ಸೋಮವಾರಪೇಟೆ, ಏ. ೨೪: ಜಗಜ್ಯೋತಿ ಬಸವಣ್ಣ ಅವರ ತತ್ವಾದರ್ಶಗಳು ಸಾರ್ವಕಾಲಿಕ ಶ್ರೇಷ್ಠವಾಗಿವೆ ಎಂದು ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಬಣ್ಣಿಸಿದರು. ಇಲ್ಲಿನ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಸಮಾಜದಲ್ಲಿದ್ದ ಅಸಮಾನತೆ, ಅಂಧಕಾರ, ಮೌಢ್ಯಗಳ ವಿರುದ್ಧ ತಮ್ಮ ವಚನಗಳ ಮೂಲಕ ಜಾಗೃತಿ ಮೂಡಿಸಿದ ಬಸವಣ್ಣ ಅವರು ತಮ್ಮ ಜೀವನದುದ್ದಕ್ಕೂ ಸಮಾಜದ ಬದಲಾವಣೆಗೆ ಶ್ರಮಿಸಿದರು. ಸಮಾಜದಲ್ಲಿ ಸಮಾನತೆಗಾಗಿ ಶ್ರಮಿಸಿದ ಇಂತಹ ಮಹಾನ್ ದಾರ್ಶನಿಕರ ಜೀವನಾದರ್ಶಗಳು ಎಲ್ಲರಿಗೂ ಮಾದರಿಯಾಗಿದೆ ಎಂದರು.
ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿದ ಬಸವಣ್ಣ ಅವರ ದೂರದೃಷ್ಟಿತ್ವ ಇಂದಿಗೂ ಪ್ರಸ್ತುತವಾಗಿವೆ. ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡರೆ ಸಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಕೃಷ್ಣಮೂರ್ತಿ ಅವರು ಅಭಿಪ್ರಾಯಿಸಿದರು. ಕಾರ್ಯಕ್ರಮದಲ್ಲಿ ಕಂದಾಯ ನಿರೀಕ್ಷಕ ಪ್ರಹ್ಲಾದ್, ಸಿಬ್ಬಂದಿ ಮೋಹನ್, ಗ್ರಾಮ ಲೆಕ್ಕಾಧಿಕಾರಿಗಳು, ಸಾರ್ವಜನಿಕರು ಇದ್ದರು. ನಂತರ ಕಕ್ಕೆಹೊಳೆ ಜಂಕ್ಷನ್‌ನಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಆರೋಗ್ಯ ನಿರೀಕ್ಷಕ ಜಾಸಿಂ ಖಾನ್ ಸೇರಿದಂತೆ ಸಿಬ್ಬಂದಿಗಳು ಇದ್ದರು.