ಮಡಿಕೇರಿ, ಏ. ೨೩: ಪೊನ್ನಂಪೇಟೆ ತಾಲೂಕು ನಾಗರಹೊಳೆಯಲ್ಲಿರುವ ಶ್ರೀ ತಿರುಮಲ ಬರಗೂರು, ರಾಶೆ ಐಗೊಲ್ಲಿ ಜಾಡಲಿ ಬುಡಕಟ್ಟು ಜನಾಂಗದವರ ಆರಾಧ್ಯ ದೈವಸ್ಥಾನಕ್ಕೆ ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಅನ್ನದಾಸೋಹಕ್ಕೆ ಬೇಕಾಗುವ ಎಲ್ಲಾ ಸೌಕರ್ಯಗಳನ್ನು ವೈಯಕ್ತಿಕವಾಗಿ ಕಲ್ಪಿಸಿದರು. ಶಾಸಕರ ನಿವಾಸದಲ್ಲಿ ಆದಿವಾಸಿ ಮುಖಂಡರ ಸಮ್ಮುಖದಲ್ಲಿ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು.

ಬಳಿಕ ಮಾತನಾಡಿದ ಶಾಸಕರು, ಉತ್ಸವಗಳ ಸಂದರ್ಭದಲ್ಲಿ ಶ್ರೀದೇವರ ಅನ್ನದಾಸೋಹ ತಯಾರಿಕೆಗೆ ಬೇಕಾಗುವ ಎಲ್ಲಾ ರೀತಿಯ ಪಾತ್ರೆ, ನೀರು ಶೇಖರಿಸಲು ಬೇಕಾದ ಎಲ್ಲಾ ವ್ಯವಸ್ಥೆಗಳು ಮತ್ತು ಎಲ್ಲಾ ರೀತಿಯ ಅಡುಗೆ ಸಾಮಗ್ರಿಗಳನ್ನು ಒಳಗೊಂಡ ಸೌಲಭ್ಯಗಳನ್ನು ವೈಯಕ್ತಿಕ ವೆಚ್ಚದಲ್ಲಿ ಖರೀದಿಸಿ, ಹಸ್ತಾಂತರಿಸಿರುವುದಾಗಿ ತಿಳಿಸಿದರು. ಈ ಸಂದರ್ಭ ಶಾಸಕರ ಪತ್ನಿ ಕಾಂಚನ್ ಪೊನ್ನಣ್ಣ ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ಪಕ್ಷದ ಮುಖಂಡರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.