ಕಣಿವೆ, ಏ. ೧೯: ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯನ್ನು ಗಡಿಪಾರು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿರುವ ವಿಶೇಷ ದಂಡಾಧಿಕಾರಿ ಆರ್.ಎನ್. ಬಿಂದುಮಣಿ ಆದೇಶಿಸಿದ್ದಾರೆ.
ಕುಶಾಲನಗರದ ದಂಡಿನಪೇಟೆ ನಿವಾಸಿ ಮನ್ಸೂರ್ ಆಲಿ (೪೩) ಎಂಬಾತನನ್ನು ಗದಗ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. ಕುಶಾಲನಗರ ಟೌನ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಳೆದ ಹಲವು ವರ್ಷಗಳಿಂದ ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿದರೂ ಕೂಡ ಬಿಡುಗಡೆಯಾಗಿ ಹೊರ ಬಂದಾಗಲೂ ಈತನ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಾಣದೇ ಪದೇ ಪದೇ ಕ್ರಿಮಿನಲ್ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಪ್ರಕರಣಗಳಲ್ಲಿ ಭಾಗಿಯಾಗುವ ಮೂಲಕ ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿಸಿ ಶಾಂತಿ ನೆಮ್ಮದಿ ಭಂಗ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದು, ಇದರಿಂದ ಸಾರ್ವಜನಿಕ ಆಸ್ತಿ ಮತ್ತು ಜೀವಕ್ಕೆ ಅಪಾಯ ಇರುವ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸ್ ಅಧಿನಿಯಮ ೧೯೬೩ ರ ಕಲಂ ೫೩ (ಬಿ) ರಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಂಡಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಬಳಿಕ ಮನ್ಸೂರ್ ಆಲಿ ವಿರುದ್ಧ ದಾಖಲಾಗಿರುವ ಎಲ್ಲಾ ಮಾಹಿತಿಗಳನ್ನು ಪರಿಗಣಿಸಿ ಕೊಡಗು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಬಿಂದುಮಣಿ ಆದೇಶಿಸಿದ್ದು, ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಕೊಡಗು ಜಿಲ್ಲೆಯನ್ನು ಪ್ರವೇಶಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಮನ್ಸೂರ್ ಅಲಿಯನ್ನು ಗದಗ ಪೊಲೀಸರಿಗೆ ಒಪ್ಪಿಸಲಾಗಿದೆ.