ಮಡಿಕೇರಿ, ಏ. ೨೦: ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣ ಅವರ ತತ್ವ ಮತ್ತು ಆದರ್ಶಗಳನ್ನು ಅಳವಡಿಸಿಕೊಂಡಲ್ಲಿ ಸಮಾಜದಲ್ಲಿ ಶಾಂತಿ, ಸಹನೆ ಮತ್ತು ಸಹಬಾಳ್ವೆ ಬೆಳೆಯುತ್ತದೆ ಎಂದು ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ನಡೆದ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಸ್ತುತ ದಿನಮಾನದಲ್ಲಿ ನುಡಿದಂತೆ ನಡೆಯುವವರು ಕಡಿಮೆ. ಬಸವ ಜಯಂತಿಯAದು ಕೆಲಸ ಮಾಡಬೇಕು. ಕಾಯಕ ವೃತ್ತಿ ಮಾಡಿ ಬಸವಣ್ಣ ಅವರಿಗೆ ಗೌರವ ಸಲ್ಲಿಸಬೇಕು, ಅದನ್ನು ಬಿಟ್ಟು ರಜೆ ನೀಡುವುದು ಸರಿಯಲ್ಲ. ಪ್ರತಿಯೊಬ್ಬರೂ ದುಡಿದು ಜೀವನ ನಡೆಸಬೇಕು. ಯಾರನ್ನೂ ಅವಲಂಬಿಸಬಾರದು. ಎಂದು ಕರೆ ನೀಡಿದರು.
ಎಲ್ಲರಲ್ಲಿಯೂ ನಡೆ, ನುಡಿ ಚೆನ್ನಾಗಿರಬೇಕು. ಬಸವಣ್ಣ ಅವರ ಮಾರ್ಗದರ್ಶನ ಮತ್ತು ಜೀವನ ಸಂದೇಶ ತಿಳಿದುಕೊಂಡು ನಡೆಯಬೇಕು. ಬಸವಣ್ಣ ಅವರು ೧೨ ನೇ ಶತಮಾನದಲ್ಲಿ ಎಲ್ಲಾ ಜನರನ್ನು ಅಪ್ಪಿಕೊಂಡು ಲಿಂಗ ದೀಕ್ಷೆ ನೀಡಿ, ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಆದರೆ ಇಂದಿಗೂ ಜಾತಿ ವ್ಯವಸ್ಥೆ ತೊಲಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಂದು ಬಸವಣ್ಣ ಕಾಯಕ ಮತ್ತು ದಾಸೋಹಕ್ಕೆ ಒತ್ತು ನೀಡಿದ್ದರು, ಶ್ರೀ ಶಿವಕುಮಾರ ಸ್ವಾಮೀಜಿ ಅವರು ಶಿಕ್ಷಣ ಮತ್ತು ದಾಸೋಹಕ್ಕೆ ಹೆಚ್ಚಿನ ಗಮನ ನೀಡಿ, ಬಸವಣ್ಣ ಅವರಂತೆ ನುಡಿದಂತೆ ನಡೆದಿರುವುದು ಇತಿಹಾಸ. ಆಧುನಿಕ ಯುಗದಲ್ಲಿ ಮಕ್ಕಳಿಗೆ ಮೊಬೈಲ್ ಬದಲು ವಚನ ಹೇಳಿಕೊಡಬೇಕು. ಬಸವ ವಚನ ತತ್ವ ಅಳವಡಿಸಿಕೊಂಡಲ್ಲಿ ಜೀವನ ಸಾರ್ಥಕ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ, ಬಸವಣ್ಣ ಅವರ ಚಿಂತನೆ ಮತ್ತು ಆದರ್ಶಗಳು ಸಾರ್ವಕಾಲಿಕವಾಗಿದ್ದು, ಎಲ್ಲೆಡೆ ಪಸರಿಸಿದೆ. ಜಗಜ್ಯೋತಿ ಬಸವೇಶ್ವರರು ಇಡೀ ವಿಶ್ವಕ್ಕೆ ಸಾಂಸ್ಕೃತಿಕ ನಾಯಕರಾಗಿದ್ದು, ಒಂದು ಸಾವಿರ ವರ್ಷಗಳ ಹಿಂದೆಯೇ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಕಾಯಕಯೋಗಿ ಎಂದು ಬಣ್ಣಿಸಿದ ಅವರು, ಅನುಭವ ಮಂಟಪದ ಮೂಲಕ ಹೆಣ್ಣು ಮಕ್ಕಳೂ ಸೇರಿದಂತೆ ಎಲ್ಲರಿಗೂ ಸಮಾನತೆ, ಸರಳ ಬದುಕು ನಡೆಸುವುದನ್ನು ಬಸವಣ್ಣ ಅವರು ಹೇಳಿದ್ದಾರೆ. ತೋರಿಕೆಯ ಭಕ್ತಿಗಿಂತ, ಮನ ಮೆಚ್ಚುವ ರೀತಿ ನಡೆದುಕೊಳ್ಳಬೇಕು. ಸಮರ್ಪನಾ ಭಾವ ಇರಬೇಕು ಎಂದು ಸಾರಿದ್ದಾರೆ ಎಂದರು.
ಕೊಡಗು ವಿಶ್ವ ವಿದ್ಯಾಲಯ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರ ಮಾತನಾಡಿ, ಸಾಂಸ್ಕೃತಿಕ ನಾಯಕ ಬಸವೇಶ್ವರರು ಕಾಯಕ ಮತ್ತು ದಾಸೋಹದ ಮೂಲಕ ಸಮಾಜದಲ್ಲಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಬಸವ ಧರ್ಮದ ಚಿಂತನೆಗಳು, ಶರಣರ ಪರಂಪರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು. ಬಸವಣ್ಣ ಅವರು ಸಮಾಜದಲ್ಲಿ ಪರಿವರ್ತನೆಗೆ ಶ್ರಮಿಸಿದ್ದಾರೆ. ನೈಜ ಸಮಾಜ ನಿರ್ಮಾಣ ಬಸವಣ್ಣ ಅವರ ಆಶಯವಾಗಿದೆ ಎಂದು ನುಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಎಚ್.ವಿ.ಶಿವಪ್ಪ ಮಾತನಾಡಿದರು.
ನಗರಸಭೆ ಅಧ್ಯಕ್ಷೆ ಪಿ.ಕಲಾವತಿ, ತಹಶೀಲ್ದಾರ್ ಶ್ರೀಧರ್, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಸಾಂಭಶಿವಯ್ಯ, ತಾಲೂಕು ಘಟಕದ ಅಧ್ಯಕ್ಷ ರುದ್ರಪ್ರಸನ್ನ, ಮಧುಸೂದನ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್, ಡಾ.ರವಿಕಿರಣ, ಡಾ.ರವಿಶಂಕರ, ವೆಂಕಟೇಶ, ಭಾಸ್ಕರ ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಸ್ವಾಗತಿಸಿದರು, ಮಣಜೂರು ಮಂಜುನಾಥ್ ನಿರೂಪಿಸಿದರು,
೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಶಿಕ್ಷಕರಾದ ಬಸವರಾಜು ಮತ್ತು ಬಿ.ಸಿ.ಶಂಕ್ರಯ್ಯ ತಂಡದವರು ನಾಡಗೀತೆ ಹಾಡಿದರು, ಮಂಜು ಭಾರ್ಗವಿ ತಂಡದವರು ವಚನ ಗಾಯನ ಹಾಡಿದರು, ಷಷ್ಠಿ ವಚನ ಗಾಯನ ಹಾಡಿದರು, ಕೆ.ಎಸ್.ಮೂರ್ತಿ ವಂದಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಕೋಟೆ ಆವರಣದಿಂದ ಗಾಂಧಿ ಭವನದವರಗೆ ಮೆರವಣಿಗೆ ನಡೆಯಿತು. ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಪೂಜಾ ಕುಣಿತ ತಂಡದ ಕಲಾವಿದರು ಪಾಲ್ಗೊಂಡು ಗಮನ ಸೆಳೆದರು.