ಸೋಮವಾರಪೇಟೆ, ಏ. ೨೧: ಸಮೀಪದ ತೋಳೂರುಶೆಟ್ಟಳ್ಳಿಯಲ್ಲಿ ಅನಾದಿ ಕಾಲದಿಂದಲೂ ಅನೂಚಾನವಾಗಿ ನಡೆದುಕೊಂಡು ಬಂದಿರುವ ಶ್ರದ್ಧಾಭಕ್ತಿಯ ಶ್ರೀ ಸಬ್ಬಮ್ಮ ದೇವರ ಸುಗ್ಗಿ ಉತ್ಸವ ಈಗಾಗಲೇ ಆರಂಭಗೊAಡಿದ್ದು, ತಾ. ೨೩ರಂದು ಬೀದಿ ರಾಜಾಂಗಣದಲ್ಲಿ ಮೆರವಣಿಗೆ ಹಾಗೂ ತಾ. ೨೪ರಂದು ಮಡೆ ಉತ್ಸವ ಜರುಗಲಿದೆ.

ಕಳೆದ ತಾ. ೭ರಿಂದಲೇ ಸುಗ್ಗಿ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ತಾ. ೭ರಂದು ನಿರ್ವಾಣ ಸ್ವಾಮಿ ಮಠ ಹಾಗೂ ಪುಷ್ಪಗಿರಿ ಬೆಟ್ಟಕ್ಕೆ ತೆರಳಿ ಮಳೆ ಕರೆಯುವ ಅಚರಣೆಯೊಂದಿಗೆ ಪ್ರಸಕ್ತ ಸಾಲಿನ ಸುಗ್ಗಿಗೆ ಚಾಲನೆ ನೀಡಿದ್ದು, ನಂತರ ಬೀರೇದೇವರ ಪೂಜೆ, ಗುಮ್ಮನ ಮಾರಿ ಪೂಜೆ, ಅಂಗಳ ಶುಚಿತ್ವ ಹಾಗೂ ಬಾವಿಗದ್ದೆ ಊಟ, ಊರೊಡೆಯನ ಪೂಜೆ, ಔತಣಮಕ್ಕಿ ಪೂಜೆ ಮತ್ತು ಅಗ್ನಿ ಕೊಂಡ ಹಾಯುವುದು, ತೆಂಗಿನ ಕಾಯಿಗೆ ಗುಂಡು ಹೊಡೆಯುವ ಪೂಜಾ ವಿಧಿವಿಧಾನಗಳು ನೆರವೇರಿವೆ.

ತಾ. ೨೩ರಂದು ಬೆಳಿಗ್ಗೆ ೬.೩೦ರಿಂದ ದೇವರ ಗಂಗಾ ಸ್ನಾನ, ಮುಡಿ ಹರಕೆ ಒಪ್ಪಿಸುವುದು, ಬೀದಿ ರಾಜಾಂಗಣದಲ್ಲಿ ದೇವರ ಮೆರವಣಿಗೆ, ಸನ್ನಿಧಿ ಪ್ರವೇಶ ಕಾರ್ಯಗಳು ನಡೆಯಲಿವೆ ಎಂದು ಶ್ರೀ ಸಬ್ಬಮ್ಮ ದೇವರ ಸಮಿತಿ ಅಧ್ಯಕ್ಷ ಡಿ.ಎನ್. ರಾಜಗೋಪಾಲ್ ತಿಳಿಸಿದ್ದಾರೆ.

ತಾ. ೨೪ರಂದು ಸಾವಿರಾರು ಮಂದಿ ಭಕ್ತಾದಿಗಳ ಸಮ್ಮುಖದಲ್ಲಿ ದೊಡ್ಡ ಸುಗ್ಗಿ ನಡೆಯಲಿದೆ. ಸಬ್ಬಮ್ಮ ದೇವಾಲಯದಲ್ಲಿ ಹಣ್ಣುಕಾಯಿ ಹಾಗೂ ಮಡೆ ಉತ್ಸವ ಜರುಗಲಿದ್ದು, ಸುಗ್ಗಿ ಕುಣಿತ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಸಕ್ತ ಸಾಲಿನ ಸುಗ್ಗಿ ದೇವರ ಕಾರ್ಯಗಳನ್ನು ಊರೊಳಗಿನಕೊಪ್ಪ ಗ್ರಾಮಸ್ಥರು ನೆರವೇರಿಸುತ್ತಿದ್ದು, ತಾ. ೨೬ರಂದು ಹೆದ್ದೇವರ ಬನಕ್ಕೆ ಹಾಲೆರೆಯುವ ಮೂಲಕ ಪ್ರಸಕ್ತ ಸಾಲಿನ ಸುಗ್ಗಿ ಉತ್ಸವ ಸಮಾಪ್ತಿಯಾಗಲಿದೆ ಎಂದು ಕಾರ್ಯದರ್ಶಿ ಹೆಚ್.ಜೆ. ಮಹೇಶ್ ಮಾಹಿತಿ ನೀಡಿದ್ದಾರೆ.