ಸೋಮವಾರಪೇಟೆ, ಏ ೨೩ : ಆಯಾ ತಾಲೂಕಿನ ತಹಶೀಲ್ದಾರ್ ಮತ್ತು ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳು ಕನಿಷ್ಟ ತಿಂಗಳಿಗೆ ಒಮ್ಮೆಯಾದರೂ ಪರಿಶಿಷ್ಟರ ಕುಂದುಕೊರತೆ ಸಭೆಯನ್ನು ಏರ್ಪಡಿಸಬೇಕೆಂದು ಜಿಲ್ಲಾಧಿಕಾರಿ ಸೋಮಶೇಖರ್ ನಿರ್ದೇಶನ ನೀಡಿದರು. ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜನಾಂಗದವರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಹಶೀಲ್ದಾರ್ ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿಯೂ ಸಹ ಕುಂದುಕೊರತೆ ಸಭೆ ಏರ್ಪಡಿಸಿ ಸಮಸ್ಯೆಗಳನ್ನು ಆಲಿಸಿದಲ್ಲಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆ ನಿಟ್ಟಿನಲ್ಲಿ ಇಚ್ಛಾಶಕ್ತಿ ಹಾಗೂ ಬದ್ಧತೆಯಿಂದ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು. ಪಟ್ಟಣದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜನಾಂಗದವರ ಕುಂದುಕೊರತೆ ಸಭೆಯಲ್ಲಿ ಸುಮಾರು ೪೮ ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪೊಲೀಸ್, ಕೃಷಿ, ಆಹಾರ, ಸೆಸ್ಕ್, ಮನೆ ದಾಖಲಾತಿ, ಅಕ್ರಮ ಸಕ್ರಮ, ಜಾಗ ಅತಿಕ್ರಮಣ ತೆರವುಗೊಳಿಸುವುದು, ಕಂದಾಯ ದುರಸ್ತಿ, ಹಕ್ಕುಪತ್ರ ವಿತರಿಸುವುದು, ಜಮೀನಿಗೆ ತೆರಳಲು ದಾರಿ ಬಿಡಿಸುವುದು, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಇತರ ಇಲಾಖೆಗೆ ಸಂಬAಧಿಸಿದAತೆ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಕಂದಾಯ ಇಲಾಖೆಗೆ ಸಂಬAಧಿಸಿದAತೆ ೪೦ ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿ, ಹಕ್ಕುಪತ್ರ, ನಿವೇಶನ ಒದಗಿಸುವುದು, ಮನೆ ನಿರ್ಮಾಣ, ಕೃಷಿ ಭೂಮಿ ಅತಿಕ್ರಮಣ ಮಾಡಿಕೊಂಡಿರುವುದು ಇಂದಿನ ಕುಂದುಕೊರತೆ ಸಭೆಯಲ್ಲಿ ಹೆಚ್ಚಾಗಿ ಕೇಳಿಬಂದವು.

ಈ ಸಂದರ್ಭದಲ್ಲಿ ಮಾತನಾಡಿದ ಕುಂಬೂರಿನ ಸೋಮಪ್ಪ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹಲವು ಸಮಸ್ಯೆಗಳಿದ್ದು, ಇವುಗಳನ್ನು ಪರಿಹರಿಸಬೇಕು. ಇಂದಿಗೂ ಸಹ ನಿವೇಶನ ಹಾಗೂ ಹಕ್ಕುಪತ್ರ ಇಲ್ಲದೆ ಮನೆ ನಿರ್ಮಾಣ ಕಷ್ಟವಾಗಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು ಎಂದು ಕೋರಿದರು.

ಭೂಮಿ ಇರುವವರಿಗೆ ಹಕ್ಕುಪತ್ರ ನೀಡಬೇಕು. ಭೂಮಿ ಅತಿಕ್ರಮಣ ಮಾಡಿಕೊಂಡಿರುವವರನ್ನು ತೆರವುಗೊಳಿಸಬೇಕು. ಪರಿಶಿಷ್ಟರು ಇತರರಂತೆ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಬೇಕು ಎಂದು ಕೋರಿದರು.

ಬಸವಯ್ಯ ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಇಂದಿಗೂ ಸಹ ಸಂಕಷ್ಟದಲ್ಲಿ ಜೀವನ ದೂಡುತ್ತಿದ್ದು, ಇವರಿಗೆ ಕನಿಷ್ಟ ಮೂಲ ಸೌಲಭ್ಯವನ್ನಾದರೂ ಒದಗಿಸಬೇಕು ಎಂದು ಮನವಿ ಮಾಡಿದರು.

ಕೊಡ್ಲಿಪೇಟೆ, ಶನಿವಾರಸಂತೆ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟರು ಇದ್ದು, ಈ ಜನರಿಗೆ ನಿವೇಶನ ಹಾಗೂ ಜಮೀನು ಒದಗಿಸಬೇಕು. ಆ ನಿಟ್ಟಿನಲ್ಲಿ ಸಮಸ್ಯೆಗಳನ್ನು ಪರಿಹರಿಸುವಂತಾಗಬೇಕು ಎಂದು ಕೋರಿದರು.

ಕಂದಾಯ, ಅರಣ್ಯ ಹಾಗೂ ಭೂ ದಾಖಲೆಗಳ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸದೆ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಮೂರು ಇಲಾಖೆಗಳು ಒಟ್ಟಾಗಿ ಕೆಲಸ ಮಾಡಿದಾಗ ಸಾರ್ವಜನಿಕರಿಗೆ ಸುಲಭವಾಗಿ, ಸುಲಲಿತವಾಗಿ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ. ಆ ನಿಟ್ಟಿನಲ್ಲಿ ಇನ್ನೂ ಮುಂದಾದರೂ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸಬೇಕು ಎಂದರು.

ಭೂಮಿ ಒತ್ತುವರಿ ಸಂಬAಧ ಹಲವು ಬಾರಿ ಮನವಿ ಮಾಡಲಾಗಿದೆ. ಆದರೂ ಸಮಸ್ಯೆ ಇತ್ಯರ್ಥವಾಗಿಲ್ಲ. ಅರ್ಹರಿಗೆ ಭೂಮಿ ಸೇರಬೇಕು. ಆ ನಿಟ್ಟಿನಲ್ಲಿ ಕೂಲಂಕಷವಾಗಿ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಕುಶಾಲನಗರದ ರಾಜು ಮಾತನಾಡಿ ಕುಶಾಲನಗರ ಬಳಿಯ ಸಿದ್ದಲಿಂಗಪುರ ಬಳಿ ಸರ್ಕಾರಿ ಭೂಮಿ ಇದ್ದು, ಆ ಭೂಮಿಯಲ್ಲಿ ಇತರರು ಅತಿಕ್ರಮಣ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ಇದನ್ನು ತೆರವುಗೊಳಿಸುವಂತಾಗಬೇಕು. ಹಾಗೆಯೇ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಕಾಲದಲ್ಲಿ ಸಾಲ ಸೌಲಭ್ಯ ನೀಡಬೇಕು ಎಂದು ಅವರು ಮನವಿ ಮಾಡಿದರು.

ಉದಯ ಕುಮಾರ್ ಮಾತನಾಡಿ ಪರಿಶಿಷ್ಟರ ಶ್ರೇಯೋಭಿವೃದ್ಧಿಗೆ ಪೊಲೀಸ್ ಇಲಾಖೆಯ ಪಾತ್ರ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯವರು ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಿದ್ದಲ್ಲಿ ಹಲವು ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ ಎಂದರು.

ಸಲ್ಲಿಕೆಯಾಗಿರುವ ಅಹವಾಲುಗಳನ್ನು ಪರಿಶೀಲಿಸಿ ಹಂತ ಹಂತವಾಗಿ ಸಮಸ್ಯೆ ಬಗೆಹರಿಸಲಾಗುವುದು. ಕಂದಾಯ ಇಲಾಖೆಗೆ ಸಂಬAಧಿಸಿದAತೆ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿದ್ದು, ಹೋಬಳಿ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಕಾಲದಲ್ಲಿ ಕರ್ತವ್ಯ ನಿರ್ವಹಿಸಿದಲ್ಲಿ ಹಲವು ಸಮಸ್ಯೆಗಳನ್ನು ಸ್ಥಳೀಯ ಹಂತದಲ್ಲಿ ಪರಿಹರಿಸಬಹುದು. ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್, ತಹಶೀಲ್ದಾರರಾದ ಕೃಷ್ಣಮೂರ್ತಿ, ಕಿರಣ್ ಗೌರಯ್ಯ, ತಾ.ಪಂ.ಇ.ಒ ಪರಮೇಶ್‌ಕುಮಾರ್ ಅವರುಗಳು ತಮ್ಮ ಇಲಾಖೆಗೆ ಸಂಬAಧಿಸಿದAತೆ ಮಾಹಿತಿ ನೀಡಿದರು.