ಸೋಮವಾರಪೇಟೆ, ಏ. ೨೫: ಅರಣ್ಯ ಇಲಾಖೆಯ ಹುಲಿ ಮಿತ್ರ ಯೋಜನೆಯ ವತಿಯಿಂದ ‘ಮ್ಯಾನೇಜ್ಮೆಂಟ್ ಆಫ್ ಟೈರ್ಸ್’ ಘೋಷಣೆಯಡಿಯಲ್ಲಿ ಪಟ್ಟಣ ಸಮೀಪದ ಬಳಗುಂದ ಸರ್ಕಾರಿ ಶಾಲಾ ಮೈದಾನದಲ್ಲಿ ಸರ್ಕಾರಿ ಇಲಾಖೆಗಳು, ಸಾರ್ವಜನಿಕ ಸಂಘ ಸಂಸ್ಥೆಗಳ ನಡುವೆ ಆಯೋಜಿಸಿರುವ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟಕ್ಕೆ ವೀರಾಜಪೇಟೆ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕ್ರೀಡಾಕೂಟಗಳು ಪರಸ್ಪರ ಬಾಂಧವ್ಯ ಬೆಸೆಯಲು ಸಹಕಾರಿಯಾಗಿವೆ. ಸೋಲು ಗೆಲುವನ್ನು ಬಿಟ್ಟು ಕ್ರೀಡಾಮನೋಭಾವದಿಂದ ಎಲ್ಲರೂ ಭಾಗವಹಿಸಬೇಕು. ಕ್ರೀಡೆಯಿಂದ ಸಹೋದರತೆ, ಭ್ರಾತೃತ್ವ ಹೆಚ್ಚುತ್ತದೆ. ಕ್ರೀಡಾಪಟುಗಳಿಗೆ ಇಚ್ಚಾಶಕ್ತಿ ಬೇಕು ಎಂದರು. ಸಾಮೂಹಿಕವಾಗಿ ಕ್ರೀಡೆಯ ಮೂಲಕ ಎಲ್ಲರೂ ಒಂದಾಗಬೇಕು ಎಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ದೇಶನದಂತೆ ಅರಣ್ಯ ಇಲಾಖೆಯ ವತಿಯಿಂದ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ತಿಳಿಸಿದರು. ಅರಣ್ಯ ಇಲಾಖೆ ಜನರ ಪರವಾಗಿದೆ. ಜನರ ಕಷ್ಟ ಕಾರ್ಪಣ್ಯಗಳಿಗೆ ಇಲಾಖೆ ಸ್ಪಂದಿಸುತ್ತಿದೆ. ಇಲಾಖೆಗಳ ನಡುವೆ ಪರಸ್ಪರ ಸಹಕಾರ ಇರಬೇಕು. ಸಮಾಜವನ್ನು ಇಲಾಖೆಯೊಂದಿಗೆ ಒಂದುಗೂಡಿಸುವ ಕಾರ್ಯಕ್ರಮಗಳನ್ನು ಮುಂದೆಯೂ ಹಮ್ಮಿಕೊಳ್ಳಲಾಗುವುದು ಎಂದರು.
ಎ.ಸಿ.ಎಫ್. ಗೋಪಾಲ್ ಮಾತನಾಡಿ ಅರಣ್ಯ ಇಲಾಖೆಯ ಹುಲಿ ಮಿತ್ರ ಯೋಜನೆಯ ಮೂಲಕ ಕ್ರೀಡಾಕೂಟವನ್ನು ಹಮ್ಮಿಕೊಂಡಿದ್ದೇವೆ. ಪರಸ್ಪರ ಬಾಂಧವ್ಯ ವೃದ್ಧಿಗೆ ಇಂತಹ ಕ್ರೀಡಾಕೂಟ ಸಹಕಾರಿ. ಮಾನವ-ವನ್ಯಪ್ರಾಣಿಗಳ ಸಂಘರ್ಷಗಳ ನಡುವೆ ನಾವು ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಸಹಕಾರ ಅರಣ್ಯ ಇಲಾಖೆಗೆ ಅಗತ್ಯವಾಗಿದೆ ಎಂದು ತಿಳಿಸಿದರು. ವಲಯ ಅರಣ್ಯಾಧಿಕಾರಿ ಶೈಲೇಂದ್ರ ಮಾತನಾಡಿ, ಅರಣ್ಯ ಸಂರಕ್ಷಣೆ, ವನ್ಯಪ್ರಾಣಿಗಳ ಸಂರಕ್ಷಣೆಯಲ್ಲಿ ಸಾರ್ವಜನಿಕರ ಸಹಕಾರ ಇಲಾಖೆಗೆ ಅತೀ ಅಗತ್ಯವಾಗಿದೆ. ಅರಣ್ಯ ಇಲಾಖೆಯು ಜನಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ ಎಂದರು. ಪೊಲೀಸ್ ಇನ್ಸ್ಪೆಕ್ಟರ್ ಮುದ್ದುಮಹದೇವ ಮಾತನಾಡಿ, ಅರಣ್ಯ ಇಲಾಖೆ, ಇತರ ಸರ್ಕಾರಿ ಇಲಾಖೆ, ಸಂಘ ಸಂಸ್ಥೆಗಳನ್ನು ಒಳಗೊಂಡAತೆ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ ಎಂದÀರು.
ಈ ಸಂದರ್ಭ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪೂಜಶ್ರೀ ಉಪಸ್ಥಿತರಿದ್ದರು. ಕ್ರೀಡಾ ತರಬೇತುದಾರ ಅಂತೋಣಿ ಡಿಸೋಜ ಅವರು ಕಾರ್ಯಕ್ರಮ ನಿರ್ವಹಿಸಿದರು. ಲೀಗ್ ಮಾದರಿಯಲ್ಲಿ ಆಯೋಜಿಸಿರುವ ಹುಲಿಮಿತ್ರ ಯೋಜನೆಯ ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು ೧೦ ತಂಡಗಳು ಭಾಗವಹಿಸಿದ್ದು, ತಾ. ೨೬ರಂದು (ಇಂದು) ಸಮಾರೋಪ ಹಾಗೂ ಬಹುಮಾನ ವಿತರಣೆ ನಡೆಯಲಿದೆ.