ಮಡಿಕೇರಿ, ಏ. ೧೭: ಪ್ರತಿಯೊಬ್ಬರೂ ಮನೆಯಲ್ಲಿ ಪುಸ್ತಕ ಸಂಸ್ಕೃತಿಯನ್ನು ಬೆಳೆಸಿಕೊಳ್ಳಿ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಕರೆ ನೀಡಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಸೋಮವಾರಪೇಟೆ ಕೊಡವ ಸಮಾಜದಲ್ಲಿ ಏರ್ಪಡಿಸಿದ್ದ ೬ನೇ ಕೊಡವ ಪುಸ್ತಕ ಪತ್ತಾಯ ಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಹೇಶ್ ನಾಚಯ್ಯ, ಜ್ಞಾನವೊಂದಿದ್ದರೆ ಸಕಲ ಐಶ್ವರ್ಯ ಇದ್ದಂತೆ. ಜ್ಞಾನಾರ್ಜನೆಗೆ ಪುಸ್ತಕ ಸಂಸ್ಕೃತಿ ಅತ್ಯವಶ್ಯ ಎಂದರು.

ಸೋಮವಾರಪೇಟೆ ಕೊಡವ ಸಮಾಜವು ಈ ಭಾಗದ ಜನಾಂಗ ಬಾಂಧವರಿಗೆ ಐನ್‌ಮನೆ ಇದ್ದಂತೆ. ಇಂತಹ ಜಾಗದಲ್ಲಿ ಪುಸ್ತಕ ಪತ್ತಾಯ ಸ್ಥಾಪಿಸಲು ಮುಂದಾಗಿರುವ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ಹಾಗೂ ನಿರ್ದೇಶಕರ ಪುಸ್ತಕ ಪ್ರೀತಿಯಿಂದ ಕೊಡವ ಸಂಸ್ಕೃತಿಯು ಬೆಳಗಲಿ ಎಂದು ಹಾರೈಸಿದರು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಹಿರಿಯರಾದ ಕಲ್ಲೇಂಗಡ ಅಪ್ಪಚ್ಚು ಮಾತನಾಡಿ, ಸಾಹಿತ್ಯ ರಚನೆಯಿಂದಾಗಿ ಸಂಸ್ಕೃತಿ ಉಳಿಯಲು ಸಾಧ್ಯವಾಗಿದೆ. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ನೀಡಿ ಮುಂದಿನ ದಿನಗಳಲ್ಲಿ ಆದಷ್ಟು ತಮ್ಮ ಮೂಲ ಸ್ಳಳದಲ್ಲಿ ಇರುವಂತೆ ಹಿರಿಯರು ಪ್ರೋತ್ಸಾಹಿಸಬೇಕು. ಆ ಮೂಲಕ ತಮ್ಮ ಸಂಸ್ಕೃತಿಯ ಪರಿಸರದಲ್ಲಿ ಬೆಳೆಯುವಂತಾಗಬೇಕು ಎಂದರು.

ಮತ್ತೋರ್ವ ಅತಿಥಿ ಕವಯತ್ರಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮಾತನಾಡಿ ಇತ್ತೀಚೆಗೆ ನಮ್ಮ ಬದುಕಿನ ನಡೆ ತಪ್ಪುತ್ತಿದೆ. ಇದಕ್ಕೆ ಕಾರಣ ನಾವು ನಮ್ಮ ಬದುಕಿನ ಸಾಹಿತ್ಯವನ್ನು ಮರೆತಿರುವುದು. ಮಕ್ಕಳಿಗೆ ಸಾಹಿತ್ಯದ ಬಗ್ಗೆ ಅಭಿಮಾನ ಹುಟ್ಟಿಸುವ ಒಳ್ಳೆಯ ಮಾರ್ಗ ಅಕಾಡೆಮಿಯಿಂದ ಯೋಜಿತ ವಾಗಿರುವ ಪುಸ್ತಕ ಪತ್ತಾಯ. ಪುಸ್ತಕ ಓದುವ ಮೂಲಕ ಸಾಹಿತ್ಯ, ಸಂಸ್ಕೃತಿಯ ಮೇಲೆ ಅಭಿಮಾನ ಹೆಚ್ಚಿಸಿಕೊಳ್ಳುವಂತಾಗಬೇಕು ಎಂದರು. ಸಾಹಿತಿ ಕರೋಟಿರ ಶಶಿ ಸುಬ್ರಮಣಿ ವಿರಚಿತ, “ನಂಬಿಕೆ ಪುರಾಣತ್‌ರ ನಡುಲ್ ಕೊಡವಡ ಸಾಂಸ್ಕೃತಿಕ ಬದ್‌ಕ್” ಪುಸ್ತಕದ ೨ನೇ ಮುದ್ರಣವನ್ನು ಅಕಾಡೆಮಿ ವತಿಯಿಂದ ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ನಂತರ ಮಾತನಾಡಿದ ಶಶಿ ಸುಬ್ರಮಣಿ, ಕೊಡವ ಸಾಹಿತ್ಯ ರಚನೆಯಿಂದ ಕೊಡವ ಸಂಸ್ಕೃತಿ ಹಾಗೂ ನಿಜವಾದ ನಂಬಿಕೆಗಳು ಜೀವಂತ ಉಳಿದುಕೊಳ್ಳಲು ಕಾರಣವಾಗಿದೆ ಎಂದರು. ಅಕಾಡೆಮಿಯ ಮಾಜಿ ಸದಸ್ಯ ತೇಲಪಂಡ ಕವನ್ ಕಾರ್ಯಪ್ಪ “ೆಕೊಡವ ಪುಸ್ತಕತ್‌ರ ಅವಶ್ಯಕತೆ ಪಿಞ್ಞ ಪ್ರಯೋಜನ” ವಿಷಯವಾಗಿ ವಿಚಾರ ಮಂಡಿಸಿದರು. ಅಧ್ಯಕ್ಷತೆ ವಹಿಸಿದ್ದ ಕೊಡವ ಸಮಾಜದ ಅಧ್ಯಕ್ಷ, ವಕೀಲರಾದ ಮಾಳೇಟಿರ ಅಭಿಮನ್ಯು ಕುಮಾರ್ ಮಾತನಾಡಿ, ಕೊಡವ ಸಮಾಜದಲ್ಲಿ ಗ್ರಂಥಾಲಯ ಸ್ಥಾಪನೆ ನಮ್ಮ ಬಹುಕಾಲದ ಆಕಾಂಕ್ಷೆಯಾಗಿತ್ತು. ಕೊಡವ ಸಾಹಿತ್ಯ ಅಕಾಡೆಮಿಯ ಅತ್ಯುತ್ತಮವಾದ ಈ ಒಂದು ಯೋಜನೆಯಿಂದ ನಮ್ಮ ಆಸೆ ಈಡೇರಿದಂತಾಗಿದೆ ಎಂದರು.

ಈ ವೇಳೆ ಜಾನಪದ ಹಾಡುಗಾರ ನಾಪಂಡ ಚಿಣ್ಣಪ್ಪ ಸ್ವರಚಿತ ‘ಕೊಡವ್ ನಾಡ್’ ಗೀತೆಯನ್ನು ಹಾಡಿದರು. ಕೊಡವ ಸಮಾಜದ ವತಿಯಿಂದ ಸಮಾಜಕ್ಕಾಗಿ ದುಡಿಯುತ್ತಿರುವ ಹಾಗೂ ದುಡಿದ ಹಲವರನ್ನು ಗುರುತಿಸಿ ಗೌರವಿಸಲಾಯಿತು. ಮಚ್ಚಂಡ ಪ್ರಕಾಶ್ ಸ್ವಾಗತಿಸಿದರು. ಹಂಚೆಟ್ಟಿರ ಸಾರಿಕ ತಮ್ಮಯ್ಯ ಪ್ರಾರ್ಥಿಸಿದರು. ಕೊಡವ ಅಕಾಡೆಮಿ ಸದಸ್ಯೆ ಕಂಬೆಯAಡ ಡೀನಾ ಬೋಜಣ್ಣ ನಿರೂಪಿಸಿದರು. ವೇದಿಕೆಯಲ್ಲಿ ಕೊಡವ ಸಮಾಜದ ಕಾರ್ಯದರ್ಶಿ ಕೊಚ್ಚೆರ ಅನಿಲ್ ಕುಮಾರ್, ಖಜಾಂಚಿ ಪಾಡೆಯಂಡ ಮುತ್ತಣ್ಣ, ಕೊಡವ ಪೊಮ್ಮಕ್ಕಡ ಸಂಘದ ಅಧ್ಯಕ್ಷೆ ಬಾಚಿನಾಡಂಡ ಇಂದಿರಾ ಚಿಂಗಪ್ಪ ಇತರರು ಇದ್ದರು.