ಸುಂಟಿಕೊಪ್ಪ, ಏ. ೧೨: ಮಾದಾಪುರ ಗ್ರಾಮ ಪಂಚಾಯಿತಿ ವತಿಯಿಂದ ಮಹಿಳಾ ಗ್ರಾಮ ಸಭೆ ಹಾಗೂ ಸಂಜೀವಿನಿ ಮಹಿಳಾ ಒಕ್ಕೂಟದ ವತಿಯಿಂದ ಸಂತೆ ಮೇಳ ಏರ್ಪಡಿಸಲಾಯಿತು.
ಮಾದಾಪುರ ಗ್ರಾಮ ಆಡಳಿತ ಅಧಿಕಾರಿ ಹೇಮಂತ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂಜೀವಿನಿ ಮಹಿಳಾ ಒಕ್ಕೂಟದಿಂದ ಸರಕಾರದ ಕಾರ್ಯಸೂಚಿಯಂತೆ ಮಹಿಳೆಯರ ಸ್ವಾವಲಂಬಿ ಬದುಕಿಗೆ ಆನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮಹಿಳೆಯರು ಅರ್ಥಿಕವಾಗಿ ಸಬಲೀಕರಣಗೊಂಡು ಸ್ವಾವಲಂಬಿ ಜೀವನ ಕಟ್ಟಿಕೊಂಡರೆ ದೇಶ ಸದೃಢಗೊಳ್ಳಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಮಹಿಳೆಯರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಸಹಾಯ ಧನವನ್ನು ಸಹ ನೀಡುತ್ತಿದೆ ಎಂದರು.
ಮಾದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ. ರವಿ ನಾಯರ್ ಮಾತನಾಡಿ, ಮಾದಾಪುರ ಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳಿಗೆ ಸಂಜೀವಿನಿ ಒಕ್ಕೂಟದ ಕೊಡುಗೆ ಇದೆ. ಮಹಿಳಾ ಸಂಘದವರು ವಿವಿಧ ವೃತ್ತಿಯನ್ನು ಕೈಗೊಂಡು ಜೀವನದ ಮುಖ್ಯವಾಹಿನಿಗೆ ಬರುವುದಕ್ಕೆ ಪಂಚಾಯಿತಿಯಿAದ ಸರ್ವಸಹಕಾರ ನೀಡಲಾಗುತ್ತಿದೆ. ಮಾದಾಪುರ ಆರೋಗ್ಯ ಕೇಂದ್ರಕ್ಕೆ ಕ್ಷಯರೋಗ ಮುಕ್ತ ಪಂಚಾಯಿತಿ ಎಂದು ಕಂಚಿನ ಪದಕ ಲಭಿಸಿದೆ. ಮುಂದೆ ಕ್ಷಯರೋಗ ಮುಕ್ತ ಗ್ರಾಮ ಪಂಚಾಯಿತಿ ಎಂದು ಆಗಲು ಗ್ರಾಮಸ್ಥರು ಸಹಕಾರ ನೀಡಬೇಕೆಂದರು. ಇದೇ ಸಂದರ್ಭ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ನಡೆಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಫಾತೀಮಾ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸಾವಿತ್ರಿ, ವಲಯ ಮೇಲ್ವಿಚಾರಕಿ ಪದ್ಮಶ್ರೀ, ತಾಲೂಕು ವ್ಯವಸ್ಥಾಪಕ ಜಯಚಂದ್ರ, ಗ್ರಾ.ಪಂ. ಕಾರ್ಯದರ್ಶಿ ಅನಿತಾ, ಸಿಬ್ಬಂದಿ ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.