ಮಡಿಕೇರಿ, ಏ. ೨೨: ನಗರದ ಜಿ.ಟಿ. ರಸ್ತೆಯ ಕೆಎಸ್ಆರ್ಟಿಸಿ ಬಸ್ ಡಿಪೋ ಬಳಿ ಕಾರೊಂದು ಸ್ಕೂಟಿಗೆ ಡಿಕ್ಕಿ ಪಡಿಸಿದ್ದು, ಸ್ಕೂಟಿಯಲ್ಲಿದ್ದ ಈರ್ವರಿಗೆ ಗಾಯಗಳಾಗಿವೆ. ಮೈಸೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಡಿಪೋ ಬಳಿ ಇದ್ದಕ್ಕಿದ್ದಂತೆ ಎಡಭಾಗದಿಂದ ಬಲಭಾಗಕ್ಕೆ ಚಲಿಸಿ ಎದುರುಗಡೆಯಿಂದ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿಯಾಗಿದೆ. ಡಿಪೋ ಬಳಿಯ ಖಾಸಗಿ ಹೊಟೇಲ್ ಸಿಬ್ಬಂದಿಗಳಾದ ಅಭಿಷೇಕ್ ಪಾಂಡೆ, ರಾಜನ್ ಸಿನ್ಹ ಅವರುಗಳು ಕೆಲಸ ಮುಗಿಸಿ ತೆರಳುತ್ತಿದ್ದ ಸಂದರ್ಭ ಎದುರಿನಿಂದ ಬಂದ ಕಾರು ಡಿಕ್ಕಿಯಾಗಿ ಈರ್ವರೂ ರಸ್ತೆಗುರುಳಿದ್ದಾರೆ. ಇಬ್ಬರಿಗೂ ತಲೆ, ಕೈ-ಕಾಲುಗಳಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕಾರು ಚಾಲಿಸುತ್ತಿದ್ದ ಮಂಗಳೂರಿನ ಇಸ್ಮಾಯಿಲ್ ನಿದ್ರೆಗೆ ಜಾರಿದ್ದರಿಂದ ಕಾರು ಬಲಕ್ಕೆ ಚಾಲಿಸಿ ಸ್ಕೂಟಿಗೆ ಡಿಕ್ಕಿ ಹೊಡೆದು ರಸ್ತೆ ಬದಿಯಲ್ಲಿದ್ದ ಆವರಣ ಗೋಡೆಗೆ ಡಿಕ್ಕಿಯಾಗಿದೆ. ಮಡಿಕೇರಿ ಸಂಚಾರಿ ಪೊಲೀಸ್ ಠಾಣಾಧಿಕಾರಿ ಶ್ರೀಧರ್ ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲಿಸಿ ಕಾರು ಚಾಲಕನ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.