ಮಡಿಕೇರಿ, ಏ. ೨೪: ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಸ್ಥಳೀಯ ಸಂಸ್ಥೆಗಳು ಮಹತ್ವದ್ದಾಗಿದ್ದು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳಿಗೆ ಶೀಘ್ರ ಚುನಾವಣೆ ನಡೆಸಲು ಸರಕಾರ ಅಗತ್ಯ ಕ್ರಮ ವಹಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿ.ಜೆ.ಪಿ.ಯಿಂದ ಇಂದು ಪ್ರತಿಭಟನೆ ನಡೆಸಲಾಯಿತು.
ಮಡಿಕೇರಿಯ ಕಾನ್ವೆಂಟ್ ಜಂಕ್ಷನ್‌ನಲ್ಲಿ ತಾಲೂಕು ಸೌಧ ಕಟ್ಟಡದ ಎದುರು ಬಿ.ಜೆ.ಪಿ. ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮುಂದಾಳತ್ವದಲ್ಲಿ ಪಕ್ಷದ ಪ್ರಮುಖರು, ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಶೀಘ್ರ ಚುನಾವಣೆಗೆ ಒತ್ತಾಯಿಸಿದರು.
ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಇದೀಗ ಅಧಿಕಾರ ಮುಗಿದಿರುವ ಗ್ರಾ.ಪಂ.ಗಳಿಗೆ ಚುನಾವಣೆ ನಡೆಸಬೇಕಿದೆ. ಅದರಲ್ಲೂ ಜಿ.ಪಂ. ಹಾಗೂ ತಾ.ಪಂ.ಗಳಿಗೆ ಕಳೆದ ಆರು ವರ್ಷಗಳಿಂದ ಚುನಾವಣೆ ನಡೆದಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಲ್ಲಿ ಮಾತ್ರ ಕೇಂದ್ರ ಸರಕಾರದಿಂದ ಅನುದಾನ ಬರುತ್ತದೆ. ಇದೀಗ ಅನುದಾನಕ್ಕೂ ತೊಂದರೆಯಾಗಿದೆ. ಸರಕಾರದ ಹಠಮಾರಿತನದಿಂದ ಚುನಾವಣೆ ವಿಳಂಬವಾಗುತ್ತಿದೆ ಎಂದು ಆಕ್ಷೇಪಿಸಲಾಯಿತು. ಈ ಹಿನ್ನೆಲೆ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಸರಕಾರಕ್ಕೆ ಸೂಚನೆ ನೀಡುವಂತೆ ಒತ್ತಾಯಿಸಿ ತಾಲೂಕು ಸೌಧದ ಆಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭ ಮಾತನಾಡಿದ ರವಿ ಕಾಳಪ್ಪ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ವಿಕೇಂದ್ರೀಕರಣ ಮಹತ್ವದ್ದಾಗಿದೆ. ಇದೀಗ ಗ್ರಾ.ಪಂ.ಗಳ ಅಧಿಕಾರವೂ ಮುಗಿದಿರುವುದು ಜನರಿಗೆ ಇನ್ನಷ್ಟು ಸಮಸ್ಯೆಯಾಗುತ್ತಿದೆ. ಸರಕಾರ ಶೀಘ್ರ ಚುನಾವಣೆಗೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಪಕ್ಷದ ಪ್ರಮುಖರಾದ ರವಿ ಕುಶಾಲಪ್ಪ, ನಾಗೇಶ್ ಕುಂದಲ್ಪಾಡಿ, ತಳೂರು ಕಿಶೋರ್ ಕುಮಾರ್ ಅವರುಗಳು ಈ ಬಗ್ಗೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಬಿ.ಕೆ. ಜಗದೀಶ್, ಕಾಂಗಿರ ಸತೀಶ್, ಬೊಳ್ಳಜಿರ ಅಯ್ಯಪ್ಪ, ಡೀನ್ ಬೋಪಣ್ಣ ಮತ್ತಿತರರು ಪಾಲ್ಗೊಂಡಿದ್ದರು.