ಮಡಿಕೇರಿ, ಏ. ೨೪: ಜಿಲ್ಲೆಯಲ್ಲಿರುವ ವಿದ್ಯಾಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳು ತಮ್ಮಲ್ಲಿರುವ ಗ್ರಂಥಾಲಯಗಳನ್ನು ಮುಂದಿಟ್ಟುಕೊAಡು ಪ್ರತಿವರ್ಷ ವಿಶ್ವ ಪುಸ್ತಕ ದಿನವನ್ನು ಆಚರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಬೆಳೆಸಲು ಮುಂದಾಗಬೇಕು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಟಿ.ಪಿ. ರಮೇಶ್ ಅವರು ಕರೆ ನೀಡಿದರು.
ಕನ್ನಡ ಪುಸ್ತಕ ಪ್ರಾಧಿಕಾರ, ಕೊಡಗು ಜಿಲ್ಲಾ ಕನ್ನಡ ಜಾಗೃತಿ ಸಮಿತಿ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ನಗರದ ಕೊಡಗು ಪತ್ರಿಕಾಭವನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ದಿನದ ಮಹತ್ವ ಕುರಿತು ಮಾತನಾಡಿದರು.
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಮೊಬೈಲ್, ಅಂತರ್ಜಾಲ, ಕಂಪ್ಯೂಟರ್ ಯುಗದಲ್ಲಿ ನಾವು ಮುಂದಿದ್ದರೂ, ಓದುವ ಹವ್ಯಾಸದಲ್ಲಿ ಹಿಂದುಳಿದಿದ್ದೇವೆ. ಪುಸ್ತಕ ಓದುವುದರಿಂದ ಸಿಗುವ ಜ್ಞಾನ, ಸಂತೋಷ ಮತ್ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಅವರು, ಪುಸ್ತಕಗಳನ್ನು ಓದುವುದರಿಂದ ನಮ್ಮ ಜೀವನವನ್ನೇ ಬದಲಾಯಿಸಿಕೊಳ್ಳಬಹುದಾಗಿದೆ ಎಂದು ನುಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ಪತ್ರಿಕಾಭವನ ಟ್ರಸ್ಟ್ನ ಕೋಶಾಧಿಕಾರಿ ಕೆ. ತಿಮ್ಮಪ್ಪ ಮಾತನಾಡಿ, ಪುಸ್ತಕಗಳು ಜ್ಞಾನದ ಕಿಟಕಿಗಳಿದ್ದಂತೆ. ಅವು ಸಂಸ್ಕೃತಿ ಮತ್ತು ತಲೆಮಾರುಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ. ಪುಸ್ತಕಗಳು ಬದುಕಿನ ಕೈಗನ್ನಡಿ ಮತ್ತು ಸಮಾಜದ ಪ್ರತಿಬಿಂಬ. ಪುಸ್ತಕಗಳು ಮಾನವ ಮಿತ್ರ ಮಾತ್ರವಲ್ಲದೆ, ಜ್ಞಾನ ನೀಡುವ ಕಲ್ಪವೃಕ್ಷವಿದ್ದಂತೆ ಎಂದು ವಿಶ್ಲೇಷಿಸಿದರು.
ಇಂದಿನ ಈ ಮೊಬೈಲ್ ಯುಗದಲ್ಲಿ ಪುಸ್ತಕ ಓದುವ ಹವ್ಯಾಸವೇ ಜನರಿಂದ ದೂರವಾಗುತ್ತಿದೆ. ಹಿಂದೆ ಮಕ್ಕಳಿಗೆ ಚಂದಮಾಮ, ಬಾಲಮಿತ್ರ ಮುಂತಾದ ಪುಸ್ತಕಗಳನ್ನು ಪೋಷಕರು ತಂದು ಕೊಡುವ ಮೂಲಕ ಅನೇಕ ಕಥೆಗಳನ್ನು ಮಕ್ಕಳಿಗೆ ಕಲಿಯಲು ಅವಕಾಶವಾಗುತ್ತಿತ್ತು. ಆದರೆ ಇಂದು ಮಕ್ಕಳಿಗೆ ಪಠ್ಯ ಪುಸ್ತಕಗಳನ್ನೇ ಓದಲು ಸಮಯವಿಲ್ಲದ ಪರಿಸ್ಥಿತಿಯನ್ನು ನಮ್ಮ ಶಿಕ್ಷಣ ವ್ಯವಸ್ಥೆ ತಂದಿಟ್ಟಿದೆ. ಇಂತಹ ಸಂದರ್ಭದಲ್ಲಿ ಮಕ್ಕಳಲ್ಲಿ ಓದಿನ ಅಭಿರುಚಿ ಹೆಚ್ಚಿಸುವ ನಿಟ್ಟಿನಲ್ಲಿ, ಪುಸ್ತಕಗಳನ್ನು ಕೊಡುಗೆಯಾಗಿ ನೀಡುವ ಕಾರ್ಯ ನಡೆಯಬೇಕು. ಕನ್ನಡ ಉಳಿದು ಬೆಳೆಯಬೇಕಾದರೆ ನಮ್ಮಲ್ಲಿ ಪುಸ್ತಕ ಸಂಸ್ಕೃತಿ ಬೆಳೆಯುವ ಅಗತ್ಯವಿದೆ ಎಂದು ಅಭಿಪ್ರಾಯಿಸಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕ.ಸಾ.ಪ. ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್ ಮಾತನಾಡಿ, ವಿಶ್ವ ಪುಸ್ತಕ ದಿನಾಚರಣೆಯ ಸಂದರ್ಭದಲ್ಲಿ ಪ್ರತಿ ಶಾಲೆಗಳು, ಗ್ರಂಥಾಲಯಗಳಲ್ಲಿ ಪುಸ್ತಕ ಓದುವ ಕಾರ್ಯಕ್ರಮ, ಪುಸ್ತಕ ಪ್ರದರ್ಶನ, ಸಾಹಿತ್ಯಿಕ ಚರ್ಚೆಗಳು ನಡೆಯಬೇಕಾಗಿದೆ. ಮನುಷ್ಯನಿಗೆ ಪುಸ್ತಕದಷ್ಟು ನಿಷ್ಠಾವಂತ ಸ್ನೇಹಿತ ಮತ್ತೊಬ್ಬನಿಲ್ಲ. ಆದರೆ ಇಂದು ಮೊಬೈಲ್‌ನಂತಹ ಸ್ನೇಹಿತ ಬೇರೊಬ್ಬನಿಲ್ಲ ಎನ್ನುವಂತಾಗಿದೆ. ಜಗವನ್ನು ಬೆಳಗಲು ಸೂರ್ಯ ಹೇಗೆ ಅವಶ್ಯವೋ ಅದೇ ರೀತಿ ಬದುಕು ಬೆಳಗಲು ಪುಸ್ತಕಗಳು ಅಗತ್ಯ ಎಂದು ಪುಸ್ತಕದ ಮಹತ್ವವನ್ನು ಒತ್ತಿ ಹೇಳಿದರು.
ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಂಚಾಲಕ ಎಂ.ಪಿ. ಕೇಶವ ಕಾಮತ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನೆರೆದಿದ್ದವರಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಮನಸ್ಸಿಗೆ ನೆಮ್ಮದಿ ಸಿಗಬೇಕೆಂದರೆ ಮನೆಯಲ್ಲಿ ಸಣ್ಣ ಗ್ರಂಥಾಲಯವಿರಬೇಕು. ಗ್ರಂಥಾಲಯವೆAದರೆ ಕೇವಲ ಪುಸ್ತಕಗಳ ತರಕಲ್ಲ. ಅದು ನಮ್ಮ ದೇಹದೊಳಗಿನ ಆತ್ಮದಂತೆ. ನಮ್ಮ ಮನೆಯ ದೇವಾಲಯದ ಜ್ಞಾನ ಸಂಸ್ಕೃತಿಯ ಕಲಶ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಬಿ.ಎನ್. ಪ್ರಕಾಶ್, ಹೆಚ್.ಎಲ್. ದಿವಾಕರ್, ಪ್ರತಿಮಾ ಹರೀಶ್ ರೈ, ಹಿರಿಯ ಸಾಹಿತಿ ಬೈತಡ್ಕ ಜಾನಕಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಮಹಾಲಕ್ಷಿö್ಮ, ವಿದ್ಯಾರ್ಥಿಗಳು ಹಾಜರಿದ್ದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿನಿಯರಾದ ಅರ್ಪಿತಾ ಹಾಗೂ ಶಿಲ್ಪಾ ಪ್ರಾರ್ಥಿಸಿದರೆ, ಕನ್ನಡ ಜಾಗೃತಿ ಸಮಿತಿ ಸದಸ್ಯ ರಂಜಿತ್ ಕವಲಪಾರ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಸದಸ್ಯ ಕೆ.ವಿ. ಉಮೇಶ್ ವಂದಿಸಿದರು.