ಚೆಟ್ಟಳ್ಳಿ, ಏ. ೨೦: ಚೆಟ್ಟಳ್ಳಿಯಲ್ಲಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ವಿಜ್ಞಾನ ಆಧಾರಿತ ಪೋಷಕಾಂಶ ಹಾಗೂ ಇತರ ಕೃಷಿ ಪರಿಕರಗಳ ಆಳವಡಿಕೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಅತಿಥಿಗಳು ಮಧುವನ, ಪಾಲಿಹೌಸ್ ಹಾಗೂ ತೆರೆದ ಸಭಾಂಗಣವನ್ನು ಉದ್ಘಾಟಿಸಿದರು. ಕೇಂದ್ರದಲ್ಲಿ ಬೆಳೆದ ಅರ್ಕಾ ಸುಪ್ರೀಮ್, ಅರ್ಕಾ ಕೂರ್ಗ್ ಬಟರ್ಫ್ರೂಟ್ ಸೇರಿದಂತೆ ವಿವಿಧ ಹಣ್ಣು-ಹಂಪಲುಗಳು, ಕೃಷಿಯನ್ನು ಬಾಧಿಸುವ ವಿವಿಧ ಕೀಟಗಳು, ಸಾವಯವ ಗೊಬ್ಬರಗಳು, ಪೋಷಕಾಂಶಗಳು, ಹಣ್ಣಿನ ಗಿಡಗಳು ಹಾಗೂ ಕೃಷಿಕರ ತಾಜಾ ಜೇನು ಪ್ರದರ್ಶನಕ್ಕಿಡಲಾಗಿತ್ತು.

ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಮುರಳಿಧರ ಬಿ.ಎಂ. ಸ್ವಾಗತಿಸಿ, ಸಂಸ್ಥೆಯ ೮೦ನೇ ವರ್ಷದ ಸ್ಥಾಪನಾ ಹಿನ್ನೆಲೆ ಕುರಿತು ಮಾಹಿತಿ ನೀಡಿದರು.

ಈ ವರ್ಷ ಒಂದು ಲಕ್ಷಕ್ಕೂ ಹೆಚ್ಚು ತೋಟಗಾರಿಕಾ ಗಿಡಗಳು, ೬೦ ಸಾವಿರ ಬಟರ್ಫ್ರೂಟ್ ಗಿಡಗಳು ಹಾಗೂ ೧೦ ಸಾವಿರ ಕೊಡಗಿನ ಕಿತ್ತಳೆ ಗಿಡಗಳನ್ನು ಮಾರಾಟ ಮಾಡಿ ಸುಮಾರು ರೂ.೧.೨೦ ಕೋಟಿ ಆದಾಯ ಗಳಿಸಿರುವುದಾಗಿ ಈ ಸಂದರ್ಭ ಅವರು ತಿಳಿಸಿದರು.

ಬೆಂಗಳೂರು ಐಸಿಏಆರ್ ನಿರ್ದೇಶಕರಾದ ಡಾ. ಎಸ್.ಎನ್. ಸುಶೀಲ್ ಮಾತನಾಡಿ, ಕೃಷಿ ಅಭಿವೃದ್ಧಿಯಲ್ಲಿ ತೋಟಗಾರಿಕೆ ಕ್ಷೇತ್ರದ ಪಾತ್ರ ಮಹತ್ವದ್ದಾಗಿದ್ದು, ರಾಸಾಯನಿಕ ಕೀಟನಾಶಕಗಳ ಬದಲಾಗಿ ಜೈವಿಕ ಕೀಟನಾಶಕಗಳನ್ನು ಬಳಸುವಂತೆ ರೈತರಿಗೆ ಸಲಹೆ ನೀಡಿದರು.

ಐಸಿಏಆರ್‌ನ ಮತ್ತೊಬ್ಬ ನಿರ್ದೇಶಕರಾದ ಡಾ. ಅರ್ಥಬಂಧು ಸಾಹು, ಮಣ್ಣಿನ ಫಲವತ್ತತೆ ಕಾಪಾಡಲು ಸಾವಯವ ಪದಾರ್ಥಗಳ ಬಳಕೆ ಅಗತ್ಯವೆಂದರು. ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆ ಮಣ್ಣಿನ ಗುಣಮಟ್ಟ ಹಾನಿ ಮಾಡುವುದಾಗಿ ಎಚ್ಚರಿಸಿದರು.

ಕೃಷಿ ನಿರ್ದೇಶನಾಲಯದ ನಿರ್ದೇಶಕರಾದ ವೆಂಕಟರಾಮ ರೆಡ್ಡಿ ಜೆ. ಪಾಟೀಲ್, ಚೆಟ್ಟಳ್ಳಿಯ ಕೇಂದ್ರವು ಇತರೆ ಕೃಷಿ ಕೇಂದ್ರಗಳಿಗೆ ಮಾದರಿಯಾಗಿದ್ದು, ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ರೂ.೩ ಲಕ್ಷದಿಂದ ರೂ.೧೫ ಲಕ್ಷದವರೆಗೆ ಸಬ್ಸಿಡಿ ದೊರೆಯಲಿದೆ ಎಂದು ಹೇಳಿದರು.

ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಹಾಗೂ ಪ್ರಗತಿಪರ ಬೆಳೆಗಾರ ಬೋಸ್ ಮಂದಣ್ಣ ಮಾತನಾಡಿ, ಜಾಗತಿಕ ಪರಿಸ್ಥಿತಿಗಳ ಪರಿಣಾಮವಾಗಿ ಗೊಬ್ಬರ ಹಾಗೂ ಇತರ ಉತ್ಪನ್ನಗಳ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದರು. ಕೊಡಗಿನ ಹವಾಮಾನದಲ್ಲಿ ಬದಲಾವಣೆ ಕಾಣಿಸುತ್ತಿದ್ದು, ನುರಿತ ಕಾರ್ಮಿಕರ ಕೊರತೆ ಕೃಷಿಗೆ ಸವಾಲಾಗಿದೆ ಎಂದು ಅಭಿಪ್ರಾಯಪಟ್ಟರು.

ಕೃಷಿ ನಿರ್ದೇಶಕರಾದ ಡಾ. ಪುತ್ರ ಜಿ.ಟಿ. ಅವರು, ಯೂರಿಯಾ, ಡಿಎಪಿ, ಎಂಒಪಿ ಗೊಬ್ಬರಗಳ ಕಚ್ಚಾ ವಸ್ತುಗಳಿಗೆ ವಿದೇಶ ಅವಲಂಬನೆ ಹೆಚ್ಚಿರುವುದರಿಂದ ಪರಿಸರ ಸ್ನೇಹಿ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ನಿರ್ದೇಶಕರಾದ ಡಾ. ತುಷಾರ್ ಕಾಂತಿ ಬೆಹೆರಾ ಮಾತನಾಡಿ, ಕೃಷಿ ಕೇಂದ್ರಗಳ ಅಭಿವೃದ್ಧಿಯಿಂದ ರೈತರ ಪ್ರಗತಿ ಸಾಧ್ಯವಾಗುತ್ತದೆ. ಕೊಡಗಿನ ಹವಾಮಾನಕ್ಕೆ ಅನುಕೂಲಕರವಾದ ಆಫ್-ಸೀಜನ್ ಲಿಚಿ ಬೆಳೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೊಂದಿದ್ದು, ಅದರ ಬೆಳವಣಿಗೆಗೆ ಒತ್ತು ನೀಡುವಂತೆ ಸಲಹೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಪೌಷ್ಟಿಕ ಕೈತೋಟ ಹಾಗೂ ವೈಜ್ಞಾನಿಕ ಜೇನುಸಾಕಾಣಿಕೆ ಕುರಿತ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಎಸಿ, ಎಸ್ಪಿ ಹಾಗೂ ಟಿಎಸ್ಪಿ ಯೋಜನೆಯ ಫಲಾನುಭವಿಗಳಿಗೆ ಗಿಡಗಳು ಹಾಗೂ ಕೃಷಿ ಪರಿಕರಗಳನ್ನು ವಿತರಿಸಲಾಯಿತು. ಇದೇ ವೇಳೆ ನಿವೃತ್ತ ಸಿಬ್ಬಂದಿ, ಪ್ರಗತಿಪರ ಕೃಷಿಕರು, ಅತ್ಯುತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗಳಾದ ಸಿ.ಎಂ ಮೋಹನ್, ಎ.ಎಂ ಜಗದೀಶ್ ಹಾಗೂ ಪತ್ರಕರ್ತ ಪುತ್ತರಿರ ಕರುಣ್ ಕಾಳಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಮುರುಳಿ ಬಿ.ಎಂ. ಸ್ವಾಗತಿಸಿದರು. ವಿಜ್ಞಾನಿ ಡಾ. ರಮೇಶ್ ಬಾಬು ವಂದಿಸಿದರು. ಡಾ. ಎ.ಟಿ. ರಾಣಿ ಕಾರ್ಯಕ್ರಮ ನಿರೂಪಿಸಿದರು.

- ಕರುಣ್ ಕಾಳಯ್ಯ