಲಾ ಕೇಂದ್ರದಲ್ಲಿ ನಡೆದಿರಲಿಲ್ಲ. ರಾಜ್ಯದಲೇ ಪ್ರಥಮ ಬಾರಿಗೆ ಜಿಲ್ಲಾಕೇಂದ್ರದಲ್ಲಿ ಈ ಸಮ್ಮೇಳನ ಆಯೋಜಿಸಲಾಗಿದೆ.
೨೮ ರಂದು ಕಾರ್ಯಕ್ರಮ
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಡಗು ಬ್ಯಾರೀಸ್ ವೆಲ್ಫೇರ್ ಟ್ರಸ್ಟ್ ಸಹಯೋಗದೊಂದಿಗೆ ತಾ. ೨೮ ರಂದು ಮಡಿಕೇರಿಯ ಕಾವೇರಿ ಹಾಲ್ನಲ್ಲಿ ಸಮ್ಮೇಳನ ನಡೆಯಲಿದೆ. ವಿವಿಧ ಕಾರ್ಯಕ್ರಮಗಳೊಂದಿಗೆ ಒಂದು ದಿನವಿಡೀ ಕಾವೇರಿ ಹಾಲ್ನಲ್ಲಿ ಬ್ಯಾರಿ ಸಾಹಿತ್ಯ, ಸಂಸ್ಕೃತಿಯ ರಂಗು ಮೇಳೈಸಲಿದೆ.
ಕಾರ್ಯಕ್ರಮಗಳು
ಬೆಳಿಗ್ಗೆ ೯.೩೦ಕ್ಕೆ ಕ್ರೆಸೆಂಟ್ ಶಾಲೆಯಿಂದ ಕಾವೇರಿ ಹಾಲ್ವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ನಗರಸಭಾ ಸದಸ್ಯ ಅಮೀನ್ ಮೊಹಿಸಿನ್ ಉದ್ಘಾಟಿಸುವರು. ೧೦.೧೫ಕ್ಕೆ ಧ್ವಜಾರೋಹಣವನ್ನು ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮ್ಮರ್ ಯು.ಹೆಚ್. ನೆರವೇರಿಸುವರು. ೧೦.೩೦ಕ್ಕೆ ಮರ್ಹೊಮ್ ಅಬ್ದುಲ್ ಖಾದರ್ ಹಾಜಿ ಸಭಾಂಗಣ ಹಾಗೂ ಮರ್ಹೊಮ್ ಮೊಯಿದ್ದೀನ್ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎಂ. ಫಾರೂಕ್ ಉದ್ಘಾಟಿಸುವರು. ನಂತರ ಸಮ್ಮೇಳನಾಧ್ಯಕ್ಷರ ಭಾಷಣ ನೆರವೇರಲಿದೆ. ಮುಖ್ಯ ಭಾಷಣಗಾರರಾಗಿ, ಹಿರಿಯ ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಆಗಮಿಸುವರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್, ಕರ್ನಾಟಕ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಮೆಹ್ರೋಜ್ ಖಾನ್, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ, ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್, ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಉಪಸ್ಥಿತರಿರಲಿದ್ದಾರೆ. ಅತಿಥಿಗಳಾಗಿ ನಗರಸಭಾ ಸದಸ್ಯರುಗಳಾದ ಎಂ.ಎ. ಮುಸ್ತಾಫ, ಬಶೀರ್ ಅಹ್ಮದ್, ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಮಹಮ್ಮದ್ ಯಾಕೂಬ್ ಇರಲಿದ್ದು, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಯು.ಹೆಚ್. ಉಮರ್ ಅಧ್ಯಕ್ಷ ವಹಿಸುತ್ತಾರೆ.
ಭಾಷಣದ ಮೇಲೆ ಚರ್ಚೆ
ಮಧ್ಯಾಹ್ನ ೨ ರಿಂದ ೩ರವರಗೆ ಸಮ್ಮೇಳನಾಧ್ಯಕ್ಷರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಬೆಂಗಳೂರಿನ ಪತ್ರಕರ್ತ ಹಾಗೂ ಸಾಹಿತಿ ಬಿ.ಎಂ. ಹನೀಫ್ ನಿರೂಪಣೆ ಮಾಡಲಿದ್ದು, ಬೀದರ್ನ ಶಾಹಿನ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ತೌಸಿಫ್ ಮಡಿಕೇರಿ, ಸೋಮವಾರಪೇಟೆಯ ಸರಕಾರಿ ವೈದ್ಯೆ ಡಾ. ಅಫ್ರೀನ್, ಪತ್ರಕರ್ತ ಹಂಝ ಮಲಾರ್ ಭಾಗವಹಿಸಲಿದ್ದಾರೆ.
ಬ್ಯಾರಿ ಕವಿಗೋಷ್ಠಿ
ಮಧ್ಯಾಹ್ನ ೩ ರಿಂದ ಬ್ಯಾರಿ ಕವಿಗೋಷ್ಠಿ ನಡೆಯಲಿದೆ. ಇ. ಸುಲೇಮಾನ್ ಅಧ್ಯಕ್ಷತೆಯಲ್ಲಿ ನಡೆಯುವ ಗೋಷ್ಠಿಯಲ್ಲಿ ಅಬ್ದಲ್ಲಾ ಮಡಿಕೇರಿ, ರಷ್ಮಾ ನಾಸಿರ್, ಎಸ್.ಎ. ಮುನೀರ್ ಅಹ್ಮದ್, ಎಂ.ಇ. ಮಹಮ್ಮದ್, ರಹಮತ್, ಅಖಿಲಾ ಕಲೀಮ್, ಫಾತಿಮಾ ರಿಫಾ, ಅಶ್ರಫ್ ಅಪೊಲೋ, ಎಂ.ಬಿ. ನಾಸೀರ್ ಭಾಗವಹಿಸುವರು.
ಸಮಾರೋಪ
ಸಂಜೆ ೪.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ, ಶಾಸಕ ಡಾ. ಮಂತರ್ ಗೌಡ ಉಪಸ್ಥಿತರಿರುವರು. ಅತಿಥಿಗಳಾಗಿ ಬೆಂಗಳೂರಿನ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಷಂಶುದ್ದೀನ್ ಅಡೂರು, ಮೈಸೂರಿನ ಅಧ್ಯಕ್ಷ ಹಾಜಿ ಯು.ಕೆ. ಹಮೀದ್, ನಗರಸಭಾ ಸದಸ್ಯ ಅಮೀನ್ ಮೊಹಿಸಿನ್, ಮನ್ಸೂರ್ ಅಹಮ್ಮದ್ ಉಪಸ್ಥಿತರಿರುವರು.
ಸಾಧಕರಿಗೆ ಸನ್ಮಾನ
ಇದೇ ಸಂದರ್ಭ ಬ್ಯಾರಿ ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗುತ್ತದೆ.
ಸಮಾಜ ಸೇವೆಗೆ ನಗರಸಭಾ ಮಾಜಿ ಸದಸ್ಯ ಅಬ್ದುಲ್ ರಜಾಕ್, ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಎಂ.ಇ. ಮಹಮ್ಮದ್, ಸಮಾಜ ಸೇವೆಗೆ ಆದಂ ಸೋಮವಾರಪೇಟೆ, ಯಾಂತ್ರಿಕ ಕ್ಷೇತ್ರದಲ್ಲಿ ಸುಲೇಮಾನ್, ನಾಟಿ ವೈದ್ಯ ಕೊಡ್ಲಿಪೇಟೆಯ ಅಬೂಬಕ್ಕರ್ ಸಿದ್ದಿಕ್, ಆಶಾಕಾರ್ಯಕರ್ತೆ ಶಾಹಿದ ಬಾನು, ಸಮುದಾಯ ಸೇವೆಗೆ ಅಮಿನಾ, ಶಿಕ್ಷಣ ಕ್ಷೇತ್ರ ತೌಸಿಫ್ ಅಹ್ಮದ್, ಸಮಾಜ ಸೇವೆಗೆ ಎಂ.ಇ. ಫಾರೂಕ್, ಆಶಾಕಾರ್ಯಕರ್ತೆ ಝೊಹರಾಬಿ ಮಡಿಕೇರಿ, ಸಮಾಜ ಸೇವೆಗೆ ಬಿ.ಕೆ. ಅಜೀಜ್ ಕುಶಾಲನಗರ ಇವರುಗಳನ್ನು ಸನ್ಮಾನಿಸಲಾಗುವುದು.
ಇದರೊಂದಿಗೆ ದಫ್, ಒಪ್ಪನೆ ಪಾಟ್, ಕೋಲ್ಕಲಿ, ಬ್ಯಾರಿ ಹಾಡುಗಳ ಸಂಭ್ರಮ, ಬ್ಯಾರಿ ಪ್ರಹಸನ ಕೂಡ ನಡೆಯಲಿದೆ
- ಕುಡೆಕಲ್ ಸಂತೋಷ್