ಮಡಿಕೇರಿ, ಏ. ೨೧: ಕಳೆದ ೪ ದಿನಗಳಿಂದ ಕೊಡಗಿನ ಗಡಿ ಕುಟ್ಟ ಭಾರೀ ಸುದ್ದಿ ಮಾಡುತ್ತಿದೆ. ಅಲ್ಲಿನ ಹೋಂಸ್ಟೇ ಒಂದರಲ್ಲಿ ತಂಗಿದ್ದ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಹಿನ್ನೆಲೆಯಲ್ಲಿ ಆ ಹೋಂಸ್ಟೇಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ವ್ಯಕ್ತಿ ಒಬ್ಬನ್ನನ್ನು ಕುಟ್ಟ ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಹರಿದು ಬರಲಾರಂಭಿಸಿತು.
ಈ ಬಗ್ಗೆ ಮಾಧ್ಯಮಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ವಿವರ ಬಯಸಿದವು. ಈ ಕುರಿತು ಖಚಿತ ಮಾಹಿತಿ ಲಭಿಸಿದ ಬಳಿಕ ವಿವರ ನೀಡುವುದಾಗಿ ಎಸ್ಪಿ ಮಾಧ್ಯಮಗಳಿಗೆ ತಿಳಿಸಿದರು. ಪ್ರಕರಣದಲ್ಲಿ ಜಾರ್ಖಂಡ್ ಮೂಲದ ವ್ಯಕ್ತಿ ಬಂಧಿತನಾಗಿರುವುದು ನಿಜವಾದರೂ ಮಾದಕ ವಸ್ತು ಸರಬರಾಜು ಸಂಬAಧಿಸಿದ ವಿಷಯಕ್ಕೆ ಆಗಿರುವುದು ಎಂಬ ಮಾಹಿತಿಗಳೂ ಸರಕಾರಿ ವಲಯದಲ್ಲಿ ಕೇಳಿಬಂದವು. ಹಲವಷ್ಟು ಗಾಳಿ ಸುದ್ದಿಗಳ ನಡುವೆ ಹೋಂಸ್ಟೇಯ ಮಾಲೀಕ ವಿಶಾಲ್ ಪೊನ್ನಪ್ಪ ಅವರು ಬಂಧನವಾಗಿರುವ ಬಗ್ಗೆ ‘ಶಕ್ತಿ' ಗೆ ಮಾಹಿತಿ ದೊರಕಿತು. ಪ್ರಕರಣದ ಬಗ್ಗೆ ವಿಶಾಲ್ ಅವರ ಪತ್ನಿಯನ್ನು ‘ಶಕ್ತಿ' ಭೇಟಿಯಾದಾಗ ವಿವರಗಳನ್ನು ಹಂಚಿಕೊAಡರು.
ಹೋಂಸ್ಟೇ ಹೆಸರು ದೇವಿ ವಿಲ್ಲಾ. ಕುಟ್ಟದಲ್ಲಿ ಹಲವು ವರುಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಅತಿಥಿಗಳಿಂದ ಒಳ್ಳೆಯ ಹೆಸರು ಗಳಿಸಿರುವ ಹೋಂಸ್ಟೇ ಅದು. ವಿಶಾಲ್ ಪೊನ್ನಪ್ಪ ನಡೆಸುತ್ತಿರುವ ಇವರ ಉದ್ಯಮವನ್ನು ಹಲವಷ್ಟು ಪ್ರವಾಸಿಗಳು ಮೆಚ್ಚಿಕೊಂಡಿದ್ದಾರೆ. ರಾಷ್ಟçದ ನಾನಾ ಭಾಗದ ಗ್ರಾಹಕರೊಂದಿಗೆ ವಿದೇಶಿಯರೂ ಇಲ್ಲಿಗೆ ಬಂದು ವಾಸ್ತವ್ಯ ಹೂಡಿದ್ದಾರೆ.
ಕಳೆದ ಮಾರ್ಚ್ ತಿಂಗಳಲ್ಲಿ ಈ ಹೋಂಸ್ಟೇಗೆ ಬಂದು ತಂಗಿದ್ದ ಅಮೇರಿಕಾ ಮೂಲದ ಮಹಿಳೆಯೊಬ್ಬರು, ಮತ್ತೆ ಇದೆ ತಿಂಗಳ ತಾ. ೧೨ ರಿಂದ ೧೭ ರವರೆಗೆ ಕೊಠಡಿಯನ್ನು ಕಾಯ್ದಿರಿಸಿದರು. ಮಧ್ಯಾಹ್ನ ೧:೩೦ರ ವೇಳೆಗೆ ಸವಾರಿ ಸಂಸ್ಥೆಯ ಬಾಡಿಗೆ ಕಾರೊಂದು ಈ ಅತಿಥಿಯನ್ನು ಹೋಂಸ್ಟೇಗೆ ಕರೆತಂದಿತು. ಮಾಲೀಕರು ಹೊರಗೆ ತೆರಳಿದ್ದರಿಂದ ಅಲ್ಲಿದ್ದವರ ಸಮ್ಮುಖದಲ್ಲಿ ವಿವರಗಳ ನೋಂದಣಿ ಬಳಿಕ, ಆ ಕಾರಿನ ಚಾಲಕನೇ ಲಗ್ಗೇಜ್‌ಗಳನ್ನು ತನಗೆ ನಿಗದಿಪಡಿಸಿದ ಪ್ರತ್ಯೇಕ ಟೆಂಟ್‌ಗೆ ತರುತ್ತಾರೆ ಎಂದು ಆಕೆ ತಿಳಿಸಿದರು. ನಂತರ ಹಲವಷ್ಟು ಸಮಯ ಆ ಚಾಲಕ ಟೆಂಟ್‌ನಲ್ಲಿ ಇದ್ದು ತನ್ನ ಊರಿಗೆ ಹಿಂತಿರುಗಿದ. ಖುಷಿಯಾಗಿದ್ದ ಮಹಿಳೆ ಮಧ್ಯಾಹ್ನದ ಬಳಿಕ ಈಜುಕೊಳದಲ್ಲಿದ್ದು ಸುತ್ತಮುತ್ತಲಿನ ಪರಿಸರದ ಬಗ್ಗೆ ಮೆಚ್ಚುಗೆಯ ಅಭಿಪ್ರಾಯ ಹಂಚಿಕೊAಡರು. ಮನೆಯಲ್ಲಿದ್ದ ಇತರ ಸದಸ್ಯರೊಂದಿಗೂ ಮಾತುಕತೆ ನಡೆಸುವುದರೊಳಗೆ ಕತ್ತಲಾಗಿತ್ತು. ಮಲಗಲು ಟೆಂಟ್‌ಗೆ ತೆರಳಿದ ಮಹಿಳೆ ದಿಢೀರ್ ಆಗಿ ಹೋಂಸ್ಟೇ ಮಾಲೀಕ ವಿಶಾಲ್ ಪೊನ್ನಪ್ಪ ಅವರನ್ನು ಕರೆದು ‘ನನಗೆ ಏನೋ ಆಗುತ್ತಿದೆ, ನನಗೆ ಯಾರೋ ಮಂಕು ಬರುವ ಆಹಾರ ನೀಡಿದ್ದಾರೆ-ನನಗೆ ಭಯವಾಗುತ್ತಿದೆ, ನಾನು ಇಲ್ಲಿ ಟೆಂಟ್‌ನಲ್ಲಿ ಇರುವುದಿಲ್ಲ' ಎಂದು ಹೇಳಿದರು. ಬಹುಶಃ ಕತ್ತಲಾಗಿರುವುದರಿಂದ ಆಕೆ ಹೆದರಿಕೊಂಡಿರಬಹುದು ಎಂದುಕೊAಡ ಮಾಲೀಕ ಆಕೆಗೆ ತನ್ನ ಮನೆಯಲ್ಲಿಯೇ ಉಳಿಯುವಂತೆ ಮನವೊಲಿಸಿ ಕೊಠಡಿಯೊಂದನ್ನು ಕೊಟ್ಟರು.
ಮಾರನೇ ದಿನ ಖುಷಿಯಲ್ಲಿಯೇ ಎದ್ದ ಆ ಮಹಿಳೆ ಮಾಲೀಕರ ಕುಟುಂಬದೊAದಿಗೆ ವಾಹನದಲ್ಲಿ ಹಲವೆಡೆ ಸುತ್ತಾಡಿ ವಾಸ್ತವ್ಯ ಮುಂದುವರಿಸಿದರು. ಪ್ರಕೃತಿ ಪರಿಸರವನ್ನು ಪ್ರೀತಿಸುವ ಮನೋಭಾವದ ಆಕೆ ಕೆಲವೊಮ್ಮೆ ಗಿಡಗಳನ್ನು- ಮರಗಳನ್ನು ತಬ್ಬಿ ಕಣ್ಣೀರು ಇಡುತ್ತಾ ಸೃಷ್ಟಿಯ ವೈಭವದ ಬಗ್ಗೆ ಮಾತನಾಡುತ್ತಿದ್ದರು. ವಾಸ್ತವ್ಯದ ಸಂದರ್ಭದಲ್ಲಿ ಬಾಡಿಗೆ ಕಾರು ಪಡೆದು ಕುಶಾಲನಗರ ಸುತ್ತಮುತ್ತಲಿನ ಪ್ರವಾಸಿ ಕೇಂದ್ರಗಳನ್ನು ವೀಕ್ಷಿಸಿ ಬಂದಿದ್ದರು. ಹಲವು ದಿನ ಈಜುಕೊಳ ಬಳಸಿ ಖುಷಿಯಲ್ಲಿ ಇದ್ದ ಆಕೆ ತಾ.೧೭ ರಂದು ಮೌನವಾಗಿಯೇ ನಿರ್ಗಮಿಸಿ ಮೈಸೂರು ತಲುಪಿದರು.
ದೂರು ದಾಖಲು
ಆ ಮಹಿಳೆ ಹಿಂತಿರುಗಿದ ಎರಡು ದಿನಗಳ ಬಳಿಕ ರಾಜ್ಯಸರ್ಕಾರದ ಗೃಹ ಇಲಾಖೆಗೆ ಆಘಾತಕಾರಿ ಮಾಹಿತಿಯೊಂದು ಕೇಂದ್ರ ಗೃಹ ಇಲಾಖೆಯಿಂದ ರವಾನೆ ಆಯಿತು. ಆ ವಿದೇಶಿ ಮಹಿಳೆ ದೆಹಲಿಯಲ್ಲಿರುವ ಅಮೇರಿಕಾ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ತಾನು ಕುಟ್ಟದ ಹೋಂ ಸ್ಟೇಯಲ್ಲಿ ಇದ್ದ ಸಂದರ್ಭ ತನಗೆ ಮತ್ತು ಬರಿಸುವ ಆಹಾರವನ್ನು ಯಾರೋ ನೀಡಿ ಲೈಂಗಿಕ ಕಿರುಕುಳ ನೀಡಿರುವುದಾಗಿಯೂ, ಈ ಬಗ್ಗೆ ಪ್ರಕರಣ ದಾಖಲಿಸುವಂತೆಯೂ ಮನವಿ ಮಾಡಿದ್ದರು. ಈ ಬಗ್ಗೆ ಅಗತ್ಯ ಸಾಕ್ಷಿಗಳನ್ನು ತಾನು ಸಂಗ್ರಹಿಸಿಟ್ಟುಕೊAಡಿರುವುದಾಗಿಯೂ ಆಕೆ ಸಂಬAಧಿಸಿದವರಿಗೆ ತಿಳಿಸಿದ್ದರು. ಅಮೇರಿಕಾ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ರಾಯಭಾರಿ ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿತು. ಕೇಂದ್ರ ಸರಕಾರ ರಾಜ್ಯಸರ್ಕಾರವನ್ನು ಸಂಪರ್ಕಿಸಿತು. ಬೆಂಗಳೂರಿನಿAದ ಜಿಲ್ಲೆಗೆ ಮಾಹಿತಿ ರವಾನೆ ಆಯಿತು.
ತಾ. ೧೯ರ ಭಾನುವಾರ ಹೋಂಸ್ಟೇಗೆ ತೆರಳಿದ ಪೊಲೀಸರು ಸಂಪೂರ್ಣ ವಿವರ ಸಂಗ್ರಹಿಸಿದರು. ವಿಚಾರಣೆಗೆಂದು ಮಾಲೀಕ ಮತ್ತು ಅಡುಗೆಯವನನ್ನು ಮಡಿಕೇರಿಗೆ ಕರೆತಂದ ಪೊಲೀಸರು ಇಬ್ಬರನ್ನೂ ರಾತ್ರಿ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
‘ಶಕ್ತಿ'ಗೆ ತಿಳಿದು ಬಂದ ಮಾಹಿತಿಯಂತೆ ಆಕೆಯ ಮೇಲೆ ಲೈಂಗಿಕ ಶೋಷಣೆ ನಡೆಸಿರುವುದಾಗಿ ಅಡುಗೆಯವನು ಒಪ್ಪಿಕೊಂಡಿದ್ದಾನೆ. ಹೋಂಸ್ಟೇಯ ಮಾಲೀಕ ವಿಶಾಲ್ ಪೊನ್ನಪ್ಪ ತನ್ನ ವಕೀಲ ಪಾಲೆಕಂಡ ಮೋಹನ್ ಅವರ ಮೂಲಕ ತಾ. ೨೨ ರಂದು (ಇಂದು) ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಈ ಬಗ್ಗೆ ವಕೀಲ ಮೋಹನ್ ಅವರನ್ನು ಸಂಪರ್ಕಿಸಿದಾಗ ಇದೊಂದು ಸೂಕ್ಷö್ಮ ವಿಚಾರವಾಗಿದ್ದು ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲದಿದ್ದು ಜಾಮೀನು ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು, ವಿದೇಶಿ ಸಂತ್ರಸ್ತೆಯ ಗುರುತು ರಕ್ಷಣೆ ಮಾಡುವ ಹಿನ್ನೆಲೆಯಲ್ಲಿ ಇಲಾಖೆ ಈ ಬಗ್ಗೆ ಯಾವುದೇ ವಿವರವನ್ನು ನೀಡಲಾಗುತ್ತಿಲ್ಲ ಎಂದರಲ್ಲದೆ ಆಕೆ ಇನ್ನೆರಡು ದಿನಗಳಲ್ಲಿ ವಿದೇಶಕ್ಕೆ ತೆರಳುತ್ತಿದ್ದು, ಅಲ್ಲಿಯವರೆಗೆ ಈ ಪ್ರಕರಣವನ್ನು ಗೌಪ್ಯವಾಗಿಡುವಂತೆ ಇಲಾಖೆಯಲ್ಲಿ ಮನವಿ ಮಾಡಿದ್ದಾರೆ ಎಂದರು. ಪೊಲೀಸ್ ಇಲಾಖೆ ಈ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸಲಿದೆ ಎಂದು ಅವರು ಹೇಳಿದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ಪ್ರತಿಕ್ರಿಯೆ ನೀಡಿ, ಪ್ರಕರಣ ತನಿಖಾ ಹಂತದಲ್ಲಿದ್ದು, ಸಂತ್ರಸ್ತೆ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವುದರಿಂದ ಆಕೆಯ ಹೇಳಿಕೆಯನ್ನು ತೆಗೆದುಕೊಳ್ಳಲಾಗಿಲ್ಲ, ಆಕೆ ಚೇತರಿಸಿಕೊಂಡ ಬಳಿಕ ಹೇಳಿಕೆ ಪಡೆದು ಪ್ರಕರಣದ ಸತ್ಯಾಸತ್ಯತೆಯ ಬಗ್ಗೆ ಮಾಹಿತಿಯನ್ನು ಬಹಿರಂಗಗೊಳಿಸುವುದಾಗಿ ತಿಳಿಸಿದರು.
ಮಾಧ್ಯಮಗಳಲ್ಲಿ ಈ ಬಗ್ಗೆ ಪ್ರಕಟಗೊಂಡಿರುವ ಮಾಹಿತಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ನಾಯಕ ಸಿ.ಟಿ.ರವಿ ಅವರು, ಭಾರತದ ಮೂಲತತ್ವ ಆದ ಅತಿಥಿ ದೇವೋಭವ ಎಂಬ ಮಾತಿಗೆ ಈ ಒಂದು ಪ್ರಕರಣ ಕಪ್ಪು ಚುಕ್ಕಿ ಆಗಿದೆ, ಈ ಘಟನೆ ಭಾರತದ ಮೌಲ್ಯಕ್ಕೂ ಧಕ್ಕೆ ತಂದಿದ್ದು ರಾಜ್ಯ ಸರಕಾರ ಶೀಘ್ರ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಕೋರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಠಿಣ ತನಿಖೆಗೆ ಆಗ್ರಹಿಸಬೇಕು; ಅಲ್ಲದೆ ಸುರಕ್ಷತೆ, ಘನತೆ ಮತ್ತು ಹೊಣೆಗಾರಿಕೆಯಲ್ಲಿ ಯಾವುದೇ ರಾಜಿ ಆಗಬಾರದು ಎಂದು ಆಗ್ರಹಿಸಿದ್ದಾರೆ.