ಮರಗೋಡು, ಏ. ೨೪: ಸುಮಾರು ೬೦೦ ವರ್ಷಗಳ ಇತಿಹಾಸ ಹೊಂದಿರುವ ಮರಗೋಡು ಗ್ರಾಮದ ಶ್ರೀ ಶಿವ ಪಾರ್ವತಿ ದೇವರ ವಾರ್ಷಿಕ ಮಹಾಪೂಜೆಯು ತಾ.೨೭ ರಿಂದ ಪ್ರಾರಂಭವಾಗಿ ಮೇ.೩ ರವರೆಗೆ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ನಡೆಯಲಿದೆ.

ತಾ.೨೭ ರ ಮಧ್ಯರಾತ್ರಿ ೧೨ ಗಂಟೆಗೆ ಶ್ರೀ ಪಾರ್ವತಿ ಪರಮೇಶ್ವರ ಸನ್ನಿಧಿಯಲ್ಲಿ ದೇವರ ಕಟ್ಟು ಬೀಳುವುದು. ಈ ಸಂದರ್ಭದಲ್ಲಿ ಮರಗೋಡು ಗ್ರಾಮ ವ್ಯಾಪ್ತಿಯಲ್ಲಿ ಹಸಿರು ಮರ ಮತ್ತು ಪ್ರಾಣಿ ಬಲಿ ಸಂಪೂರ್ಣ ನಿಷೇಧ ಇರಲಿದ್ದು ಗ್ರಾಮಸ್ಥರು ಈ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಹಲವಾರು ವರ್ಷಗಳಿಂದ ಪಾಲಿಸಿಕೊಡು ಬರುತ್ತಿದ್ದಾರೆ.

ಅಂದು ರಾತ್ರಿ ಮರಗೋಡು ಶಿವ ಪಾರ್ವತಿ ದೇವಾಲಯದಿಂದ ಊರಿನ ತಕ್ಕ ಮುಖ್ಯಸ್ಥರು, ಗ್ರಾಮಸ್ಥರು ಪರಮೇಶ್ವರನ ಮೂಲ ಸನ್ನಿಧಿ ಕುಂದಿಮೆಗೆ ಪಾಂಡನ ಕುಟುಂಬದಲ್ಲಿ ಇರುವ ದೇವರ ಭಂಡಾರವನ್ನು ತೆಗೆದುಕೊಂಡು ಹೋಗಿ ಶಿವಲಿಂಗವಿರುವ ಕುಂದಿಮೆಯಲ್ಲಿ ವಿವಿಧ ಪೂಜಾ ಕಾರ್ಯಕ್ರಮ ನಡೆಸಲಿದ್ದಾರೆ. ತಾ.೨೮ ರಂದು ಸಂಜೆ ಶಿವ ಪಾರ್ವತಿ ದೇವರ ಉತ್ಸವ ಮೂರ್ತಿ ದೇವಾಲಯದಿಂದ ಹೊರಬಂದು ೭ ಬಾರಿ ಪ್ರದಕ್ಷಿಣೆ ಬಂದು ಅಷ್ಟಧಿಕ್ಪಾಲಕರಿಗೆ ಅಕ್ಷತೆಯನ್ನು ಹಾಕಿ ಮಹಾಪೂಜೆಯೊಂದಿಗೆ ದೇವರ ಗರ್ಭಗುಡಿಯಲ್ಲಿ ಶಿವ ಪಾರ್ವತಿಯರ ಬಿಂಬವನ್ನು ಇರಿಸಲಾಗುತ್ತದೆ.

ತಾ.೨೯ರ ಬೆಳಿಗ್ಗೆ ಮತ್ತು ಸಂಜೆ ದೇವರ ಪ್ರದಕ್ಷಣೆ ಮತ್ತು ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ತಾ.೩೦ ರಂದು ಪಟ್ಟಣಿ ಎಂಬ ಕಾರ್ಯಕ್ರಮ ಜರುಗಲಿದ್ದು, ಈ ಸಂದರ್ಭ ಗ್ರಾಮದ ನಿವಾಸಿಗಳು ಬೆಳಗಿನ ಉಪಹಾರವನ್ನು ಸೇವಿಸದೆ ದೇವಾಲಯಕ್ಕೆ ಬಂದು ಶಿವ ಪಾರ್ವತಿ ದೇವರ ಆಶೀರ್ವಾದ ಪಡೆದು ದೇವರ ತೀರ್ಥವನ್ನು ಪಡೆದು ಮನೆಗಳಿಗೆ ತೆರಳಿ ಮನೆಯನ್ನು ಸ್ವಚ್ಛಗೊಳಿಸಿ ನಂತರ ದೇವಾಲಯಕ್ಕೆ ತೆರಳಿ ಪಾರ್ವತಿ ಪರಮೇಶ್ವರ ದೇವರ ಉತ್ಸವದಲ್ಲಿ ಪಾಲ್ಗೊಂಡು ಹಿಂತಿರುಗುವ ಪದ್ಧತಿ ಇಂದಿಗೂ ಕೂಡ ಪಾಲನೆಯಾಗುತ್ತಿದೆ.

ಮೇ.೧ ರಂದು ದೇವರ ಜಳಕ ಹಾಗೂ ದೇವರ ಕಟ್ಟು ಮುರಿಯುವ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು ಅಂದು ಸಂಜೆ ಈ ಉತ್ಸವದ ಕೊನೆಯ ಭಾಗವಾಗಿ ಪಾರ್ವತಿ ಪರಮೇಶ್ವರ ದೇವರ ಉತ್ಸವ ಮೂರ್ತಿ ಸರ್ವಭಕ್ತ ಘಣಾದಿಗಳಿಗೆ ಆಶೀರ್ವಾದವನ್ನು ನೀಡಲಿದೆ.

ಅಂದು ರಾತ್ರಿ ೧೨ ಗಂಟೆಯ ನಂತರ ಪರಮೇಶ್ವರ ಸನ್ನಿಧಿ ಕುಂದುಮೆಗೆ ಪಾರ್ವತಿ ಪರಮೇಶ್ವರ ದೇವರ ವ್ಯಭವಮೂರ್ತಿ ಊರಿನ ತಕ್ಕ ಮುಕ್ಕಾಟಿ ಕುಟುಂಬ ಮತ್ತು ಊರಿನವರು, ಪಾಂಡನ ಕುಟುಂಬದಲ್ಲಿ ದೇವರ ಬಂಡಾರವನ್ನು ಇಟ್ಟು ಶಿವನ ಮೂಲ ಸ್ಥಳಕ್ಕೆ ತೆರಳಿ ಅಲ್ಲಿ ಮಹಾಪೂಜೆ ನಡೆದು ಹಿಂತಿರುಗಿ ಬರುವ ಸಂಪ್ರದಾಯವಿದೆ.

ಮೇ.೨ ರಂದು ರಾತ್ರಿ ಮುಕ್ಕಾಟಿ ಕುಟುಂಬದಲ್ಲಿ ಇರುವ ಊರಿನ ತೆರೆ ಅಂದರೆ ಪಾರ್ವತಿ ಪರಮೇಶ್ವರ ದೇವರ ಭಕ್ತ ಗಣಗಳ ಭಂಡಾರವನ್ನು ತೆಗೆದುಕೊಂಡು ಕುಂದಿಮೆಯಲ್ಲಿ ವಿವಿಧ ದೇವರ ಕಾರ್ಯಕ್ರಮಗಳು ಜರುಗಿ ೭ ದಿನಗಳ ಶ್ರೀ ಪಾರ್ವತಿ ಪರಮೇಶ್ವರ ಉತ್ಸವ ಸಮಾಪ್ತಿಗೊಳ್ಳುತ್ತದೆ.