ಮಡಿಕೇರಿ, ಏ. ೨೩; ಮಂಗಳೂರಿನ ಪಣಂಬೂರು ವ್ಯಾಪ್ತಿಯಲ್ಲಿ ಜಿಲ್ಲೆಯ ಯುವಕರಿಂದ ಹಣ, ಇನ್ನಿತರ ವಸ್ತುಗಳನ್ನು ಸುಲಿಗೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ತಾ. ೧೩ರಂದು ಸೋಮವಾರಪೇಟೆ ನಿವಾಸಿ ಕೆ. ಅಜಯ್(೨೯) ಎಂಬಾತ ತನ್ನ ಸ್ನೇಹಿತರಾದ ರಮೇಶ್, ರಫೀಕ್ ಅವರುಗಳೊಂದಿಗೆ ಮಂಗಳೂರಿನ ತಣ್ಣೀರುಬಾವಿ ಬೀಚ್ಗೆ ತನ್ನ ಹುಟ್ಟುಹಬ್ಬ ಆಚರಿಸಲೆಂದು ತೆರಳಿದ್ದು, ಈ ಸಂದಭದಲ್ಲಿ ಮಾರ್ಗ ತಪ್ಪಿಹೋಗಿ ಪಣಂಬೂರು ವ್ಯಾಪ್ತಿಯ ಬೇಂಗ್ರೆ ಕಡೆಗೆ ತೆರಳಿದ್ದಾರೆ. ದಾರಿಹೋಕರಲ್ಲಿ ಮಾರ್ಗದ ಬಗ್ಗೆ ವಿಚಾರಿಸಿದಾಗ ಈರ್ವರು ಕಾರಿನಲ್ಲಿ ಕುಳಿತು ಮಾರ್ಗ ಹೇಳಿಕೊಡುವದಾಗಿ ಹೇಳಿ ಕಾರು ಕೊಂಚ ದೂರ ಕ್ರಮಿಸಿದ ಕೂಡಲೇ ಹಿಂಬದಿ ಕುಳಿತಿದ್ದ ಯುವಕರು ಆಯುಧ ತೋರಿಸಿ ಯುವಕರಿಂದ ಒಟ್ಟು ೨೪,೫೦೦ ಮೌಲ್ಯದ ವಾಚ್, ಪವರ್ ಬ್ಯಾಂಕ್ ಗಿಂಬಲ್, ರೋಲ್ಡ್ ಗೋಲ್ಡ್ ಬ್ರೇಸ್ಲೆಟ್ ಅನ್ನು ಕಸಿದು ಬೈಕಿನಲ್ಲಿ ಬಂದ ಇನ್ನೋರ್ವನೊಂದಿಗೆ ಪರಾರಿಯಾಗಿದ್ದರು. ಇದೇ ಸಂದರ್ಭ ಕಾರಿನ ಗ್ಲಾಸಿಗೆ ಗುದ್ದಿ ಹಾನಿಪಡಿಸಿದ್ದರು.
ಒಟ್ಟು ಮೊತ್ತ ೩೨,೫೦೦ ಸುಲಿಗೆಯಾಗಿರುವ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ನಡೆಸಿದ ಪೊಲೀಸರು ತಾ. ೧೩ರಂದೇ ಆರೋಪಿಗಳಾದ ಮೊಹಮ್ಮದ್ ಸಿನಾನ್, ಜಹೀರ್ ನಿಸಾರ್ ಎಂಬವರುಗಳನ್ನು ಬಂದಿಸಿ ವಾಚ್ ಇನ್ನಿತರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದರು. ಇನ್ನೊಬ್ಬ ಆರೋಪಿ ಚಂದು ಹಾರಿಸ್ ಎಂಬಾತ ತಲೆಮರೆಸಿಕೊಂಡಿದ್ದು, ತಾ ೨೨ರಂದು ಆತನನ್ನು ಕೂಡ ಬಂದಿಸಿ ಸುಲಿಗೆ ಮಾಡಿದ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಈತನ ವಿರುದ್ಧ ಪಣಂಬೂರು ಠಾಣೆಯಲ್ಲಿ ಈಗಾಗಲೇ ೩೦ಕ್ಕೂ ಹೆಚ್ಚು ಪ್ರಕರಣಗಳಿದ್ದು, ರೌಡಿ ಪಟ್ಟಿ ತೆರೆಯಲಾಗಿದೆ ಎಂದು ಪಣಂಬೂರು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.