ಕಣಿವೆ, ಏ. ೧೭: ಅಪಘಾತಕ್ಕೆ ಸಿಲುಕಿದ್ದ ಪುಟ್ಟ ಬಾಲಕನೋರ್ವನ ಅಂಗಾAಗಗಳನ್ನು ದಾನ ಮಾಡುವ ಮೂಲಕ ಪುಟ್ಟ ಮಗುವಿನ ಪೋಷಕರು ತುಂಬಿದ ಕಂಗಳೊAದಿಗೆ ಪುಟ್ಟ ಮಗುವಿನ ಸಾವಿಗೆ ಸಾರ್ಥಕತೆ ನೀಡಿದ ಪ್ರಸಂಗಕ್ಕೆ ಚಿಕ್ಕ ಅಳುವಾರದ ದಂಪತಿ ಸಾಕ್ಷಿಯಾಗಿದ್ದಾರೆ.
ಮೂಲತಃ ಚಿಕ್ಕ ಅಳುವಾರದ ರಮ್ಯಾ ಹಾಗೂ ರಜಿತ್ ದಂಪತಿಗಳ ನಾಲ್ಕರ ಎಳೆಯ ಪ್ರಾಯದ ಪುಟ್ಟ ಬಾಲಕ ಈ ಅನ್ವಿಕ್. ಈ ಪುಟ್ಟ ಪೋರ ಯಡವನಾಡು ಗ್ರಾಮದಲ್ಲಿ ನೆಲೆಸಿದ್ದ ತನ್ನ ಅಜ್ಜ - ಅಜ್ಜಿ ಹರಗ ತಿಮ್ಮಯ್ಯ ದಂಪತಿಯೊAದಿಗೆ ವಾಸವಿದ್ದ.
ಕಳೆದ ನಾಲ್ಕು ದಿನಗಳ ಹಿಂದೆ ಈ ಅನ್ವಿಕ್ ತನ್ನ ಅಜ್ಜಿಯೊಂದಿಗೆ ಸೋಮವಾರಪೇಟೆ ಪಟ್ಟಣಕ್ಕೆ ಹೋಗಿ ಯಡವನಾಡಿಗೆ ಮರಳಿ ಬಸ್ ಇಳಿದು ರಸ್ತೆ ದಾಟುತ್ತಿದ್ದಾಗ ಎದುರಿನಿಂದ ಬಂದ ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ. ಬಳಿಕ ಮೈಸೂರಿನ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ದುರದೃಷ್ಟವಶಾತ್ ಮೆದುಳಿನ ರಕ್ತಸ್ರಾವಕ್ಕೀಡಾಗಿ ಪುಟ್ಟ ಬಾಲಕ ಅಸು ನೀಗಿದ. ಬಳಿಕ ಅಜ್ಜ ಅಜ್ಜಿ ಹಾಗೂ ಬಾಲಕನ ಪೋಷಕರು ಮೃತ ಮಗುವಿನ ಅಂಗಾAಗಗಳು ಬೇರೊಂದು ಜೀವಗಳಿಗೆ ಬೆಳಕಾಗಲಿ ಎಂದು ನಿರ್ಧರಿಸಿ ಅಂಗಾAಗ ದಾನ ಮಾಡಿ ಸಾರ್ಥಕತೆ ಕಂಡಿದ್ದಾರೆ. ನಾಲ್ಕು ವರ್ಷ ಪ್ರಾಯದ ಈ ಪುಟ್ಟ ಬಾಲಕ ಅನ್ವಿಕ್, ಪೋಷಕರ ಹಾರೈಕೆ ಹಾಗೂ ಸಹಪಾಠಿಗಳೊಂದಿಗೆ ಆಟವಾಡುತ್ತಾ ಬಾಲ್ಯ ಕಳೆದು ಶಿಕ್ಷಣ ಪಡೆದು ಭವ್ಯ ಭವಿಷ್ಯದೊಂದಿಗೆ ಬಾಳಿ ಬದುಕಬೇಕಾಗಿತ್ತು. ಆದರೆ ವಿಧಿಯಾಟ, ಈತ ಜೀವಿಸುವುದು ಜವರಾಯನಿಗೆ ಹಿಡಿಸಲಿಲ್ಲ. ಅರಳುವ ಮುನ್ನವೇ ವಿಧಿಯ ಕ್ರೂರ ಅಟ್ಟಹಾಸಕ್ಕೆ ಸಿಲುಕಿ ಅಪಘಾತದಲ್ಲಿ ಉಸಿರು ಚೆಲ್ಲಿದ್ದಾನೆ ಈ ಬಾಲಕ. ಇದ್ದ ಒಬ್ಬನೇ ಮಗನ ಅಕಾಲಿಕ ಮರಣ ದುಃಖದ ಮಡುವಿನಲ್ಲಿ ಮುಳುಗಿಸಿದ್ದರೂ ಕೂಡ ಪೋಷಕರು ಅನ್ವಿಕ್‌ನ ಕಿಡ್ನಿ ಹಾಗೂ ಕಣ್ಣುಗಳನ್ನು ದಾನ ಮಾಡಿದ್ದಾರೆ. ಈ ಉದಾತ್ತ ಕಾರ್ಯದ ಮೂಲಕ ಮಾನವೀಯತೆ ಮೆರೆದು ಅನ್ವಿಕ್‌ನಿಗೆ ಸಾರ್ಥಕತೆ ತಂದುಕೊಟ್ಟಿದ್ದಾರೆ. ಮೃತ ಅನ್ವಿಕ್‌ನ ಮೃತದೇಹವನ್ನು ಇಂದು ಮಧ್ಯಾಹ್ನ ಯಡವನಾಡಿನ ತಾತನ ನಿವಾಸಕ್ಕೆ ತಂದು ಅಂತಿಮ ದರ್ಶನದ ನಂತರ ಸಂಜೆ ೫ ಗಂಟೆಗೆ ಸ್ವಗೃಹ ಚಿಕ್ಕ ಅಳುವಾರಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಲಾಯಿತು.