ಕೋವರ್ ಕೊಲ್ಲಿ ಇಂದ್ರೇಶ್

ಬೆAಗಳೂರು, ಏ. ೧೯: ಸ್ಥಿರ ಆಸ್ತಿಗಳಿಗೆ ಸಂಬAಧಿಸಿದ ನೋಂದಾಯಿತ ದಾಖಲೆಗಳನ್ನು ರದ್ದುಪಡಿಸುವ ನ್ಯಾಯಾಲಯದ ತೀರ್ಪುಗಳ ಅನುಷ್ಠಾನದಲ್ಲಿ ಉಂಟಾಗುತ್ತಿರುವ ಗೊಂದಲಕ್ಕೆ ತೆರೆ ಎಳೆಯುವ ಉದ್ದೇಶದಿಂದ ರಾಜ್ಯ ಹೈ ಕೋರ್ಟ್ ಮಹತ್ವದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಸಿವಿಲ್ ನ್ಯಾಯಾಲಯಗಳು ಮತ್ತು ಸಬ್-ರಿಜಿಸ್ಟ್ರಾರ್ ಕಚೇರಿಗಳ ಕಾರ್ಯವೈಖರಿಯಲ್ಲಿ ಏಕೀಕರಣ ತರಲು ಈ ಸೂಚನೆಗಳು ಸಹಾಯಕವಾಗಲಿವೆ ಎಂದು ನ್ಯಾಯಪೀಠ ತಿಳಿಸಿದೆ.

ಈ ಆದೇಶವು ಬೆಂಗಳೂರಿನ ಮಹದೇವಪುರದ ಸಬ್-ರಿಜಿಸ್ಟ್ರಾರ್ ನ್ಯಾಯಾಲಯದ ತೀರ್ಪನ್ನು ಜಾರಿಗೆ ತರಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೆ ಅಂತೋಣಿ ಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನೀಡಲಾಗಿದೆ. ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರ ಏಕಸದಸ್ಯ ಪೀಠವು ಪ್ರಕರಣದ ತಾತ್ಪರ್ಯವನ್ನು ಗಮನಿಸಿ, ಇಂತಹ ನಿರ್ಲಕ್ಷö್ಯ ಕ್ರಮಗಳನ್ನು ಆಕ್ಷೇಪಿಸಿದೆ. ನ್ಯಾಯಾಲಯದ ಗಮನಕ್ಕೆ ಬಂದಿರುವAತೆ, ಇತ್ತೀಚೆಗೆ ಹಲವಾರು ಪ್ರಕರಣಗಳಲ್ಲಿ ಸಬ್-ರಿಜಿಸ್ಟ್ರಾರ್‌ಗಳು ಸಿವಿಲ್ ನ್ಯಾಯಾಲಯಗಳ ತೀರ್ಪುಗಳನ್ನು ಅನುಷ್ಠಾನಗೊಳಿಸಲು ವಿಫಲರಾಗಿದ್ದಾರೆ. ಇದರಿಂದ ಜನರು ಮತ್ತೆ ನ್ಯಾಯಾಲಯದ ಮೆಟ್ಟಿಲೇರಬೇಕಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

ಮಾರ್ಗಸೂಚಿಗಳ ಪ್ರಕಾರ, ಸ್ಥಿರ ಆಸ್ತಿಯ ದಾಖಲೆಗಳನ್ನು ಅಮಾನ್ಯ ಅಥವಾ ರದ್ದುಗೊಳಿಸುವ ತೀರ್ಪು ನೀಡಿದಾಗ, ಸಂಬAಧಿತ ಸಿವಿಲ್ ನ್ಯಾಯಾಲಯವು ಅದರ ಪ್ರಮಾಣಿತ ಪ್ರತಿಯನ್ನು ಸಂಬAಧಪಟ್ಟ ಸಬ್-ರಿಜಿಸ್ಟ್ರಾರ್ ಕಚೇರಿಗೆ ಕಳುಹಿಸುವ ಜವಾಬ್ದಾರಿ ವಹಿಸಬೇಕು. ಸಾಮಾನ್ಯವಾಗಿ ತೀರ್ಪು ಹೊರಬಿದ್ದ ನಾಲ್ಕು ವಾರಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಸಂವಹನದಲ್ಲಿ ದಾಖಲೆ ಸಂಖ್ಯೆ, ನೋಂದಣಿ ದಿನಾಂಕ ಮತ್ತು ರದ್ದಾದ ದಾಖಲೆಗಳ ವಿವರಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕೆಂದು ಸೂಚಿಸಲಾಗಿದೆ.

ಇದೇ ವೇಳೆ, ಸಬ್-ರಿಜಿಸ್ಟ್ರಾರ್‌ಗಳಿಗೆ ನೀಡಿರುವ ಸೂಚನೆಗಳ ಪ್ರಕಾರ, ನ್ಯಾಯಾಲಯದ ಆದೇಶ ಬಂದ ನಾಲ್ಕು ವಾರಗಳೊಳಗೆ ಸಂಬAಧಿತ ದಾಖಲೆಗಳಲ್ಲಿ ತಿದ್ದುಪಡಿ ಮಾಡುವುದು ಕಡ್ಡಾಯವಾಗಿದೆ. ಯಾವುದೇ ಕಾರಣಕ್ಕೂ ತೀರ್ಪನ್ನು ನಿರ್ಲಕ್ಷಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ನ್ಯಾಯಾಲಯದಿಂದ ನೇರವಾಗಿ ಮಾಹಿತಿ ಬಾರದಿದ್ದರೂ, ಸಂಬAಧಿತ ವ್ಯಕ್ತಿ ಪ್ರಮಾಣೀಕೃತ ತೀರ್ಪು ಪ್ರತಿಯನ್ನು ಸಲ್ಲಿಸಿದರೆ ಅದನ್ನೂ ಪರಿಗಣಿಸಬೇಕು. ಈ ಸಂದರ್ಭದಲ್ಲಿ ಸಬ್-ರಿಜಿಸ್ಟ್ರಾರ್ ತೀರ್ಪಿನ ನೈಜತೆಯನ್ನು ಪರಿಶೀಲಿಸಿ, ನಿಯಮಾವಳಿ ಪ್ರಕಾರ ದಾಖಲೆಗಳಲ್ಲಿ ಅಗತ್ಯ ತಿದ್ದುಪಡಿ ಮಾಡಬೇಕೆಂದು ಪೀಠ ನಿರ್ದೇಶಿಸಿದೆ. ಮುಖ್ಯವಾಗಿ, ಸಿವಿಲ್ ನ್ಯಾಯಾಲಯದ ತೀರ್ಪಿನ ನಂತರ ಮತ್ತೆ ಬೇರೆ ಪ್ರಾಧಿಕಾರಗಳಿಂದ ಆದೇಶ ತರುವಂತೆ ಒತ್ತಾಯಿಸುವುದು ತಪ್ಪು ಎಂದು ನ್ಯಾಯಾಲಯ ತಿಳಿಸಿದೆ. ಈ ರೀತಿಯ ಅನಗತ್ಯ ವಿಳಂಬದಿAದ ನಾಗರಿಕರಿಗೆ ತೊಂದರೆ ಉಂಟಾಗುತ್ತದೆ ಎಂದು ಪೀಠ ಎಚ್ಚರಿಸಿದೆ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಮಹದೇವಪುರದ ನೋಂದಣಿ ಅಧಿಕಾರಿಗಳಿಗೆ ನ್ಯಾಯಾಲಯವು ರೂ. ೨೫,೦೦೦ ದಂಡವನ್ನೂ ವಿಧಿಸಿದೆ. ಈ ಆದೇಶವು ರಾಜ್ಯದಾದ್ಯಂತ ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ವೇಗವನ್ನು ಹೆಚ್ಚಿಸುವ ನಿರೀಕ್ಷೆಯಿದೆ.