ಮಡಿಕೇರಿ ಏ.೧೭ : ಕೊಡಗು ಗೌಡ ಯುವ ವೇದಿಕೆಯ ವತಿಯಿಂದ ಗೌಡ ಜನಾಂಗ ಬಾಂಧವರಿಗಾಗಿ ಏರ್ಪಡಿಸಿರುವ ೨೭ನೇ ವರ್ಷದ ಕ್ರೀಡಾಕೂಟ "ಕುಟುಂಬ ೨೦೨೬" ಇದೇ ಮೇ ೧ರಿಂದ ೧೬ರ ವರೆಗೆ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿದ ಕೊಡಗು ಗೌಡ ಯುವ ವೇದಿಕೆಯ ಕಾರ್ಯದರ್ಶಿ ಪುದಿಯನೆರವನ ರಿಶಿತ್ ಮಾದಯ್ಯ; ೨೦೦೦ನೇ ಇಸವಿಯಲ್ಲಿ ಕೆದಂಬಾಡಿ ಕುಟುಂಬಸ್ಥರ ನೇತೃತ್ವದಲ್ಲಿ ಆರಂಭವಾದ ಗೌಡ ಜನಾಂಗದ ಕ್ರೀಡಾಕೂಟ ನಂತರದ ವರ್ಷಗಳಲ್ಲಿ ತುಮ್ತಜೆ ಗಣೇಶ್ ಅವರ ನೇತೃತ್ವದಲ್ಲಿ ಕೊಡಗು ಗೌಡ ಸಾಂಸ್ಕೃತಿಕ ಅಕಾಡೆಮಿ ಆಶ್ರಯದಲ್ಲಿ ಸಾಗಿ ಬಂತು. ೨೦೧೩ನೇ ಇಸವಿಯಿಂದ ಕೊಡಗು ಗೌಡ ಯುವ ವೇದಿಕೆ ಗೌಡ ಸಮುದಾಯಕ್ಕಾಗಿ ಈ ಕ್ರೀಡಾಕೂಟವನ್ನು ಮುಂದುವರಿಸುತ್ತಾ ಬಂದಿದೆ ಎಂದರು.

ಗಾಳಿಬೀಡಿನಲ್ಲಿ ಉದ್ಘಾಟನೆ

ಕಳೆದ ಮೂರು ವರ್ಷಗಳಿಂದ ಆಯೋಜಿಸುತ್ತಾ ಬಂದಿರುವ ಜಿಪಿಎಲ್ ಗೌಡ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಅತ್ಯಂತ ಯಶಸ್ಸನ್ನು ಕಂಡಿದೆ. ಕೊಡಗು ಗೌಡ ಯುವ ವೇದಿಕೆಯ ನೂತನ ಸಮಿತಿ ಬಾಳಾಡಿ ಮನೋಜ್ ಅವರ ಅಧ್ಯಕ್ಷತೆಯಲ್ಲಿ ಜನಾಂಗದ ಮಹತ್ವಾಕಾಂಕ್ಷೆಯ "ಗೌಡ ಒಲಿಂಪಿಕ್ಸ್ ೨೦೨೭" ರ ತಯಾರಿಯ ಪೂರ್ವಭಾವಿಯಾಗಿ ಈ ಬಾರಿ ೨೦೨೬ ರ ಕ್ರೀಡಾಕೂಟ ನಡೆಯಲಿದೆ. ವಿಶೇಷವಾಗಿ ಮೇ ೧ರಂದು ಗಾಳಿಬೀಡಿನಲ್ಲಿ ಕ್ರೀಡಾಕೂಟವನ್ನು ಉದ್ಘಾಟಿಸಲಾಗುವುದು, ಗಾಳಿಬೀಡು ಪ್ರೌಢಶಾಲಾ ಮೈದಾನದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ನಂತರ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ಐನ್‌ಮನೆಗಳ ರಸ್ತೆಯಲ್ಲಿ ಒಟ

ಮೊದಲಿಗೆ ಒಲಿಂಪಿಕ್ ನ ಸಾಂಪ್ರದಾಯಿಕ ಕ್ರೀಡೆಯಾದ ಕ್ರಾಸ್ ಕಂಟ್ರಿ ಮೂಲಕ ಈ ವರ್ಷದ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದೆ. ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಮಕ್ಕಳಿಗೆ ೩ ಕಿ.ಮೀ ಓಟ, ಮಹಿಳೆಯರಿಗೆ ೫ ಕಿ.ಮೀ ಓಟ ಹಾಗೂ ಪುರುಷರಿಗೆ ೮ ಕಿಲೋ ಮೀಟರ್ ಓಟವನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಈ ಎಂಟು ಕಿಲೋ ಮೀಟರ್ ಓಟದಲ್ಲಿ ಗಾಳಿಬೀಡಿನ ಗೌಡ ಸಮುದಾಯದ ೮ ಐನ್‌ಮನೆಗಳಾದ ಕೋಚನ, ಪೂಜಾರಿರ, ಉಡುದೋಳಿ, ಕೋಳುಮುಡಿಯನ, ಕರ್ಕರನ, ಕೊಂಬಾರನ, ಯಾಲದಾಳು, ಅಚ್ಚಪಟ್ಟಿರ ಕುಟುಂಬದ ಐನ್‌ಮನೆಗಳ ಮೂಲಕÀ ಸಾಗುವಂತೆ ದಾರಿಯನ್ನು ಸಜ್ಜುಗೊಳಿಸಲಾಗಿದೆ. ನಂತರ ಗೌಡ ಜನಾಂಗದ ಸಾಂಪ್ರದಾಯಿಕ ಕ್ರೀಡೆಯಾದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ. ೧೨ ಬೋರ್, ೦.೨೨ ರೈಫಲ್ ಹಾಗೂ ಏರ್ ರೈಫಲ್‌ನ ಸ್ಪರ್ಧೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಕ್ರೀಡಾಂಗಣದಲ್ಲಿ ಕ್ರಿಕೆಟ್

ಅದಾದ ನಂತರ ಮೇ ೨ನೇ ತಾರೀಖಿನಿಂದ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಕುಟುಂಬವಾರು ಸೂಪರ್ ೯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಆರಂಭವಾಗಲಿದೆ. ದಾಖಲೆ ಮಟ್ಟದಲ್ಲಿ ಅಂದರೆ ೨೫೦ ರಿಂದ ೩೦೦ ಕುಟುಂಬಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಹಾಕಿ ಪಂದ್ಯಾಟ

ಮೇ ೭ನೇ ತಾರೀಖಿನಿಂದ ಗೌಡ ಜನಾಂಗದ ಪ್ರಪ್ರಥಮ ಹಾಕಿ ಪಂದ್ಯಾಟ ಕುಟುಂಬವಾರು ೫+೨ ಮಂದಿಯ ರಿಂಕ್ ಹಾಕಿ ಆರಂಭವಾಗಲಿದೆ. ತಂಡದಲ್ಲಿ ಐದು ಮಂದಿ ಇದ್ದರೂ ಆಡಬಹುದಾಗಿದೆ. ಪ್ರಥಮ ವರ್ಷದಲ್ಲಿ ಬಹಳಷ್ಟು ಕುಟುಂಬಗಳು ಭಾಗವಹಿಸುವ ನಿರೀಕ್ಷೆಯಲ್ಲಿದ್ದೇವೆ. ಮೇ ೧೫ ಮತ್ತು ೧೬ರಂದು ಇನ್ನೂ ಬಹಳಷ್ಟು ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಇತರ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಗುವುದು. ಅಲ್ಲದೆ ಮೇ ೧೬ ರಂದು ಕೇರಂ ಪಂದ್ಯಾಟ ಕೂಡ ನಡೆಯಲಿದೆ ಎಂದರು.

ಒಲAಪಿಕ್‌ಗಾಗಿ ತಯಾರಿ

೨೦೨೭ರ ಮೊದಲ ಗೌಡ ಒಲಿಂಪಿಕ್‌ನ ಪ್ರಾಯೋಗಿಕ ತಯಾರಿಯಾಗಿ ೨೦೨೬ನೇ ಕ್ರೀಡಾಕೂಟ ಹೊರಹೊಮ್ಮಲಿದೆ. ೨೦೨೭ರಲ್ಲಿ ಇನ್ನೂ ಹೆಚ್ಚಿನ ಕ್ರೀಡಾಕೂಟಗಳನ್ನು ಒಳಗೊಂಡು ಮೊದಲ "ಗೌಡ ಒಲಿಂಪಿಕ್ ಕ್ರೀಡಾಕೂಟ"ವನ್ನು ಪ್ರಸ್ತುತಪಡಿಸಲಾಗುವುದು. ಮೂರು ವರ್ಷ ಯಶಸ್ಸನ್ನು ಕಂಡಿರುವ ಜಿಪಿಎಲ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಅನ್ನು ಈ ವರ್ಷ ಡಿಸೆಂಬರ್ ತಿಂಗಳಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಕೊಡಗು ಮತ್ತು ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಜನಾಂಗ ಬಾಂಧವರು ಈ ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ ಎಂದು ಹೇಳಿದರು.

"ಮಿಸ್ಟರ್ ಗೌಡ - ಮಿಸ್ ಗೌಡತಿ"

ಸಾಂಸ್ಕೃತಿಕÀ ಕಲರವಕ್ಕಾಗಿ ಒಂದು ಹೊಸ ಪ್ರಯತ್ನವಾಗಿ "ಮಿಸ್ಟರ್ ಗೌಡ ಮತ್ತು ಮಿಸ್ ಗೌಡತಿ" ಎಂಬ ಕಾರ್ಯಕ್ರಮವನ್ನು ಮೇ ೧೫ ಮತ್ತು ೧೬ ರಂದು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮ ಪುರುಷರು ಹಾಗೂ ಮಹಿಳೆಯರು ವೈಯಕ್ತಿಕವಾಗಿ ಭಾಗವಹಿಸಬಹುದಾದ ಕಾರ್ಯಕ್ರಮವಾಗಿದೆ. ಇದು ಅಥ್ಲೆಟಿಸಂ, ಗ್ಲಾಮರ್, ಉಡುಪು, ಭಾಷೆ, ಆಚಾರ ವಿಚಾರ, ಜನಾಂಗದ ಇತಿಹಾಸ ಮತ್ತು ತಂತ್ರಜ್ಞಾನಗಳನ್ನು ಒಳಗೊಂಡ ಪೈಪೋಟಿಯಾಗಿರುತ್ತದೆ ಎಂದು ತಿಳಿಸಿದರು.

ಆಕರ್ಷಕ ಬಹುಮಾನ

ಕುಟುಂಬವಾರು ಕ್ರಿಕೆಟ್ ಪಂದ್ಯಾಟಕ್ಕೆ ಆಕರ್ಷಕ ನಗದು ಹಾಗೂ ಟ್ರೋಫಿಗಳನ್ನು ನೀಡಿ ಗೌರವಿಸಲಾಗುವುದು. ರಿಂಕ್ ಹಾಕಿ ಪಂದ್ಯಾಟಕ್ಕೂ ಕೂಡ ಆಕರ್ಷಕ ನಗದು ಹಾಗೂ ಟ್ರೋಫಿಗಳನ್ನು ನೀಡಿ ಗೌರವಿಸಲಾಗುವುದು. ಗಾಳಿಬೀಡಿನಲ್ಲಿ ನಡೆಯುವ ಮೆರಥಾನ್ ಮತ್ತು ಶೂಟಿಂಗ್ ಪೈಪೋಟಿಗೆ ಕೂಡ ಆಕರ್ಷಕ ನಗದು ಹಾಗೂ ಟ್ರೋಫಿ ನೀಡಲಾಗುವುದು. ವಿಶೇಷ ಕಾರ್ಯಕ್ರಮ "ಮಿಸ್ಟರ್ ಗೌಡ ಹಾಗೂ ಮಿಸ್ ಗೌಡತಿ" ಸ್ಪರ್ಧೆಯಲ್ಲಿ ಕೂಡ ಆಕರ್ಷಕ ಪಾರಿತೋಷಕದಿಂದ ಗೌರವಿಸಿ ೨೦೨೬ ನೇ ಸಾಲಿನ ಗೌಡ ಜನಾಂಗದ ಶ್ರೇಷ್ಠ ಪುರುಷ ಮತ್ತು ಮಹಿಳೆ ಎಂಬ ಬಿರುದನ್ನು ನೀಡಲಾಗುವುದು. ಇನ್ನುಳಿದ ಎಲ್ಲಾ ಕ್ರೀಡಾಕೂಟಕ್ಕೂ ಬಹುಮಾನಗಳನ್ನು ವಿತರಿಸಲಾಗುವುದು ಎಂದು ರಿಶಿತ್ ಮಾದಯ್ಯ ವಿವರಿಸಿದರು.

ಕ್ರೀಡಾ ಹಬ್ಬಕ್ಕೆ ತಯಾರಿ

ಈಗಾಗಲೇ ಕುಟುಂಬವಾರು ಕ್ರಿಕೆಟ್ ಪಂದ್ಯಾಟ ಮತ್ತು ರಿಂಕ್ ಹಾಕಿ ಆಟದ ನೋಂದಾವಣಿ ಕಾರ್ಯ ಪ್ರಗತಿಯಲ್ಲಿದೆ. ಹೆಸರು ನೋಂದಾಯಿಸಲು ಇಚ್ಛಿಸುವ ಕುಟುಂಬಗಳು ೮೧೦೫೧೬೦೫೪೭, ೯೩೫೩೫೨೧೮೭೭, ೯೬೬೩೨೫೩೦೨೫ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಏಪ್ರಿಲ್ ೧೭ರಿಂದ "ಮಿಸ್ಟರ್ ಗೌಡ ಮತ್ತು ಮಿಸ್ ಗೌಡತಿ" ಯ ನೋಂದಾವಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಹೆಸರು ನೋಂದಾಯಿಸಲು ೯೦೦೮೧೯೮೯೫೫, ೭೬೭೬೪೫೨೧೦೭ ನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಗಾಳಿಬೀಡಿನಲ್ಲಿ ನಡೆಯುವ ಉದ್ಘಾಟನೆ ಕಾರ್ಯಕ್ರಮಕ್ಕೆ ಈಗಾಗಲೇ ಸ್ಥಳೀಯ ಗ್ರಾಮಸ್ಥರು ಉತ್ಸಾಹದಿಂದ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮೇ ೨ ರಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಕುಟುಂಬವಾರು ಕ್ರಿಕೆಟ್ ಪಂದ್ಯಾಟಕ್ಕೆ ಎರಡು ಮೈದಾನಗಳನ್ನು ಮಾಡಲಾಗುವುದು ಹಾಗೂ ರಿಂಕ್ ಹಾಕಿ ಪಂದ್ಯಾಟ ಒಂದು ಮೈದಾನದಲ್ಲಿ ನಡೆಯಲಿದೆ. ಪ್ರೇಕ್ಷಕರ ಅನುಕೂಲಕ್ಕಾಗಿ ಸುಸಜ್ಜಿತ ಆಸನ, ಕ್ಯಾಂಟೀನ್ ಮತ್ತು ಮಳಿಗೆಗಳ ವ್ಯವಸ್ಥೆ ಮಾಡಲಾಗುವುದು. ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಸಮಾಜದಲ್ಲಿ ಸಮಾರೋಪ

ಸಮಾರೋಪ ಸಮಾರಂಭಕ್ಕೆ ಮಡಿಕೇರಿಯ ಕೊಡಗು ಗೌಡ ಸಮಾಜದಲ್ಲಿ ಉತ್ತಮ ವೇದಿಕೆಯನ್ನು ಸಜ್ಜುಗೊಳಿಸಲಾಗುವುದು ಮತ್ತು ಅದೇ ವೇದಿಕೆಯಲ್ಲಿ "ಮಿಸ್ಟರ್ ಗೌಡ ಮತ್ತು ಮಿಸ್ ಗೌಡತಿ"ಯ ಕೊನೆಯ ಹಂತದ ಪೈಪೋಟಿಗಳು ನಡೆಯಲಿವೆ.

ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಜಿಲ್ಲೆಯ ಗಣ್ಯಾತಿಗಣ್ಯರು, ಕ್ರೀಡಾಪಟುಗಳು ಹಾಗೂ ಜನಾಂಗದ ಮೇರು ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಗೋಷ್ಠಿಯಲ್ಲಿ ಉಪಾಧ್ಯಕ್ಷ ಪರಿಚನ ಸತೀಶ್, ಕೋಶಾಧಿಕಾರಿ ದೇರಳ ನವೀನ್, ಕ್ರೀಡಾಧ್ಯಕ್ಷ ಕುಟ್ಟನ ಪ್ರಶಾಂತ್, ನಿರ್ದೇಶಕ ಕಲ್ಲುಮುಟ್ಲು ಅನುದೀಪ್ ಉಪಸ್ಥಿತರಿದ್ದರು.