ಕುಶಾಲನಗರ, ಏ. ೧೭: ಜನಪದದಿಂದ ಸೃಷ್ಟಿಸಲ್ಪಟ್ಟ ಕಲೆಗಳು ಕೇವಲ ಮನರಂಜನೆಯ ಸರಕಲ್ಲ, ನಮ್ಮ ಸಂಸ್ಕೃತಿಯ ಜೀವಾಳವಾಗಿವೆ ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮದ್ ಅಭಿಪ್ರಾಯಿಸಿದರು.

ಕುಶಾಲನಗರ ಕನ್ನಡ ಸಾಹಿತ್ಯ ಪರಿಷತ್ತು ಸ್ಥಳೀಯ ಅನುಗ್ರಹ ಕಾಲೇಜು ಸಂಭಾಗಣದಲ್ಲಿ ಆಯೋಜಿಸಿದ್ದ ಹಂಚೆಟಿರ ದಿ. ಕುಟ್ಟಪ್ಪ ಮತ್ತು ಕಾಮವ್ವ ದಂಪತಿ ಜ್ಞಾಪಕಾರ್ಥ ಜನಪದ ಕಲೆಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವ ತನ್ನ ಕಷ್ಟ-ಸುಖಗಳನ್ನು ವ್ಯಕ್ತಪಡಿಸುವುದಕ್ಕೆ ಭಾವನಾತ್ಮಕ ಸಂವಹನ ಕ್ರಿಯೆಯಾಗಿ ಜನಪದ ಕಲೆಯ ಪಾತ್ರ ಮುಖ್ಯವಾದುದು ಎಂದರು.

ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವಕಾಮತ್, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತೆಗೆಯಲು ಇಂತಹ ವೇದಿಕೆಗಳು ಸದ್ಬಳಕೆಯಾಗುತ್ತವೆ ಎಂದರು. ಕಸಾಪ ತಾಲೂಕು ಅಧ್ಯಕ್ಷ ಕೆ.ಎಸ್. ನಾಗೇಶ್ ಮಾತನಾಡಿ, ವಿದ್ಯಾರ್ಥಿಗಳು ಪ್ರತಿಭೆಗಳನ್ನು ಜಗತ್ತಿಗೆ ತೋರಿಸಬೇಕು ಎಂದು ಕರೆ ನೀಡಿದರು.

ದತ್ತಿ ದಾನಿಗಳಾದ ಫ್ಯಾನ್ಸಿ ಮುತ್ತಣ್ಣ ಮಾತನಾಡಿದರು. ವಿದ್ಯಾರ್ಥಿಗಳು ಜನಪದ ಹಾಡು ಹೇಳುವ ಮೂಲಕ ಗಮನ ಸೆಳೆದರು. ಕಾಲೇಜು ಪ್ರಾಂಶುಪಾಲೆ ಡಾ. ಬಿ.ಡಿ. ಚೈತ್ರ, ಕಸಾಪ ಕಾರ್ಯದರ್ಶಿ ಶೈಲ ಪ್ರೇಮಕುಮಾರ್, ಕೋಶಾಧಿಕಾರಿ ಉಮೇಶ್, ಹೆಬ್ಬಾಲೆ ಹೋಬಳಿ ಘಟಕದ ಅಧ್ಯಕ್ಷ ಎಂ.ಎನ್. ಮೂರ್ತಿ, ನಿರ್ದೇಶಕರಾದ ಎಂ.ಎನ್.ಕಾಳಪ್ಪ, ಪರಮೇಶ್ ಮತ್ತಿತರರು ಇದ್ದರು. ಉಪನ್ಯಾಸಕಿ ಲೀಲಾ ಕುಮಾರಿ ತೊಡಿಕಾನ ಕಾರ್ಯಕ್ರಮ ನಿರೂಪಿಸಿದರು.