ಐಗೂರು, ಏ.೨೧: ಅಗ್ನಿ ಅವಘಡದಲ್ಲಿ ಮನೆ ಕಳೆದುಕೊಂಡವರಿಗೆ ರೂ.೨೫ ಸಾವಿರ ಧನಸಹಾಯವನ್ನು ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಸಮಿತಿ ವತಿಯಿಂದ ನೀಡಲಾಯಿತು.
ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರಿನ ದಿವಂಗತ ಕೃಷ್ಣಪ್ಪ ಅವರ ಪತ್ನಿ ಪುಷ್ಪ ಅವರ ಮನೆ ಕಳೆದ ಮೂರು ತಿಂಗಳ ಹಿಂದೆ ರಾತ್ರಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿತ್ತು.
ಘಟನೆ ನಡೆದಾಗ ಪಕ್ಕದ ಮನೆಯವರಾದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಕೆ ವಿನೋದ್ ಅವರ ನೆರವಿನಿಂದ ಪುಷ್ಪ ಹಾಗೂ ಅವರ ಮೊಮ್ಮಗ ಹರ್ಷಿತ್ ಪ್ರಾಣಾಪಾಯದಿಂದ ಪಾರಾಗಿದ್ದರು.
ಸಂತ್ರಸ್ತ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ ಹಾಗೂ ಪದಾಧಿಕಾರಿಗಳು ಕಾಜೂರು ಗ್ರಾಮಕ್ಕೆ ಭೇಟಿ ನೀಡಿ ರೂ.೨೫,೦೦೦ ಮೊತ್ತದ ಚೆಕ್ಕನ್ನು ಮನೆ ಕಳೆದುಕೊಂಡಿದ್ದ ಪುಷ್ಪ ಅವರಿಗೆ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಅಧ್ಯಕ್ಷ ಅರುಣ್ ಕೊತ್ನಳ್ಳಿ, ಮುಂದಿನ ದಿನಗಳಲ್ಲಿ ಪುಷ್ಪ ಅವರ ಮೊಮ್ಮಗನ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು ಒದಗಿಸಲಾಗುವುದೆಂದು ಭರವಸೆಯಿತ್ತರು..
ಈ ಸಂದರ್ಭ ತಾಲೂಕು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಎನ್ ದೀಪಕ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ಗೌರವ ಸಲಹೆಗಾರ ಜಯರಾಮ್, ಪದ್ಮರಾಜ್, ವಸಂತ ಆಚಾರಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಕೆ. ವಿನೋದ್, ಎಂ.ಕೆ. ಮೋಹನ್, ಯೋಗೇಶ್ ಮತ್ತು ರಾಜೇಶ್ ಉಪಸ್ಥಿತರಿದ್ದರು.