ಮಡಿಕೇರಿ, ಏ. ೨೦: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಿವಿ, ಮೂಗು, ಗಂಟಲು ವಿಭಾಗದಿಂದ ನಮ್ಮ ಧ್ವನಿಯ ಆರೈಕೆ ಎಂಬ ವಿಷಯದಡಿ ವಿಶ್ವ ಧ್ವನಿ ದಿನವನ್ನು ಆಚರಿಸಲಾಯಿತು.
ವೃತ್ತಿಪರ ಧ್ವನಿ ಬಳಕೆದಾರರಲ್ಲಿ ಧ್ವನಿಯ ಆರೋಗ್ಯದ ಮಹತ್ವ ಮತ್ತು ಧ್ವನಿಯ ಆರೈಕೆಯ ಅಗತ್ಯತೆಯ ಬಗ್ಗೆ ಅರಿವು ಮೂಡಿಸಲಾಯಿತು. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ, ವಾಕ್ ಮತ್ತು ಭಾಷೆ ತಜ್ಞರು ಡಾ. ದಿವ್ಯಾ ಸೇಠ್ ಅವರು ಧ್ವನಿಯ ಆರೈಕೆ, ಧ್ವನಿಯ ಅಸ್ವಸ್ಥತೆಗಳನ್ನು ಗುರುತಿಸುವುದು ಮತ್ತು ವಿಶೇಷವಾಗಿ ತಮ್ಮ ವೃತ್ತಿಗಳಲ್ಲಿ ಧ್ವನಿಯನ್ನು ಹೆಚ್ಚು ಅವಲಂಬಿಸಿರುವ ವ್ಯಕ್ತಿಗಳಲ್ಲಿ ಆರೋಗ್ಯಕರ ಧ್ವನಿ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ಸ್ನಾತಕೋತ್ತರ ಇಎನ್ಟಿ ವಿದ್ಯಾರ್ಥಿನಿ ಡಾ. ಪೂಜಾ ಧ್ವನಿಯ ವಿಕಸನವನ್ನು ವಿವರಿಸಿದರು. ೧೯೯೩ ರಿಂದ ಉತ್ಸಾಹದಿಂದ ಸಂಗೀತವನ್ನು ಬೋಧಿಸುತ್ತಿರುವ ಮತ್ತು ತಮ್ಮ ಸಮರ್ಪಣೆ ಹಾಗೂ ಬದ್ಧತೆಯಿಂದ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುತ್ತಿರುವ ಖ್ಯಾತ ಸಂಗೀತ ಶಿಕ್ಷಕಿ ವಿದುಷಿ ಸರೋಜ ಸುಧಾಕರ್ ಅವರನ್ನು ಸನ್ಮಾನಿಸಲಾಯಿತು.
ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್ ದೈನಂದಿನ ಜೀವನದಲ್ಲಿ ಧ್ವನಿ ಆರೋಗ್ಯದ ಮಹತ್ವ ಕುರಿತು ಮಾಹಿತಿ ನೀಡಿದರು. ಇಎನ್ಟಿ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥೆ ಡಾ. ಶ್ವೇತಾ ಮಾತನಾಡಿ, ಸಂವಹನ ಮತ್ತು ಗುರುತಿನ ಆಧಾರವಾಗಿ ಧ್ವನಿಯ ಮಹತ್ವ ಬಗ್ಗೆ ಮಾಹಿತಿ ನೀಡಿದರು.
ಉಪ-ಪ್ರಾಂಶುಪಾಲರಾದ ಡಾ. ಇಶಾ ರಾವ್, ಸಿಎಒ ರೋಹಿಣಿ ಮತ್ತು ಆರ್ಎಂಒ ಡಾ. ಧನಂಜಯ ಕುಮಾರ್ ಉಪಸ್ಥಿತರಿದ್ದರು. ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಪೂಜಾ (ಇಎನ್ಟಿ) ಪ್ರಾರ್ಥಿಸಿ, ಎಂಬಿಬಿಎಸ್ ವಿದ್ಯಾರ್ಥಿಗಳಾದ ಐಶ್ವರ್ಯ ಮತ್ತು ಪ್ರತೀಕ್ಷಾ ನಿರೂಪಿಸಿದರು. ಇಎನ್ಟಿ ಸಹಾಯಕ ಪ್ರಾಧ್ಯಾಪಕಿ ಡಾ. ನಳಿನಾ ವಂದಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಂಗೀತ ವಿದ್ಯಾರ್ಥಿಗಳು, ಗಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.