ಕುಶಾಲನಗರ, ಏ. ೨೪: ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದಿಂದ ಕುಶಾಲನಗರ ಗೌಡ ಸಮಾಜದಲ್ಲಿ ‘ನೇಗಿಲಯೋಗಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.
‘ಕೊಡಗಿನಲ್ಲಿ ಕೃಷಿ ಪ್ರವಾಸೋದ್ಯಮ - ಹಲವು ಆಯಾಮಗಳು’ ವಿಷಯದ ಕುರಿತು ಉಪನ್ಯಾಸ ನೀಡಿದ ಬ್ಯಾಂಕಿAಗ್, ವ್ಯಕ್ತಿತ್ವ ವಿಕಸನ ತರಬೇತುದಾರ ವೃತ್ತಿ ಮಾರ್ಗದರ್ಶಕ ಆರ್.ಕೆ. ಬಾಲಚಂದ್ರ, ಕೊಡಗಿನಲ್ಲಿ ಸುಮಾರು ೧.೦೫ ಲಕ್ಷ ಹೆಕ್ಟೇರ್ ಕಾಫಿ ತೋಟವಿದೆ. ಭಾರತದ ಒಟ್ಟು ಕಾಫಿ ಉತ್ಪಾದನೆಯ ಸುಮಾರು ಶೇ.೩೦ರಷ್ಟು ಇಲ್ಲೇ ಬೆಳೆಯುತ್ತದೆ. ಆದರೆ ಕಳೆದ ಎರಡು ದಶಕಗಳಲ್ಲಿ ಕಾಫಿ ಬೆಲೆಯ ಏರಿಳಿತ, ಹವಾಮಾನ ಬದಲಾವಣೆ, ಕೂಲಿ ಕಾರ್ಮಿಕರ ಕೊರತೆ, ಕಾಡಾನೆ ಹಾವಳಿ ಇವೆಲ್ಲವೂ ರೈತರ ನಿದ್ದೆಕೆಡಿಸಿವೆ. ೨೦೧೮ರ ಭೀಕರ ಪ್ರವಾಹ ಮತ್ತು ಭೂಕುಸಿತ ಕೊಡಗಿನ ಕೃಷಿಕರನ್ನು ಹೈರಾಣಾಗಿಸಿದೆ. ಇದರಿಂದಾಗಿ ಯುವ ತಲೆಮಾರು ಬೆಂಗಳೂರಿಗೆ ವಲಸೆ ಹೋಗುತ್ತಿದೆ. ಕೃಷಿ ಪ್ರವಾಸೋದ್ಯಮ ಎಂಬುದು ಒಂದು ದಾರ್ಶನಿಕ ಕಲ್ಪನೆಯಾಗಿದೆ. ಕೃಷಿ ಚಟುವಟಿಕೆಗಳಲ್ಲಿ ಪ್ರವಾಸಿಗರನ್ನು ಭಾಗಿಯಾಗಿಸಿ, ರೈತರಿಗೆ ಹೆಚ್ಚುವರಿ ಆದಾಯ ಒದಗಿಸುವ, ಮತ್ತು ಪ್ರವಾಸಿಗರಿಗೆ ಅದ್ಭುತ ಅನುಭವ ನೀಡುವ ವ್ಯವಸ್ಥೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಪತ್ರಿಕಾಭವನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ. ಕೇಶವಕಾಮತ್, ದೇಶದ ಬೆನ್ನೆಲುಬಾಗಿರುವ ರೈತರಿಲ್ಲದ ನಾಡನ್ನು ಕಲ್ಪಿಸಿಕೊಳ್ಳುವುದೇ ಅಸಾಧ್ಯವಾಗಿದೆ. ಎಷ್ಟೇ ಆಧುನಿಕ ಸೌಲಭ್ಯಗಳಿದ್ದರೂ ಮನುಷ್ಯನಾದವನಿಗೆ ಅನ್ನ, ಆಹಾರವಿಲ್ಲದೆ ಜೀವಿಸಲು ಸಾಧ್ಯವಿಲ್ಲ. ಅಂತಹ ಆಹಾರವನ್ನು ತನ್ನ ಶ್ರಮದ ಮೂಲಕ ಕಲ್ಪಿಸುವ ಕೃಷಿಕರಿಗೆ ಸಮಾಜ ಸದಾ ಕೃತಜ್ಞರಾಗಿರಬೇಕು ಮತ್ತು ಸರಕಾರಗಳು ಕೃಷಿಕರ ನೆರವಿಗೆ ನಿಲ್ಲಬೇಕು ಹೇಳಿದರು.
ಅತಿಥಿಯಾಗಿದ್ದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ಕೋವಿಡ್ ಕಾಲಘಟ್ಟದಲ್ಲಿ ಜರುಗಿದ ಕೆಲವು ಉತ್ತಮ ಸಂಗತಿಗಳಲ್ಲಿ, ನಗರದಿಂದ ಸ್ವಗ್ರಾಮಗಳಿಗೆ ಅನಿವಾರ್ಯವಾಗಿ ಮರಳಿಬಂದ ಯುವಪೀಳಿಗೆ ನಂತರದ ದಿನಗಳಲ್ಲಿ ಕೃಷಿಯತ್ತ ಆಸಕ್ತಿ ವಹಿಸಿರುವುದೂ ಒಂದಾಗಿದೆ. ಕೇರಳದಂತಹ ರಾಜ್ಯದಲ್ಲಿ ಕೃಷಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಆದ್ಯತೆ ನೀಡಲಾಗಿದೆ. ಎಲ್ಲಾ ರೀತಿಯಲ್ಲಿಯೂ ಕೊಡಗು ಕೃಷಿ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿದ್ದು, ಈ ನಿಟ್ಟಿನಲ್ಲಿ ಕೃಷಿಕರು ಮತ್ತು ಪ್ರವಾಸೋದ್ಯಮಿಗಳು ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ಅನಿಲ್ ನುಡಿದರು.
ಮತ್ತೋರ್ವ ಅತಿಥಿ ಸುಂಟಿಕೊಪ್ಪದ ಉದ್ಯಮಿ ಎಸ್.ಜಿ. ಶ್ರೀನಿವಾಸ್ ಮಾತನಾಡಿ, ಕೃಷಿ ಎನ್ನುವುದು ಬಹಳ ದೊಡ್ಡ ತತ್ವವಾಗಿದೆ. ಕೃಷಿಯಲ್ಲಿ ಕೆಲಸ ಮಾಡುತ್ತಲೇ ಕೆಲಸ ಕಲಿಯಲಾಗುತ್ತದೆ. ಹೀಗಾಗಿಯೇ ಕೃಷಿಕರಿಗೆ ಸಮಾಜದಲ್ಲಿ ಮಹತ್ವದ ಸ್ಥಾನ ಕಲ್ಪಿಸಲಾಗಿದೆ ಎಂದರು.
ದಾನಿ, ಗುಡ್ಡೆಹೊಸೂರಿನ ಉದ್ಯಮಿ ಮಂಡೇಪAಡ ಚಿಮ್ಮ ಉತ್ತಪ್ಪ ಅವರು, ಕುಶಾಲನಗರ ಪತ್ರಕರ್ತರ ಸಂಘ ರೈತರಿಗಾಗಿ ರೂಪಿಸಿರುವ ನೇಗಿಲಯೋಗಿ ದತ್ತಿ ಪ್ರಶಸ್ತಿಗೆ ತಾನು ಕೂಡಾ ೨೫ ಸಾವಿರ ರೂ.ಗಳನ್ನು ನೀಡುವುದಾಗಿ ಇದೇ ಸಂದರ್ಭ ಘೋಷಿಸಿದರು.
ಚಿಕ್ಕಬೆಟ್ಟಗೇರಿಯ ಉದ್ಯಮಿ, ದಾನಿ ಎಂ.ಎಸ್. ರಂಜಿತ್ ಉಪಸ್ಥಿತರಿದ್ದರು. ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಸಿ. ದಿನೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಸಲಹೆಗಾರ ಕೆ. ತಿಮ್ಮಪ್ಪ ನಿರೂಪಿಸಿದರು. ಖಜಾಂಚಿ ಕೆ.ಎಸ್. ಅನಿಲ್ ಕುಮಾರ್ ಸ್ವಾಗತಿಸಿದರೆ, ನಿರ್ದೇಶಕರಾದ ಸಿಲ್ವೆಸ್ಟರ್ ಪ್ರಾರ್ಥಿಸಿ, ವಿಶ್ವಕುಮಾರ್, ರವಿಕುಮಾರ್, ಆಲ್‌ಫ್ರೆಡ್ ಅವರುಗಳು ಪ್ರಶಸ್ತಿ ವಿಜೇತರನ್ನು ಪರಿಚಯಿಸಿದರು. ಉಪಾಧ್ಯಕ್ಷ ನವೀನ್ ಚಿಣ್ಣಪ್ಪ ವಂದಿಸಿದರು.
ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್, ಸಂಘದ ನಿರ್ದೇಶಕರಾದ ಶಿವಣ್ಣ, ಜಿ.ಕೆ. ಬಾಲಕೃಷ್ಣ, ಎಂ.ಎಸ್. ಸುನಿಲ್, ಸೋನ್ಸ್, ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮದೋಷ್ ಪೂವಯ್ಯ ಮತ್ತಿತರರು ಹಾಜರಿದ್ದರು. ಗೌಡ ಸಮುದಾಯದ ಮುಖಂಡ, ಹಿರಿಯ ಲೇಖಕ ಅನಂತ ರಾಜೇಗೌಡ ಅವರ ನಿಧನಕ್ಕೆ ಪತ್ರಕರ್ತರ ಸಂಘದ ವತಿಯಿಂದ ಮೌನಾಚರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.