ಮಡಿಕೇರಿ, ಏ. ೧೮: ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದಿಂದ ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿತ ಎರಡು ದಿನಗಳ ೧೦ನೇ ರಾಜ್ಯಮಟ್ಟದ ಮೊಗೇರ ಕ್ರೀಡಾಕೂಟಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಮಡಿಕೇರಿ ನಗರಸಭಾ ಅಧ್ಯಕ್ಷೆ ಪಿ. ಕಲಾವತಿ ಜ್ಯೋತಿ ಬೆಳಗುವ ಮೂಲಕ ಮೊಗೇರ ಕ್ರೀಡಾಕೂಟ ಸಮಾರಂಭಕ್ಕೆ ಚಾಲನೆಯನ್ನಿತ್ತರು. ಬಳಿಕ ಮಾತನಾಡಿದ ಅವರು, ಕೊಡಗು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಮೊಗೇರ ಸಮಾಜ ಬಾಂಧವರು ಕ್ರೀಡಾಕೂಟದ ಹಿನ್ನೆಲೆಯಲ್ಲಿ ಒಂದೆಡೆ ಸಮಾವೇಶಗೊಂಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ, ಕ್ರೀಡಾಕೂಟದ ಯಶಸ್ಸಿಗೆ ಶುಭ ಹಾರೈಸಿದರು.
ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಪಿ.ಬಿ. ಜನಾರ್ಧನ್ ಮಾತನಾಡಿ, ಕಳೆದ ಒಂದು ದಶಕದಿಂದ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಲ್ಲಿನ ಮೊಗೇರ ಸಮಾಜದವರನ್ನು ಒಗ್ಗೂಡಿಸುವ, ಆ ಮುಖೇನ ಸಮಾಜದ ಸಂಘಟನೆಯನ್ನು ಬಲಪಡಿಸುವ ಪ್ರಯತ್ನವಾಗಿ ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಪ್ರಸ್ತುತ ನಮ್ಮೆಲ್ಲರ ಪ್ರಯತ್ನಗಳಿಂದ ಸಂಘಟನೆ ಸದೃಢವಾಗಿ ಬೆಳೆಯುತ್ತಿರುವುದಾಗಿ ಮಾಹಿತಿಯಿತ್ತರು.
ರಾಜ್ಯಮಟ್ಟದ ಈ ಕ್ರೀಡಾಕೂಟದಲ್ಲಿ ಕೊಡಗನ್ನು ಒಳಗೊಂಡAತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಮತ್ತು ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಮೊಗೇರ ಸಮಾಜದವರು ಪಾಲ್ಗೊಂಡಿದ್ದಾರೆ. ಸಮುದಾಯದ ಸೌಹಾರ್ದ ಸಮ್ಮಿಲನ, ಸಂಘಟನೆ, ಕ್ರೀಡಾ ಪ್ರತಿಭೆಗಳ ಉತ್ತೇಜನಕ್ಕಾಗಿ ನಡೆಸುತ್ತಿರುವ ಕ್ರೀಡಾಕೂಟಕ್ಕೆ ಸರಕಾರ ಅಗತ್ಯ ನೆರವನ್ನು ನೀಡಬೇಕೆಂದು ಮನವಿ ಮಾಡಿದರು.
ಸಮಾಜದ ಕ್ರೀಡಾಧ್ಯಕ್ಷ ಚಂದ್ರ ಎಂ.ಜಿ. ಮಾತನಾಡಿ, ಎರಡು ದಿನಗಳ ಕಾಲ ಕ್ರಿಕೆಟ್ ಸೇರಿದಂತೆ ವೈವಿಧ್ಯಮಯವಾದ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಕ್ರೀಡಾ ಧ್ವಜಾರೋಹಣ
ಮೊಗೇರ ಸೇವಾ ಸಮಾಜದ ಲಾಂಛನವನ್ನು ಹೊಂದಿದ ಕ್ರೀಡಾ ಧ್ವಜವನ್ನು ಸಮಾಜದ ಪದಾಧಿಕಾರಿಗಳು ಆರೋಹಣ ಮಾಡುವುದರೊಂದಿಗೆ ಕ್ರೀಡಾಕೂಟ ಅಧಿಕೃತವಾಗಿ ಆರಂಭಗೊAಡಿತು. ಸಮಾರಂಭದಲ್ಲಿ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಸಲಹೆಗಾರ ಪಿ.ಎಂ. ರವಿ, ಜಿಲ್ಲಾ ಉಪಾಧ್ಯಕ್ಷ ಪಿ.ಎಂ. ದಾಮೋದರ್, ಮಡಿಕೇರಿ ತಾಲೂಕು ಅಧ್ಯಕ್ಷ ಪಿ.ಸಿ. ರಘ, ಸೋಮವಾರಪೇಟೆ ತಾಲೂಕು ಘಟಕದ ಉಪಾಧ್ಯಕ್ಷ ರಾಮಚಂದ್ರ, ವೀರಾಜಪೇಟೆ ತಾಲೂಕು ಅಧ್ಯಕ್ಷ ರಾಮು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಹಿಮಾನಿ ಹೆಬ್ಬೆಟ್ಟಗೇರಿ ಪ್ರಾರ್ಥಿಸಿದರು, ಕ್ರೀಡಾ ಕಾರ್ಯದರ್ಶಿ ಪಿ.ಸಿ. ರಮೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬೆಳಗ್ಗಿನ ಬಿರುಬಿಸಿಲ ವಾತಾವರಣದ ನಡುವೆ ಮೊಗೇರ ಕ್ರೀಡಾಕೂಟದ ಭಾಗವಾಗಿ ವಿವಿಧ ತಂಡಗಳ ನಡುವೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಗಳು ಕುತೂಹಲಕಾರಿಯಾಗಿ ನಡೆಯಿತು. ಪಂದ್ಯಾವಳಿಯಲ್ಲಿ ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳ ಒಟ್ಟು ೩೪ ತಂಡಗಳು ಪಾಲ್ಗೊಂಡಿವೆ.
ಕ್ರಿಕೆಟ್‌ನೊAದಿಗೆ ತಾ. ೧೯ ರಂದು (ಇಂದು) ವಾಲಿಬಾಲ್, ಮಹಿಳೆಯರ ಥ್ರೋಬಾಲ್, ಪುರುಷರ ಹಗ್ಗಜಗ್ಗಾಟ, ಮಹಿಳೆ ಯರ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿದ್ದು, ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ಬಳಿಕ ಸಮಾಜದವರಿಂದ ಭರತನಾಟ್ಯ, ನಾಟಕ, ಏಕಪಾತ್ರಾಭಿನಯ, ಜಾನಪದ ಗೀತೆ ಗಾಯನ, ಮಿಮಿಕ್ರಿ, ಗ್ರೂಪ್ ಡ್ಯಾನ್ಸ್, ಛದ್ಮವೇಷ, ಜಾನಪದ ನೃತ್ಯ, ಸಿನಿಮಾ ಹಾಡುಗಳಿಗೆ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಸಮಾಜದ ಸಲಹೆಗಾರ ಪಿ.ಎಂ. ರವಿ ತಿಳಿಸಿದ್ದಾರೆ.