ಮದೆನಾಡು, ಏ. ೨೪: ಮದೆ ಮಹೇಶ್ವರ ಪ್ರೌಢಶಾಲೆಯ ೧೯೯೫-೯೬ನೇ ಸಾಲಿನ ೧೦ನೇ ತರಗತಿಯ ಸಹಪಾಠಿಗಳ ಸ್ನೇಹ ಸಮ್ಮಿಲನ ಹಾಗೂ ಆಗಿನ ಶಿಕ್ಷಕ ವೃಂದದವರಿಗೆ ಗುರುವಂದನಾ ಕಾರ್ಯಕ್ರಮ ಮದೆನಾಡಿನ ಬಿಜಿಎಸ್ ಪಬ್ಲಿಕ್ ಶಾಲೆಯ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸುಮಾರು ೫೬ ಹಳೆ ವಿದ್ಯಾರ್ಥಿಗಳು ಸೇರಿದ್ದು ವಿಶೇಷವಾಗಿತ್ತು. ಮುಖ್ಯ ಅತಿಥಿಗಳಾದ ಗುರುವೃಂದದವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮೃತಪಟ್ಟ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸುಮಾರು ೩೦ ವರ್ಷಗಳ ಅಂದಿನ ಶಾಲಾ ದಿನಗಳ ಗೆಳೆತನ, ಗುರುಗಳ ಮಾರ್ಗದರ್ಶನವನ್ನು ನೆನಪಿಸಿಕೊಂಡರು.
ಈ ಸಂದರ್ಭ ಗುರುಗಳನ್ನು ಶಾಲು, ಹಣ್ಣು ಹಂಪಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಳೆಯ ಸಹಪಾಠಿಗಳಿಗೂ ಸ್ಮರಣಿಕೆ ನೀಡಲಾಯಿತು. ಸಮಿತಿ ಅಧ್ಯಕ್ಷ ಹಳೆ ವಿದ್ಯಾರ್ಥಿ ಬಿ.ಎಸ್. ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಇಬ್ರಾಹಿಂ ಜಿ.ಎ., ಮಾಧವ ಸ್ವಾಗತಿಸಿದರು, ದಿನೇಶ್ ಬಿ.ಸಿ. ಕಾರ್ಯಕ್ರಮ ನಿರೂಪಿಸಿದರು, ಎಂ.ಟಿ. ರೀಮಾ ಮನರಂಜನಾ ಕಾರ್ಯಕ್ರಮ ನಡೆಸಿದರು. ಯಶೋಧ ವಂದಿಸಿದರು. ರಾಷ್ಟçಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತ್ತು.