ಗೋಣಿಕೊಪ್ಪಲು, ಏ. ೨೩: ಕಳೆದ ೧೪ ವರ್ಷಗಳಿಂದ ಯರವ ನಡೆಸಿಕೊಂಡು ಬರುತ್ತಿರುವ ಪ್ರತಿಷ್ಠಿತ ಯರವ ಕ್ರೀಡೋತ್ಸವವು ಈ ಬಾರಿ ತಿತಿಮತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ತಾ. ೨೯ರಿಂದ ಮೇ. ೩ರವರೆಗೆ ನಡೆಯಲಿದೆ. ಈಗಾಗಲೇ ಜಿಲ್ಲೆಯ ೬೫ ಯರವ ಕುಟುಂಬಗಳು ಹೆಸರು ನೊಂದಾಯಿಸಿಕೊAಡಿವೆ.

ಈ ಬಾರಿ ೧೫ನೇ ವರ್ಷದ ಕ್ರಿಕೆಟ್ ಪಂದ್ಯಾಟವು ಉಳಕುಚ್ಚುಲಾತ್ಲೇರಂಡ ಮನೆತನದ ಹೆಸರಿನಲ್ಲಿ ನಡೆಯಲಿದ್ದು, ಈಗಾಗಲೇ ಪಂದ್ಯಾಟಕ್ಕೆ ಸಕಲ ಸಿದ್ದತೆಗಳು ನಡೆಯುತ್ತಿವೆ. ಜಿಲ್ಲೆಯ ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ಭಾಗವಹಿಸಲಿವೆ.

ಮಹಿಳೆಯರಿಗಾಗಿಯೇ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಸರ್ಕಾರದ ಅನುದಾನವಿಲ್ಲದೆ ದಾನಿಗಳ ಸಹಕಾರದಿಂದ ಯರವ ಸಮಾಜದ ಯುವ ಉತ್ಸಾಹಿ ಯುವಕರು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಸಮುದಾಯದ ಕ್ರೀಡೆಯ ಯಶಸ್ವಿಗೆ ದುಡಿಯುತ್ತಿದ್ದಾರೆ. ಸಮುದಾಯದ ಸಾಧಕರನ್ನು ಗುರುತಿಸಿ ವೇದಿಕೆಯಲ್ಲಿ ಅತಿಥಿಗಳ ಸಮ್ಮುಖದಲ್ಲಿ ಗೌರವಿಸಲಾಗುತ್ತದೆ. ಯರವ ಕುಣಿತ, ದುಡಿಕೊಟ್ಟು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ನಡೆಯಲಿದೆ.

ಯರವ ಸಮಾಜ ವತಿಯಿಂದ ನಡೆಯುವ ಕ್ರೀಡೋತ್ಸವದ ಲಾಂಛನವನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಯರವ ಜನಾಂಗವು ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ನೀಡುತ್ತಾ ಬಂದಿದೆ. ಸಮಾಜ ಬಾಂಧವರು ಒಗ್ಗಟ್ಟನ್ನು ಕಾಪಾಡಿಕೊಳ್ಳುವ ಮೂಲಕ ತಮ್ಮ ಆಚಾರ-ವಿಚಾರ, ಪದ್ಧತಿ-ಪರಂಪರೆಯನ್ನು ಉಳಿಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.

ಯರವ ಸಮಾಜದ ಅಧ್ಯಕ್ಷರಾದ ಪಿ.ಕೆ. ಸಿದ್ದಪ್ಪ ಅಧ್ಯಕ್ಷತೆಯಲ್ಲಿ ನಡೆದ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಯರವ ಸಮಾಜದ ಹಿರಿಯ ಮುಖಂಡರಾದ ಮಾಜಿ ಜಿ.ಪಂ. ಸದಸ್ಯೆ ಪಿ.ಆರ್.ಪಂಕಜ, ರಾಮು, ಲ್ಯಾಂಪ್ ಸೊಸೈಟಿ ಅಧ್ಯಕ್ಷ ಮಣಿಕುಂಞ ಸೇರಿದಂತೆ ಯರವ ಸಮಾಜದ ಕಾರ್ಯದರ್ಶಿ ಪದಾಧಿಕಾರಿಗಳು ಉಪಸ್ಥಿತರಿದ್ದರು. - ಹೆಚ್.ಕೆ.ಜಗದೀಶ್