ಕಣಿವೆ, ಏ.೧೭: ಬೀದಿಯುದ್ದಕ್ಕೂ ಬೆಳೆದು ನಗು ಬೀರುತ್ತಾ ಹಸಿರು ಹೊದ್ದು ತಂಪು ನೀಡುತ್ತಿರುವ ಸಾಲು ಸಾಲು ಹೊಂಗೆ ಮರಗಳು....ಯುಗಾದಿಗೆ ಸುರಿದ ಮಳೆಯಿಂದಾಗಿ ತನ್ನ ತುಂಬೆಲ್ಲಾ ಹಸಿರೆಲೆಗಳನ್ನು ಹೊದ್ದು ಭೂಮಿಗೆ ಸೂರ್ಯನ ಕಿರಣಗಳು ತಾಗದಂತೆ ಕವಚವಾಗಿರುವ ರೆಂಬೆಗಳು.... ಹಣ್ಣೆಲೆ ಉದುರಿಸಿ ಹಸಿರೆಲೆಗಳೊಂದಿಗೆ ಘಮ ಘಮಿಸುವ ಹೂರಾಶಿಗೆ ಆಕರ್ಷಿತವಾಗುವ ದುಂಬಿಗಳ ಝೇಂಕಾರ....

ಇದು ಕುಶಾಲನಗರದ ಮುಳ್ಳುಸೋಗೆಯ ಓಂಕಾರ ಬಡಾವಣೆಯಲ್ಲಿ ಕಂಡುಬರುತ್ತಿರುವ ಚಿತ್ರಣ.

ಓಂಕಾರ ಬಡಾವಣೆಯ ವಾಣಿಜ್ಯ ತೆರಿಗೆ ಇಲಾಖೆಯ ನೌಕರರಾದ ಎಂ.ಕೆ ಧನರಾಜು ಹಾಗೂ ನಾಗಪ್ಪ ಅವರು ನೆಟ್ಟು ಬೆಳೆಸಿ ಮಕ್ಕಳಂತೆ ಆರೈಕೆ ಮಾಡಿರುವ ಪರಿಣಾಮ ಇಡೀ ಬೀದಿಗೆ ಬೀದಿಯೇ ಹಸಿರುಮಯವಾಗಿದೆ.

ಮಾತ್ರವಲ್ಲ, ಬೇಸಿಗೆಯ ನೆತ್ತಿ ಸುಡುವ ಬಿಸಿಲ ಝಳವನ್ನು ಜಳಪಿಸಿರುವ ಸಾಲು ಸಾಲು ಹೊಂಗೆ ಮರಗಳ ನೆರಳು ಸ್ವಾಭಾವಿಕವಾದ ಏರ್ ಕಂಡೀಷನ್ ಪರಿಸರವಾಗಿ ರೂಪುಗೊಂಡಿದೆ.

ಹಾಗಾಗಿ ಇಡೀ ಈ ಬಡಾವಣೆಯ ನಿವಾಸಿಗಳ ಬಳಕೆಯ ದ್ವಿಚಕ್ರ ಹಾಗೂ ಕಾರುಗಳಿಗೂ ಈ ಮರಗಳ ನೆರಳು ಇಂಪು ನೀಡಿವೆ.

ಹೊಂಗೆ ಮರಗಳಲ್ಲಿ ಅರಳಿ ನಿಂತಿರುವ ಹೂವಿನ ಪರಿಮಳವನ್ನು ಸವಿಯಲು ತಾ ಮುಂದು ನಾ ಮುಂದು ಎಂಬAತೆ ಜೇನು ಹುಳುಗಳು ಝೇಂಕಾರ ಹಾಡುತ್ತಾ ಬಂದು ಹೂವುಗಳಿಗೆ ಮುತ್ತಿಟ್ಟು ಸಾಗುತ್ತಿವೆ.

ನರೇಂದ್ರ ಮೋದಿ ಪ್ರಧಾನಿಯಾದ ನೆನಪಿಗೆ ಗಿಡ ನೆಟ್ಟಿದ್ದು..

ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ಸವಿನೆನಪಿಗೆ ೨೦೧೫ ರಲ್ಲಿ ನಾನು ಬಹಳ ಉತ್ಸುಕತೆಯಿಂದ ನಮ್ಮ ವಾರ್ಡಿನಲ್ಲಿ ಪರಿಸರ ಸ್ನೇಹಿಯಾದ ಸುಮಾರು ೧೫ಕ್ಕೂ ಹೆಚ್ಚು ಹೊಂಗೆ ಗಿಡಗಳನ್ನು ನೆಟ್ಟು ಪೋಷಿಸಲಾಯಿತು ಎಂದು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ನೌಕರ ನಾಗಪ್ಪ ಹೇಳುತ್ತಾರೆ.

ಬೇಸಗೆಯ ಬಿಸಿಲ ಈ ದಿನಗಳಲ್ಲಿ ಮೇಲೆ ಮತ್ತು ಕೆಳಗೆ ಸುಡುವ ಬಿಸಿಯ ವಾತಾವರಣದಲ್ಲಿ ಓಂಕಾರ ಬಡಾವಣೆಯ ಈ ಹೊಂಗೆ ಮರಗಳ ಸಾಲಿನ ಈ ನೆರಳ ಕೆಳಗೆ ಬಂದು ಅರೆಕ್ಷಣ ನಿಂತರೆ ದೇಹ ತಂಪಾಗುತ್ತದೆ. ಜೀವ ನಿಟ್ಟುಸಿರು ಬಿಡುತ್ತದೆ. ಹಾಗಾಗಿಯೇ ಈ ಭಾಗದಲ್ಲಿ ಹುಲ್ಲು ನೀರು ಅರಸುವ ಬೀಡಾಡಿ ಹಸುಗಳು ಮಧ್ಯಾಹ್ನದ ವೇಳೆ ಈ ನೆರಳ ವಾತಾವರಣ ಅರಸಿ ಬಂದು ಮಲಗಿ ವಿಶ್ರಾಂತಿ ಪಡೆದು ಮರಳುತ್ತವೆ ಎಂದು ಈ ಗಿಡ ಮರಗಳ ಪೋಷಕಿ ಕವಿತಾ ಧನರಾಜು ಮತ್ತು ಮಮತಾ ನಾಗಪ್ಪ ಹೇಳುತ್ತಾರೆ.

ಇದೇ ರೀತಿಯಲ್ಲಿ ಕುಶಾಲನಗರದ ಕಲಾಭವನದ ಬಳಿಯ ರಸ್ತೆಯ ಅಂಚಿನಲ್ಲಿ ಸುಮಾರು ಎಂಟು ಹೊಂಗೆ ಗಿಡಗಳನ್ನು ನೆಟ್ಟು ಬೆಳೆಸಿರುವ ಉದ್ಯಮಿ ಕೆ.ಪಿ ಪರಮೇಶ್ ಅವರ ಶ್ರಮದಿಂದಾಗಿ ಇಂದು ನೂರಾರು ಮಂದಿ ಶ್ರಮಿಕರು ಇಲ್ಲಿ ಬಂದು ವಿಶ್ರಾಂತಿ ಪಡೆಯುತ್ತಿರುವುದನ್ನು ಸ್ಮರಿಸಬಹುದು.

ಹಾಗಾಗಿ ಕುಶಾಲನಗರದ ಎಲ್ಲಾ ಬಡಾವಣೆಗಳಲ್ಲಿನ ನಿವಾಸಿಗಳು ಹೀಗೆಯೇ ಪರಿಸರ ಸ್ನೇಹಿ ಹೊಂಗೆ ಗಿಡಗಳನ್ನು ನೆಟ್ಟು ಶುದ್ಧ ಪರಿಸರ ನಿರ್ಮಾಣ ಮಾಡುವಲ್ಲಿ ಮುಂದಾದಲ್ಲಿ ಕಾವೇರಿ ನದಿ ದಂಡೆಯ ಕುಶಾಲನಗರದ ಪರಿಸರ ನಿತ್ಯ ಸ್ವಚ್ಚ ಹಾಗೂ ಸುಂದರ.

-ಕೆ.ಎಸ್. ಮೂರ್ತಿ