ಪೊನ್ನಂಪೇಟೆ, ಏ. ೨೫: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ೩ನೇ ವರ್ಷದ ಟಿ-೨೦ ಮಾದರಿಯ ಕೊಡವ ಲೆದರ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್‌ನ ಕ್ವಾಲಿಫೈಯರ್ ೨ ಪಂದ್ಯದಲ್ಲಿ ಟೀಮ್ ಕೊಡವ ಟ್ರೆöÊಬ್ ತಂಡದ ವಿರುದ್ಧ ಗೆಲುವು ಸಾಧಿಸುವ ಮೂಲಕ ಎಂ.ಟಿ.ಬಿ ರಾಯಲ್ಸ್ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಅಂಜಿಗೇರಿ ನಾಡ್ ತಂಡದ ವಿರುದ್ಧ ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಾಟ ನಡೆಸಲಿದೆ.

ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಕೊಡವ ಟ್ರೆöÊಬ್ ನಿಗದಿತ ೨೦ ಓವರ್‌ಗಳಲ್ಲಿ ೮ ವಿಕೆಟ್ ಕಳೆದುಕೊಂಡು ೧೩೧ ರನ್‌ಗಳ ಮೊತ್ತ ಕಲೆಹಾಕಿ, ಎಂ.ಟಿ.ಬಿ ರಾಯಲ್ಸ್ಗೆ ೧೩೨ ರನ್‌ಗಳ ಗುರಿ ನೀಡಿತು. ಚೆಂಗಪ್ಪ ೨೫ ಎಸೆತಗಳಲ್ಲಿ ೩೪, ಅಂಕುಶ್ ಬೋಪಣ್ಣ ೩೧ ಎಸೆತಗಳಲ್ಲಿ ೨೨, ಎನ್.ಸಿ. ಅಯ್ಯಪ್ಪ ೧೩ ಎಸೆತಗಳಲ್ಲಿ ೨೦ ರನ್‌ಗಳ ಕಾಣಿಕೆ ನೀಡಿದರು. ಎಂ.ಟಿ. ಬಿ ರಾಯಲ್ಸ್ ಪರ, ಪ್ರತೀಕ್ ತಿಮ್ಮಯ್ಯ ೨ ವಿಕೆಟ್, ಸುಕ್ಕಿ, ಅಯ್ಯಪ್ಪ, ಶಿಪ್ರೆಜ್ ಸೋಮಣ್ಣ, ನೆಲ್ ತಲಾ ೧ ವಿಕೆಟ್ ಪಡೆದರು. ಗೆಲ್ಲಲು ೧೩೨ ರನ್ ಗುರಿ ಬೆನ್ನಟ್ಟಿದ ಎಂ.ಟಿ.ಬಿ ರಾಯಲ್ಸ್ ೧೭.೨ ಓವರ್‌ಗಳಲ್ಲಿ ೩ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿ, ಫೈನಲ್‌ಗೆ ಪ್ರವೇಶ ಪಡೆದುಕೊಂಡಿತು.

ಮಿಥುನ್ ಮುತ್ತಣ್ಣ ೪೧ ಎಸೆತಗಳಲ್ಲಿ ೪೪ ರನ್, ನೆಲ್ ೨೯ ಎಸೆತಗಳಲ್ಲಿ ೪೦, ಸುಕ್ಕಿ ೨೨ ಎಸೆತಗಳಲ್ಲಿ ೧೯ ರನ್ ಬಾರಿಸಿದರು. ಟೀಮ್ ಕೊಡವ ಟ್ರೈಬ್ ಪರ ಅಯ್ಯಪ್ಪ ಮತ್ತು ಪೊನ್ನಪ್ಪ ತಲಾ ೧ ವಿಕೆಟ್ ಪಡೆದರು. ಮಿಥುನ್ ಮುತ್ತಣ್ಣ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡವ ಲೆದರ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಆಯೋಜಕರ ತಂಡದ ನಡುವೆ ನಡೆದ ಪ್ರದರ್ಶನ ಪಂದ್ಯದಲ್ಲಿ, ಕೊಡವ ಲೆದರ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಆಯೋಜಕರ ತಂಡ ಜಯಗಳಿಸಿತು. ಇಂದು ಬೆಳಿಗ್ಗೆ ೧೦.೩೦ಕ್ಕೆ ಅಂತಿಮ ಹಣಾಹಣಿ ನಡೆಯಲಿದೆ. - ಚನ್ನನಾಯಕ