ಸೋಮವಾರಪೇಟೆ, ಏ. ೧೬: ಬೇಸಿಗೆ ಹೆಚ್ಚಾದಂತೆ ಎಳೆಯ ವಯಸ್ಸಿನ ಮಕ್ಕಳನ್ನು ಚಿಕನ್ ಪಾಕ್ಸ್ ಬಾಧಿಸುತ್ತಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗವಾಗಿ ಹರಡುತ್ತಿದೆ. ಎಳೆಯ ಮಕ್ಕಳು ನೋವಿನಿಂದ ಚೀರಾಡುವುದನ್ನು ಕಂಡು ಪೋಷಕರು ಮಮ್ಮುಲ ಮರುಗುತ್ತಿದ್ದಾರೆ.
ಸೋಮವಾರಪೇಟೆ ವ್ಯಾಪ್ತಿಯಲ್ಲಿ ಚಿಕನ್ ಪಾಕ್ಸ್ ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತಿದ್ದು, ಇಲ್ಲಿನ ಖಾಸಗಿ ಶಾಲೆಯೊಂದರ ೩೦ಕ್ಕೂ ಅಧಿಕ ಮಕ್ಕಳು ಇದಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆ ಪರೀಕ್ಷೆಯನ್ನೇ ಕೆಲ ದಿನಗಳ ಕಾಲ ಮುಂದೂಡಲಾಗಿತ್ತು ಎಂದು ಪೋಷಕರೋರ್ವರು ತಿಳಿಸಿದ್ದಾರೆ.
ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗವಾಗಿ ಹರಡುವ ಈ ಖಾಯಿಲೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಲಭಿಸುತ್ತಿಲ್ಲ ಎಂದು ಪೋಷಕರಾದ ಯೋಗೇಂದ್ರ ಆರೋಪಿಸಿದ್ದಾರೆ. ತನ್ನ ಮಗನಿಗೆ ಚಿಕನ್ಪಾಕ್ಸ್ ಆಗಿದ್ದರಿಂದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದ ಸಂದರ್ಭ ಕರ್ತವ್ಯದಲ್ಲಿದ್ದ ವೈದ್ಯರೋರ್ವರು, ಜ್ವರ ಹಾಗೂ ನೋವು ಕಡಿಮೆಯಾಗಲು ೨ ಮಾತ್ರೆಗಳನ್ನಷ್ಟೇ ನೀಡಿದ್ದಾರೆ. ಖಾಸಗಿ ಕ್ಲಿನಿಕ್ಗೆ ತೆರಳಿದ ಸಂದರ್ಭ ಮಾತ್ರೆ, ಟಾನಿಕ್, ಮುಲಾಮು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಖಾಸಗಿ ಕ್ಲಿನಿಕ್, ಆಸ್ಪತ್ರೆಗಳಿಗೆ ತೆರಳಿದರೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಿದೆ. ಇದು ಬಡವರಿಗೆ ಕಷ್ಟಕರವಾಗಿದೆ ಎಂದು ಕರ್ಕಳ್ಳಿ ಗ್ರಾಮದ ರಮೇಶ್ ಹೇಳಿದ್ದಾರೆ.
ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞವೈದ್ಯರಿಲ್ಲದೇ ತೀವ್ರ ಸಮಸ್ಯೆಯಾಗಿದೆ. ದೊಡ್ಡ ಕಟ್ಟಡಗಳಿದ್ದರೂ ಅಗತ್ಯವಿರುವ ವೈದ್ಯರುಗಳೇ ಇಲ್ಲದಂತಾಗಿದೆ. ಈ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು ವಾರಕ್ಕೆ ಒಂದು ದಿನ ಮಾತ್ರ ಬರುತ್ತಾರೆ. ಸಣ್ಣ ಮಕ್ಕಳಿಗೆ ಹುಷಾರಿಲ್ಲದ ಸಂದರ್ಭ ವಾರಗಟ್ಟಲೆ ಕಾಯಲು ಸಾಧ್ಯವೇ ? ಎಂಬುದು ಪೋಷಕರ ಪ್ರಶ್ನೆಯಾಗಿದೆ.
ಪ್ರತಿ ಸೋಮವಾರದಂದು ಮಡಿಕೇರಿಯಿಂದ ಆಗಮಿಸುವ ಮಕ್ಕಳ ತಜ್ಞರು ಸಂಜೆ ೩ರವರೆಗೆ ಮಾತ್ರ ರೋಗಿಗಳ ತಪಾಸಣೆಗೆ ಲಭ್ಯರಿರುತ್ತಾರೆ. ಇದರಿಂದಾಗಿ ತೀವ್ರ ಸಮಸ್ಯೆಯಾಗುತ್ತಿದ್ದು, ತಕ್ಷಣ ಖಾಯಂ ಮಕ್ಕಳ ತಜ್ಞರನ್ನು ನಿಯೋಜಿಸಲು ಶಾಸಕ ಡಾ. ಮಂತರ್ ಗೌಡ ಅವರು ಗಮನ ಹರಿಸಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.
ಇರುವ ಮರ್ನಾಲ್ಕು ವೈದ್ಯರು ಅತ್ಯುತ್ತಮವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಅಗತ್ಯವಾಗಿ ಬೇಕಾಗಿರುವ ಮಕ್ಕಳ ತಜ್ಞರು, ಅನಸ್ತೇಷಿಯಾ, ರೇಡಿಯಾಲಜಿಸ್ಟ್ ಇಲ್ಲದೇ ಸಮಸ್ಯೆಯಾಗಿದ್ದು, ಸಣ್ಣಪುಟ್ಟ ಖಾಯಿಲೆಗಳಿಗೂ ಸಹ ಖಾಸಗಿ ಆಸ್ಪತ್ರೆ, ಕ್ಲಿನಿಕ್, ಜಿಲ್ಲಾಸ್ಪತ್ರೆ, ಹೊರ ಜಿಲ್ಲೆಗಳ ಆಸ್ಪತ್ರೆಗೆ ಹೋಗಬೇಕಾಗಿದೆ. ಕೋಟ್ಯಾಂತರ ರೂಪಾಯಿ ವ್ಯಯಿಸಿ ಕಟ್ಟಡಗಳನ್ನು೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ನಿರ್ಮಿಸಿದ್ದರೂ ಅಗತ್ಯವಾಗಿರುವ ವೈದ್ಯರುಗಳ ನಿಯೋಜನೆ ಆಗದಿದ್ದರೆ ಪ್ರಯೋಜನ ಶೂನ್ಯ ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ. ಚಿಕನ್ಪಾಕ್ಸ್ ಸಮಸ್ಯೆಯ ಬಗ್ಗೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಜಮೀರ್ ಅಹ್ಮದ್ ಅವರ ಗಮನ ಸೆಳೆದ ಸಂದರ್ಭ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಚಿಕನ್ಪಾಕ್ಸ್ ಸಮಸ್ಯೆಗೆ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಲಭ್ಯವಿದೆ. ವಯಸ್ಕರಿಗೆ ಬಂದರೆ ಚಿಕಿತ್ಸಾ ವಿಧಾನ ಬೇರೆ ರೀತಿ ಇರುತ್ತದೆ. ಮಕ್ಕಳಿಗೆ ಚಿಕನ್ಪಾಕ್ಸ್ ಬಂದರೆ ಚಿಕಿತ್ಸಾ ಕ್ರಮ ವಿಭಿನ್ನವಾಗಿರಲಿದೆ. ಹೆಚ್ಚಿನ ಡೋಸೇಜ್, ಆ್ಯಂಟಿಬಯಾಟಿಕ್ಗಳನ್ನು ಹೆಚ್ಚಾಗಿ ನೀಡುವುದಿಲ್ಲ. ಅದಾಗಿಯೇ ಕಡಿಮೆಯಾಗುವವರೆಗೆ ಕಾಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಚಿಕನ್ಪಾಕ್ಸ್ ಬಂದರೆ ಭಯಪಡುವ ಅಗತ್ಯವಿಲ್ಲ. ಮೈಮೇಲೆ ಏಳುವ ಗುಳ್ಳೆಗಳನ್ನು ಕೈಯಿಂದ ಹಿಸುಕಬಾರದು. ವೈದ್ಯರನ್ನು ಭೇಟಿ ಮಾಡಿ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಬೇಕು. ಆಹಾರ ಕ್ರಮಗಳನ್ನು ಪಾಲಿಸಬೇಕು. ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ಎಚ್ಚರಿಕೆ ವಹಿಸಬೇಕು. ಸಾಮಾನ್ಯವಾಗಿ ೨ ವಾರಗಳ ಕಾಲ ಈ ವೈರಾಣು ದೇಹದಲ್ಲಿ ಇರುತ್ತದೆ. ನಂತರ ವಾಸಿಯಾಗುತ್ತದೆ. ಗರಿಷ್ಠ ೬ ತಿಂಗಳ ಒಳಗೆ ಕಲೆಗಳು ಮಾಯವಾಗುತ್ತವೆ ಎಂದು ಮಾಹಿತಿ ನೀಡಿದ್ದಾರೆ.
-ವಿಜಯ್ ಹಾನಗಲ್